ರಾಜ್ಯದಲ್ಲಿ ಎರಡು ಭೀಕರ ರಸ್ತೆ ಅಪಘಾತಗಳು ಸಂಭವಿಸಿವೆ. ಚಿಕ್ಕಬಳ್ಳಾಪುರದಲ್ಲಿ ರಾತ್ರಿ ಟೀ ಕುಡಿಯಲು ಬೈಕ್‌ನಲ್ಲಿ ತೆರಳಿದ್ದ ನವದಂಪತಿ ಕಾರು ಡಿಕ್ಕಿಯಾಗಿ ದುರಂತ ಅಂತ್ಯ ಕಂಡಿದ್ದಾರೆ. ಮದುವೆಯಾಗಿ ಕೇವಲ ಮೂರು ತಿಂಗಳಾಗಿದ್ದ ಶಣ್ಮುಗ ಶ್ರೀನಿವಾಸ್ ಹಾಗೂ ಮಿಥುನಾ ಸಾವಿನಿಂದ ಎರಡು ಕುಟುಂಬಗಳಲ್ಲಿ ಶೋಕ ಮಡುಗಟ್ಟಿದೆ. ಇತ್ತ ತುಮಕೂರಿನ ಶಿರಾ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವತಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉದ್ಯೋಗದ ಸಂದರ್ಶನಕ್ಕೆಂದು ಬೆಂಗಳೂರಿಗೆ ಬರುತ್ತಿದ್ದ ಯುವತಿಯರ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ. ಅಷ್ಟಕ್ಕೂ ಈ ಅಪಘಾತಗಳು ಸಂಭವಿಸಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ನೈಟ್ ರೈಡ್‌ಗೆ ಹೋದ ನವದಂಪತಿ ಬಲಿ!
ರಾತ್ರಿಯ ಸಮಯದಲ್ಲಿ ಸ್ನೇಹಿತರ ಜೊತೆ, ಪ್ರೀತಿಪಾತ್ರರ ಜೊತೆ ಜಾಲಿ ರೈಡ್ ಹೋಗುವ ಕ್ರೇಜ್ ಹೆಚ್ಚಾಗ್ತಿದೆ. ಆದ್ರೆ ಇದೇ ಜಾಲಿ ರೈಡ್ ಈಗ ಒಂದು ಸುಂದರ ಸಂಸಾರವನ್ನೇ ನುಚ್ಚುನೂರು ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರದಲ್ಲಿರುವ ಯಂಗ್ ಸ್ಕೈ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ರಾತ್ರಿ ಟೀ ಕುಡಿಯಲೆಂದು ಬೈಕ್‌ನಲ್ಲಿ ಹೊರಟಿದ್ದ ನವದಂಪತಿಯ ಬೈಕ್‌ಗೆ ಒಡಿಶಾ ಮೂಲದ ಈಕೋ ಕಾರು ಡಿಕ್ಕಿ ಹೊಡೆದಿದೆ.
ಮೂರು ತಿಂಗಳ ಹಿಂದಷ್ಟೇ ಮದುವೆ!
ಈ ಭೀಕರ ಅಪಘಾತದಲ್ಲಿ ಶಣ್ಮುಗ ಶ್ರೀನಿವಾಸ್ ಹಾಗೂ ಮಿಥುನಾ ಮೃತಪಟ್ಟಿದ್ದಾರೆ. ಚಿನ್ನದ ವ್ಯಾಪಾರ ಮಾಡಿಕೊಂಡಿದ್ದ ಶ್ರೀನಿವಾಸ್ ಹಾಗೂ ಮಿಥುನಾ ಮದುವೆಯಾಗಿ ಕೇವಲ ಮೂರು ತಿಂಗಳಾಗಿತ್ತು. ನೂರಾರು ವರ್ಷ ಜೊತೆಯಾಗಿ ಬದುಕುವ ಕನಸು ಕಂಡಿದ್ದ ಜೋಡಿ, ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದೆ. ಸ್ಥಳದಲ್ಲೇ ಇಬ್ಬರೂ ಕೊನೆಯುಸಿರೆಳೆದಿದ್ದು, ಕಾರಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ಸುಮಾರು 5 ಗಂಟೆಗೆ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬಿಜಾಪುರದಿಂದ ಡಿಸೈರ್ ಕಾರಿನಲ್ಲಿ ಮೂವರು ಯುವತಿಯರು ಹಾಗೂ ಚಾಲಕ ಪವನ್ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಬಿ-ಫಾರ್ಮಾ ಪದವಿ ಮುಗಿಸಿದ್ದ ಯುವತಿಯರು ಉದ್ಯೋಗದ ಸಂದರ್ಶನಕ್ಕೆಂದು ಬೆಂಗಳೂರಿನತ್ತ ಹೊರಟಿದ್ದರು.
ಪ್ರಯಾಣದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಡಿಸೈರ್ ಕಾರು ಮೊದಲು ಡಿವೈಡರ್‌ಗೆ ಡಿಕ್ಕಿಯಾಗಿ, ಬಳಿಕ ಎದುರಿನಿಂದ ಬರುತ್ತಿದ್ದ ಟಾಟಾ ಕಾರಿಗೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ನಿಸರ್ಗ (20) ಹಾಗೂ ರೂಪಾ (21) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ ಮತ್ತೊಬ್ಬ ಯುವತಿ ಹಾಗೂ ಚಾಲಕ ಪವನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಟಾಟಾ ಕಾರಿನಲ್ಲಿದ್ದ ನಾಲ್ವರು ಕೂಡ ಗಾಯಗೊಂಡಿದ್ದು, ಎಲ್ಲ ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬಗಳಲ್ಲಿ ಆಕ್ರಂದನ
ಎರಡು ಪ್ರತ್ಯೇಕ ಅಪಘಾತಗಳು ಎರಡು ಕುಟುಂಬಗಳ ಬದುಕಿನಲ್ಲಿ ಕತ್ತಲೆ ಆವರಿಸುವಂತೆ ಮಾಡಿವೆ. ಒಂದೆಡೆ ಮದುವೆಯಾಗಿ ಮೂರು ತಿಂಗಳಲ್ಲೇ ನವದಂಪತಿ ಸಾವನ್ನಪ್ಪಿದ್ದರೆ, ಮತ್ತೊಂದೆಡೆ ಉದ್ಯೋಗದ ಕನಸು ಹೊತ್ತು ಬೆಂಗಳೂರಿಗೆ ಬರುತ್ತಿದ್ದ ಇಬ್ಬರು ಯುವತಿಯರು ದುರಂತ ಅಂತ್ಯ ಕಂಡಿದ್ದಾರೆ. ಘಟನೆ ಸ್ಥಳಗಳಿಗೆ ಶಿರಾ ಡಿವೈಎಸ್ಪಿ ಹಾಗೂ ಶಿರಾ ಗ್ರಾಮಾಂತರ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ರಸ್ತೆಯಲ್ಲಿ ಸಣ್ಣ ನಿರ್ಲಕ್ಷ್ಯವೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ರಾತ್ರಿ ಪ್ರಯಾಣವಾಗಲಿ, ದೂರದ ಪ್ರಯಾಣವಾಗಲಿ ವೇಗದ ಮಿತಿ ಪಾಲನೆ, ಸುರಕ್ಷಿತ ಚಾಲನೆ ಹಾಗೂ ಸಂಚಾರ ನಿಯಮಗಳ ಅನುಸರಣೆ ಅತ್ಯಗತ್ಯ. ಅಪಘಾತದಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳುವುದರ ಜೊತೆಗೆ, ರಸ್ತೆ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕಿದೆ.