"ಸಿದ್ದರಾಮಯ್ಯ ಪರಿಚಯವೇ ನನಗಿಲ್ಲ" : ವಿಡಿಯೋದಲ್ಲಿದ್ದ ಮಹಿಳೆ ಸಿಸಿಬಿ ಮುಂದೆ ಹೇಳಿದ್ದೇನು?
ಸ್ಟಿಂಗ್ ವಿಡಿಯೋ ಯಾವಾಗ ಚಿತ್ರೀಕರಿಸಲಾಯಿತು, ಅದರ ಹಿಂದೆ ಯಾರಿದ್ದರು ಮತ್ತು ಮಹಿಳೆಗೆ ಯಾವುದೇ ಆಮಿಷ ಒಡ್ಡಲಾಗಿತ್ತೇ ಎಂಬುದರ ಕುರಿತು ಪೊಲೀಸರು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವಿಡಿಯೋದಲ್ಲಿರುವ ಮಹಿಳೆ ಹಾಗೂ ಕೃಪಾ ಆಳ್ವಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಸ್ಟಿಂಗ್ ವಿಡಿಯೋ ಯಾವಾಗ ಚಿತ್ರೀಕರಿಸಲಾಯಿತು, ಅದರ ಹಿಂದೆ ಯಾರಿದ್ದರು ಮತ್ತು ಮಹಿಳೆಗೆ ಯಾವುದೇ ಆಮಿಷ ಒಡ್ಡಲಾಗಿತ್ತೇ ಎಂಬುದರ ಕುರಿತು ಪೊಲೀಸರು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ವಿಚಾರಣೆ ವೇಳೆ ಮಹಿಳೆ ನೀಡಿರುವ ಹೇಳಿಕೆ ಹಾಗೂ ಕೃಪಾ ಆಳ್ವಾ ಅವರ ಪ್ರತಿಕ್ರಿಯೆ ಪ್ರಕರಣದ ಗಮನ ಸೆಳೆದಿದೆ.
ಸಿದ್ದರಾಮಯ್ಯ ಅವರನ್ನು ಎಂದಿಗೂ ಭೇಟಿಯಾಗಿಲ್ಲ ಎಂದ ಮಹಿಳೆ:
ಸ್ಟಿಂಗ್ ವಿಡಿಯೋದಲ್ಲಿರುವ ಮಹಿಳೆಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ, ವಿಡಿಯೋ ಚಿತ್ರೀಕರಣದ ಸಂದರ್ಭಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ವಿಡಿಯೋವನ್ನು ಯಾವಾಗ ಮಾಡಲಾಗಿತ್ತು, ಚಿತ್ರೀಕರಣದ ಸಮಯದಲ್ಲಿ ನಿಮ್ಮೊಂದಿಗೆ ಯಾರೆಲ್ಲ ಇದ್ದರು ಮತ್ತು ಈ ವಿಡಿಯೋದಲ್ಲಿ ಮಾತನಾಡಲು ನಿಮಗೆ ಯಾವುದಾದರೂ ಆಮಿಷ ಒಡ್ಡಲಾಗಿತ್ತೇ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಹೇಳಿಕೆ ದಾಖಲಿಸಿರುವ ಮಹಿಳೆ, ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ತಮಗೆ ಪರಿಚಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅವರು ಮಾಜಿ ಮುಖ್ಯಮಂತ್ರಿ ಎಂಬುದಷ್ಟೇ ತಮಗೆ ಗೊತ್ತು. ಸಿದ್ದರಾಮಯ್ಯ ಅವರನ್ನು ತಾವು ಎಂದಿಗೂ ಭೇಟಿಯಾಗಿಲ್ಲ ಎಂದು ಮಹಿಳೆ ಹೇಳಿರುವುದಾಗಿ ವರದಿಯಾಗಿದೆ.
ವಿಡಿಯೋದಲ್ಲಿ ತಾನು ಹೇಳಿರುವ ಮಾತುಗಳ ಬಗ್ಗೆಯೂ ಮಹಿಳೆ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ತನಗೆ ಏನು ಹೇಳಿಕೊಡಲಾಗಿತ್ತೋ ಅದನ್ನೇ ವಿಡಿಯೋದಲ್ಲಿ ಹೇಳಿದ್ದೇನೆ ಎಂದು ಅವರು ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ವಿಡಿಯೋ ಚಿತ್ರೀಕರಣದ ಉದ್ದೇಶ, ಅದರಲ್ಲಿನ ಹೇಳಿಕೆಗಳಿಗೆ ಸಂಬಂಧಿಸಿದ ಸಂದರ್ಭಗಳು ಹಾಗೂ ಮಹಿಳೆಗೆ ಮಾಹಿತಿ ನೀಡಿದವರು ಯಾರು ಎಂಬ ಅಂಶಗಳು ತನಿಖೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿವೆ.
ಕೃಪಾ ಆಳ್ವಾ ಅವರನ್ನು ಎರಡು ಗಂಟೆಗಳ ಕಾಲ ವಿಚಾರಣೆ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ ಅವರನ್ನೂ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ, ಸ್ಟಿಂಗ್ ವಿಡಿಯೋ ಮತ್ತು ಅದರ ಹಿಂದಿನ ಬೆಳವಣಿಗೆಗಳ ಕುರಿತು ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ ಪ್ರತಿಕ್ರಿಯಿಸಿರುವ ಕೃಪಾ ಆಳ್ವಾ, ಇದು ಸ್ಟಿಂಗ್ ಆಪರೇಷನ್ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಮಂಗಳೂರು ಮೂಲದ ಪತ್ರಕರ್ತರೊಬ್ಬರು ಕೆಲವರ ರಹಸ್ಯಗಳನ್ನು ಬಹಿರಂಗಪಡಿಸಬೇಕಿದೆ ಎಂಬ ವಿಚಾರವಾಗಿ ಚರ್ಚಿಸಿದ್ದರು ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ವಿಡಿಯೋದಲ್ಲಿರುವ ಮಹಿಳೆ ಯಾರು ಎಂಬುದು ತಮಗೆ ಗೊತ್ತಿಲ್ಲ. ವಿಡಿಯೋ ಕುರಿತು ಹೆಚ್ಚಿನ ಮಾಹಿತಿಯೂ ತಮ್ಮ ಬಳಿ ಇಲ್ಲ ಎಂದು ಕೃಪಾ ಆಳ್ವಾ ಹೇಳಿರುವುದಾಗಿ ವರದಿಯಾಗಿದೆ.