SOCIAL MEDIA

Newsletter

PARTNER SITES
Select Language Select State

ನಮ್ಮ ಮೆಟ್ರೋ ಪಿಂಕ್‌ ಲೈನ್‌: ಕಾಳೇನ ಅಗ್ರಹಾರದಿಂದ ತಾವರೆಕೆರೆ ಮೆಟ್ರೋ ನ.14ರಿಂದ ಸಾರ್ವಜನಿಕರ ಸಂಚಾರಕ್ಕೆ ಲಭ್ಯ- ಸಚಿವ ಕೃಷ್ಣ ಬೈರೇಗೌಡ

ಬಹು ನಿರೀಕ್ಷಿತ ʼನಮ್ಮ ಮೆಟ್ರೋʼ ಪಿಂಕ್‌ ಲೈನ್‌ ಇದೇ ನವೆಂಬರ್‌ 13ರಂದು ಲೋಕಾರ್ಪಣೆಗೆ ಸಜ್ಜಾಗಿದ್ದು, ನವೆಂಬರ್‌ 14ರಿಂದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಮೆಟ್ರೋ ಸಂಚಾರ ಸಾರ್ವಜನಿಕರಿಗೂ ಮುಕ್ತವಾಗಲಿದೆ.

Written By Yashaswini V
Published: Nov 11, 2026, 13:42 IST | Updated: Nov 11, 2026, 13:44 IST
Join

ಬೆಂಗಳೂರು: ನಮ್ಮ ಮೆಟ್ರೋದ ಬಹು ನಿರೀಕ್ಷಿತ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಸಂಪರ್ಕ ಬೆಸೆಯುವ ಪಿಂಕ್‌ ಲೈನ್‌ ಮೆಟ್ರೋ ನವೆಂಬರ್ 13 ರಂದು ಉದ್ಘಾಟನೆಗೊಳ್ಳಲಿದ್ದು, ನವೆಂಬರ್‌ 14ರಿಂದ ಸಾರ್ವಜನಿಕರ ಸಂಚಾರ ಲಭ್ಯವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ ಬಗ್ಗೆ ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ, ಕಾಳೇನ ಅಗ್ರಹಾರದಿಂದ, ತಾವರೆ ಕೆರೆ, ಸಿದ್ದಗುಂಟೆ ಪಾಳ್ಯ ವರೆಗಿನ ಮಾರ್ಗದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಬಹಳ ವರ್ಷಗಳ ನಿರೀಕ್ಷೆಯ ಪಿಂಕ್ ಲೈನ್ ಮೆಟ್ರೋ ಇದೇ ನವೆಂಬರ್ 13 ನೆಯ ತಾರೀಖು ಉದ್ಘಾಟನೆ ಆಗಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯಪಾಲರಾದ ಡಾ. ಸುಧಾ ಯಾದವ್‌ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್‌ ಲೈನ್‌ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಎಂಟು ನಿಮಿಷಕ್ಕೆ ಒಂದು ಮೆಟ್ರೋ ಟ್ರೈನ್‌ ಸೌಲಭ್ಯ:
ನವೆಂಬರ್‌ 14ರ ಬೆಳಗಿನ ಜಾವ 6 ಗಂಟೆಯಿಂದ ಈ ಪಿಂಕ್‌ ಲೈನ್ ಸಾರ್ವಜನಿಕರ ಉಪಯೋಗಕ್ಕೆ‌ ಲಭ್ಯವಾಗಲಿದೆ ಎಂದು ತಿಳಿಸಿದರು. ಪಿಂಕ್‌ ಲೈನ್‌ ಮಾರ್ಗದಲ್ಲಿ ಸದ್ಯಕ್ಕೆ ಏಳೂವರೆ ಕಿಮೀ ಮಾರ್ಗ ಮಾತ್ರ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಐದು ಟ್ರೈನ್ ಗಳು ಪಿಂಕ್ ಮಾರ್ಗದಲ್ಲಿ ಸಂಚರಿಸಲಿವೆ. ನಾಲ್ಕು ಟ್ರೈನ್‌ ರೆಗ್ಯುಲರ್‌ ಸರ್ವಿಸ್‌ನಲ್ಲಿ ಇದ್ದು, ಒಂದು ಟ್ರೈನ್‌ ಸ್ಡ್ಯಾಂಡ್‌ ಬೈನಲ್ಲಿ ಇರಲಿದೆ. ಈ ಮಾರ್ಗದಲ್ಲಿ ಎಂಟು ನಿಮಿಷಕ್ಕೆ ಒಂದು ಟ್ರೈನ್ ಈ ಮಾರ್ಗದಲ್ಲಿ ಕಾರ್ಯ ನಿರ್ವಹಿಸಲಿವೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಉಪಯೋಗ ನೋಡಿಕೊಂಡು ಇನ್ನೂ ಕಡಿಮೆ ನಿಮಿಷಗಳಲ್ಲಿ ಟ್ರೈನ್ ಲಭ್ಯತೆ ನೀಡಲಾಗುವುದು.

ಮೆಟ್ರೋ ಇಂಟರ್ ಚೇಂಜ್: 
ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಕಾಳೇನ ಅಗ್ರಹಾರ ಮಾರ್ಗಕ್ಕೆ ಇಂಟರ್‌ ಸೆಕ್ಷನ್‌ ಇರುವುದರಿಂದ ಇದು ಬಹಳ ಅನುಕೂಲವಾಗಲಿದೆ. ಪಿಂಕ್‌ ಲೈನ್‌ ಮೆಟ್ರೋದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್, ಜಯದೇವ ಬಳಿ‌ ಇಂಟರ್ ಚೇಂಜ್ ಮಾಡಿಕೊಂಡು ಸಾರ್ವಜನಿಕರು ಬಳಕೆ ಮಾಡಿಕೊಳ್ಳಬಹುದು ಎಂದವರು ಮಾಹಿತಿ ನೀಡಿದರು. ಪಿಂಕ್‌ ಲೈನ್‌ನಲ್ಲಿ ಇಂಟರ್‌ ಚೇಂಜ್‌ ಸೌಕರ್ಯ ಇರುವುದರಿಂದ ಬನ್ನೇರುಘಟ್ಟ ಕಡೆಯಿಂದ ಎಲೆಕ್ಟ್ರಾನಿಕ್‌ ಸಿಟಿ ಅಥವಾ ಎಚ್‌ಎಸ್‌ಆರ್‌ ಲೇಔಟ್‌ ಕಡೆಗೆ ತೆರಳುವವರಿಗೆ, ಸಿಲ್ಕ್‌ ಬೋರ್ಡ್‌ ಜಂಕ್ಷನ್‌, ಜಯನಗರ, ಬೆಂಗಳೂರು ಸಿಟಿ ಹಾಗೂ ವೈಟ್‌ಫೀಲ್ಡ್‌ವರೆಗೂ ಬೆಂಗಳೂರಿನಲ್ಲಿ ವಿವಿಧ ಪ್ರದೇಶಗಳಿಗೆ ಸಂಚರಿಸಲು ಈ ಪಿಂಕ್‌ ಲೈನ್‌ ಮಾರ್ಗದ ಜಯದೇವ ಇಂಟರ್‌ ಸೆಕ್ಷನ್‌ ಅನುಕೂಲ ಕಲ್ಪಿಸಲಿದೆ ಎಂದು ಆಶಿಸಲಾಗಿದೆ. ಇದು ಬೆಂಗಳೂರಿಗೆ ಸಂತೋಷದ ಸುದ್ದಿ ಎಂದರು.  

ಆರೆಂಜ್ ಲೈನ್‌ಗೂ ಗುದ್ದಲಿ ಪೂಜೆ:
ಈ ಪಿಂಕ್ ಲೈನ್ ಮೆಟ್ರೋ ಮಾರ್ಗದೊಂದಿಗೆ ನಾವು ನೂರ ಎಪ್ಪತ್ತು ಕಿ.ಮೀ. ಮೆಟ್ರೋ ಮಾರ್ಗವನ್ನು ತಲುಪಿದ್ದೇವೆ. ಜೆಪಿ ನಗರ 4 ನೇ ಹಂತದಿಂದ ಹೆಬ್ಬಾಳ ತಲುಪಲಿರುವ ಆರೆಂಜ್ ಲೈನ್‌ಗೂ ಸಹ ಇನ್ನು ಆರು ತಿಂಗಳಿನಲ್ಲಿ ಗುದ್ದಲಿ ಪೂಜೆ ಮಾಡಲಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಮೆಟ್ರೋ ಯೋಜನೆ ಬಂಡವಾಳ ಹೂಡಿಕೆಯಲ್ಲಿ ತಾರತಮ್ಯ:
ಮೆಟ್ರೋ ಯೋಜನೆಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 50:50 ಬಂಡವಾಳ ಹೂಡಿಕೆ ಅಂತ ಕೇವಲ ಹೇಳಿಕೊಳ್ಳಲು ಮಾತ್ರ ಇದೆ. ಆದ್ರೆ ಎಂಭತ್ತೊಂದು ಪರ್ಸೆಂಟ್ ಬಂಡವಾಳ ರಾಜ್ಯ ಸರ್ಕಾರ ಭರಿಸುತ್ತಿದೆ. ಇದಲ್ಲದೇ ರಾಜ್ಯ ಸರ್ಕಾರ ಮೆಟ್ರೋದಲ್ಲಿ ಆಗುವ ನಷ್ಟವನ್ನು ಕೂಡಾ ಭರಿಸಬೇಕಿದೆ. ಈ ಅನುಪಾತ ತಾರತಮ್ಯವನ್ನು ಸರಿಪಡಿಸಬೇಕು ಎಂದು ಕೃಷ್ಣ ಬೈರೇಗೌಡ ಇದೇ ವೇಳೆ ಆಗ್ರಹಿಸಿದರು.

ಮೆಟ್ರೋ ನಿಧಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ:
ಬೆಂಗಳೂರು ನಾನಾ ಭಾಗಗಳಿಂದ ಬಂದ ಕಂಪನಿಗಳಿಗೆ ಆಶ್ರಯ ತಾಣ. ಇಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ಆಗ್ತಿದೆ, ಲಾಭ ಕೂಡಾ ಬರುತ್ತೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಮೆಟ್ರೋಗಾಗಿ ಕೇಂದ್ರ ಸರ್ಕಾರ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಲು ಮುಂದಾಗಬೇಕು. ಈ ವಿಚಾರವನ್ನು ಪ್ರದಾನಿಗಳ ಗಮನಕ್ಕೆ ತರಲು ನಿರ್ಧಾರ ಮಾಡಿದ್ದೇವೆ. ಸಿಎಂ ನೇತೃತ್ವದಲ್ಲಿ ಪ್ರಧಾನಿಗಳಿಗೆ ಮನವಿ ಮಾಡುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES