SOCIAL MEDIA

Newsletter

PARTNER SITES
Select Language Select State

'ನಾನು ಬಾಯಿ ಬಿಟ್ರೆ ಮತ್ತೊಮ್ಮೆ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕುʼ! ಎಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್!

ಹನಿಟ್ರ್ಯಾಪ್ ವಿವಾದದ ನಡುವೆ ಎಚ್.ಡಿ. ಕುಮಾರಸ್ವಾಮಿ ಆರೋಪಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ. 'ನಮ್ಮಪ್ಪ ಆರ್‌ಎಸ್‌ಎಸ್‌ಗೆ ಹೆದರಿಲ್ಲ, ನಾನು ನಿಮಗೆ ಯಾಕೆ ಹೆದರಲಿ?' ಎಂದು ಪ್ರಶ್ನಿಸಿರುವ ಅವರು, ಏಕವಚನದ ಮಾತುಗಳಿಗೆ ಹೆದರುವುದಿಲ್ಲ ಎಂದಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸುವ ಬದಲು ದಾಖಲೆಗಳನ್ನ ನೀಡಿ, ತಪ್ಪು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Written By Puttaraj K Alur
Published: Oct 15, 2026, 12:36 PM IST | Updated: Oct 15, 2026, 12:50 PM IST
Image Credit: Priyank Kharge
Join

Priyank Kharge Hits Back at HD Kumaraswamy: ಕರ್ನಾಟಕ ರಾಜಕೀಯದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಹನಿಟ್ರ್ಯಾಪ್ ಮತ್ತು ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಏಕವಚನದಲ್ಲಿ ಮಾತನಾಡಿದರೆ ಹೆದರಿಕೊಳ್ಳುತ್ತೇನೆ ಎಂಬ ಭಾವನೆ ಯಾರಿಗೂ ಬೇಡ. ತಮ್ಮ ತಂದೆ ಆರ್‌ಎಸ್‌ಎಸ್‌ಗೆ ಹೆದರಿಲ್ಲ, ತಾವು ಕುಮಾರಸ್ವಾಮಿಗೆ ಹೆದರುವ ಪ್ರಶ್ನೆಯೇ ಇಲ್ಲವೆಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳನ್ನ ಒದಗಿಸಬೇಕು ಎಂದು ಒತ್ತಾಯಿಸಿರುವ ಪ್ರಿಯಾಂಕ್ ಖರ್ಗೆ, ಸುಮ್ಮನೆ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ದಾಖಲೆಗಳಿದ್ದರೆ ನೀಡಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮತ್ತೊಮ್ಮೆ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ!

ಹನಿಟ್ರ್ಯಾಪ್ ವಿವಾದದಲ್ಲಿ ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿರುವ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ದೂರಿನಲ್ಲಿ ಹೆಸರು ಪ್ರಸ್ತಾಪವಾದವರನ್ನ ವಿಚಾರಣೆಗೆ ಕರೆಯಬಾರದಾ ಎಂದು ಪ್ರಶ್ನಿಸಿರುವ ಅವರು, ಕುಮಾರಸ್ವಾಮಿಯಿಂದ ತಾವು ಏನನ್ನೂ ಕಲಿಯಬೇಕಾಗಿಲ್ಲ ಎಂದಿದ್ದಾರೆ. ಅಲ್ಲದೆ ತಾವು ಮಾತನಾಡಲು ಆರಂಭಿಸಿದರೆ ಮತ್ತೊಮ್ಮೆ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

'ನಮ್ಮಪ್ಪ RSSಗೆ ಹೆದರಿಲ್ಲ, ನಾನು ನಿಮಗೆ ಯಾಕೆ ಹೆದರಲಿ?'

ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಏಕವಚನದಲ್ಲಿ ಮಾತನಾಡಿದ ಮಾತ್ರಕ್ಕೆ ತಾವು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು. "ನಮ್ಮ ಅಪ್ಪನೇ ಆರ್‌ಎಸ್‌ಎಸ್‌ಗೆ ಹೆದರಿಕೊಳ್ಳಲಿಲ್ಲ. ನಾನು ನಿಮಗೆ ಯಾಕೆ ಹೆದರುತ್ತೇನೆ?" ಎಂದು ಪ್ರಶ್ನಿಸಿದ ಅವರು, ಬೆದರಿಕೆ ಮತ್ತು ಏಕವಚನದ ಮಾತುಗಳಿಂದ ತಮ್ಮನ್ನ ಹೆದರಿಸಬಹುದು ಎಂದು ಭಾವಿಸಿದ್ದರೆ ಅದು ಕೇವಲ ಕಲ್ಪನೆ ಎಂದರು.

ಗೌರವದಿಂದ ಮಾತನಾಡಿದರೆ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಲು ಸಿದ್ಧವಿದ್ದೇವೆ. ಆದರೆ ಬಾಯಿಗೆ ಬಂದಂತೆ ಮಾತನಾಡಿದರೆ ಅದೇ ಭಾಷೆಯಲ್ಲಿ ಉತ್ತರ ನೀಡುವುದಕ್ಕೂ ನಮಗೆ ಗೊತ್ತಿದೆ ಎಂದು ಎಚ್ಚರಿಸಿದರು. ಮಾತನಾಡುವಾಗ ಕನಿಷ್ಠ ಗೌರವ ಕಾಪಾಡಿಕೊಳ್ಳಬೇಕು. ಅನಗತ್ಯ ವೈಯಕ್ತಿಕ ಟೀಕೆಗಳನ್ನ ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ ಎಂಬ ಸಂದೇಶವನ್ನ ಪ್ರಿಯಾಂಕ್ ಖರ್ಗೆ ನೀಡಿದರು.

'ತಾಕತ್ತಿದ್ದರೆ ಬಂಧಿಸಿ' ಸವಾಲಿಗೆ ಪ್ರಿಯಾಂಕ್ ತಿರುಗೇಟು

ತಮ್ಮನ್ನ ಬಂಧಿಸುವ ಧೈರ್ಯವಿದ್ದರೆ ಬಂಧಿಸಲಿ ಎಂದು ಕುಮಾರಸ್ವಾಮಿ ಹಾಕಿರುವ ಸವಾಲಿನ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು. "ಬಂಧಿಸುವುದು ಹೇಗೆ? ಮೊದಲು ನಿಮ್ಮ ಬಳಿ ಇರುವ ದಾಖಲೆಗಳನ್ನ ಕೊಡಿ. ನೀವು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಬಂಧನವಾಗುತ್ತದೆ" ಎಂದು ಹೇಳಿದ ಅವರು, ತನಿಖೆಯ ಪ್ರಕ್ರಿಯೆಯನ್ನ ಕುಮಾರಸ್ವಾಮಿ ಅವರಿಂದ ಕಲಿಯಬೇಕಾದ ಅಗತ್ಯವಿಲ್ಲವೆಂದು ತಿರುಗೇಟು ನೀಡಿದರು. ಆರೋಪಗಳನ್ನ ಮಾಡುವುದಕ್ಕಿಂತ ಅವುಗಳಿಗೆ ಪೂರಕವಾದ ದಾಖಲೆಗಳನ್ನ ಒದಗಿಸುವುದು ಮುಖ್ಯ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ ಎಂದು ಹೇಳಿದರು.

'ನಾವು ತನಿಖೆ ಮಾಡುತ್ತಿಲ್ಲವೆಂದು ನಿಮಗೆ ಹೇಗೆ ಗೊತ್ತು?'

ಪೊಲೀಸ್ ತನಿಖೆಯ ಕುರಿತು ಕುಮಾರಸ್ವಾಮಿ ಮಾಡುತ್ತಿರುವ ಟೀಕೆಗಳಿಗೂ ಪ್ರಿಯಾಂಕ್ ಖರ್ಗೆ ಉತ್ತರಿಸಿದರು. "ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ನಾವು ತನಿಖೆ ಮಾಡುತ್ತಿಲ್ಲವೆಂದು ನಿಮಗೆ ಹೇಗೆ ಗೊತ್ತು?" ಎಂದು ಪ್ರಶ್ನಿಸಿದರು. ತನಿಖೆಯ ಭಾಗವಾಗಿ ಯಾರನ್ನ ವಿಚಾರಣೆಗೆ ಕರೆಯಬೇಕು, ಯಾವ ರೀತಿಯಲ್ಲಿ ಮಾಹಿತಿ ಸಂಗ್ರಹಿಸಬೇಕು ಎಂಬುದನ್ನ ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ. ಈ ವಿಚಾರದಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದರು. ತನಿಖೆ ನಡೆಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಹೀಗಿರುವಾಗ ತನಿಖೆಯ ಪ್ರತಿಯೊಂದು ಹಂತದ ಬಗ್ಗೆಯೂ ಪ್ರಶ್ನೆ ಮಾಡುವುದು ಸರಿಯಲ್ಲವೆಂದು ಕಿಡಿಕಾರಿದ್ದಾರೆ.

'ನಾಲ್ಕು ದಿನ ಸುಮ್ಮನಿರಿ, ಗಾಳಿಯಲ್ಲಿ ಗುಂಡು ಹಾರಿಸಬೇಡಿ'

ಕುಮಾರಸ್ವಾಮಿ ಅವರು ನಿರಂತರವಾಗಿ ಆರೋಪಗಳನ್ನ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ಯಾವುದೇ ಮಾಹಿತಿ ಅಥವಾ ಸಾಕ್ಷ್ಯಾಧಾರಗಳಿದ್ದರೆ ತನಿಖಾ ಸಂಸ್ಥೆಗಳಿಗೆ ನೀಡುವಂತೆ ಆಗ್ರಹಿಸಿದರು. "ಗಾಳಿಯಲ್ಲಿ ಗುಂಡು ಹಾರಿಸುವುದನ್ನ ನಿಲ್ಲಿಸಿ. ನಿಮ್ಮ ಬಳಿ ದಾಖಲೆಗಳಿದ್ದರೆ ಕೊಡಿ. ತನಿಖೆ ಮಾಡೋಣ. ತಪ್ಪು ಮಾಡಿರುವುದು ಕಂಡುಬಂದರೆ ಕ್ರಮ ಆಗುತ್ತದೆ" ಎಂದು ಹೇಳಿದರು. ಇದೇ ವೇಳೆ ನಾಲ್ಕು ದಿನ ಸುಮ್ಮನಿರುವಂತೆ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ ಅವರು, ಅನಗತ್ಯ ಆರೋಪಗಳು ಮತ್ತು ವೈಯಕ್ತಿಕ ಟೀಕೆಗಳಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.

'ನಿಮ್ಮ ಗೌರವ ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ'

ಕಳೆದ ಕೆಲವು ದಿನಗಳಿಂದ ಕುಮಾರಸ್ವಾಮಿ ಅವರಿಗೆ ತಮ್ಮ ಗೌರವವನ್ನ ತಾವೇ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳುತ್ತಿರುವುದಾಗಿ ಪ್ರಿಯಾಂಕ್ ಖರ್ಗೆ ತಿಳಿಸಿದರು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಗೌರವದಿಂದ ಮಾತನಾಡಬೇಕು. ತಮ್ಮ ತಂದೆಯನ್ನ ಅನಗತ್ಯವಾಗಿ ವಿವಾದಕ್ಕೆ ಎಳೆದುತರುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. "ನಮಗೂ ಮಾತನಾಡಲು ಬರುತ್ತದೆ. ನಿಮ್ಮ ನಾಲಿಗೆಯ ಮೇಲೆ ಹಿಡಿತ ಇರಲಿ. ನನ್ನ ಬಾಯಿ ತೆಗೆಸಬೇಡಿ" ಎಂದು ಎಚ್ಚರಿಕೆ ನೀಡಿದರು. ವೈಯಕ್ತಿಕ ನಿಂದನೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆರೋಪಗಳಿದ್ದರೆ ಅವುಗಳನ್ನ ಕಾನೂನಿನ ಚೌಕಟ್ಟಿನಲ್ಲಿ ಸಾಬೀತುಪಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಹನಿಟ್ರ್ಯಾಪ್ ವಿವಾದದ ನಡುವೆ ತೀವ್ರಗೊಂಡ ರಾಜಕೀಯ ಸಮರ

ಹನಿಟ್ರ್ಯಾಪ್ ಹಾಗೂ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸಾಮಾಜಿಕ ಜಾಲತಾಣ ಕಾರ್ಯಕರ್ತರನ್ನ ಪೊಲೀಸರು ಗುರಿಯಾಗಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಈ ಹಿಂದೆ ಆರೋಪಿಸಿದ್ದರು. ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದ ಅವರು, ಈ ವಿಚಾರವನ್ನ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸುವುದಾಗಿ ಎಚ್ಚರಿಸಿದ್ದರು. ಇದೀಗ ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವುದು ಉಭಯ ನಾಯಕರ ನಡುವಿನ ರಾಜಕೀಯ ವಾಕ್ಸಮರವನ್ನ ಮತ್ತಷ್ಟು ತೀವ್ರಗೊಳಿಸಿದೆ.

ಒಟ್ನಲ್ಲಿ ಆರೋಪಗಳಿಗೆ ಸಾಕ್ಷ್ಯ ಒದಗಿಸುವಂತೆ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದರೆ, ಪೊಲೀಸ್ ಕ್ರಮದ ಕುರಿತು ಕುಮಾರಸ್ವಾಮಿ ಪ್ರಶ್ನೆಗಳನ್ನ ಎತ್ತಿದ್ದಾರೆ. ಈ ವಿವಾದದಲ್ಲಿ ತನಿಖೆಯ ಅಧಿಕೃತ ಮಾಹಿತಿ ಮತ್ತು ಮುಂದಿನ ಬೆಳವಣಿಗೆಗಳು ಮಹತ್ವ ಪಡೆದುಕೊಳ್ಳಲಿವೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES