ರಾಜ್ಯ ರಾಜಧಾನಿ ಬೆಂಗಳೂರಿನಿಂದ ವಿವಿಧ ಏರಿಯಾಗಳಿಗೆ ಹಾಗೂ ಅಕ್ಕ-ಪಕ್ಕದ ಊರುಗಳಿಗೆ ಮೆಟ್ರೋ ಕನೆಕ್ಟಿವಿಟಿಗಾಗಿ ಕಾರ್ಯಸಾಧ್ಯತಾ ವರದಿ ಸಿದ್ಧವಾಗಿದ್ದು, ಈ ಕುರಿತಂತೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಶುಭ ಸುದ್ದಿವೊಂದನ್ನು ನೀಡಿದೆ.
ಬಿಎಂಆರ್ಸಿಎಲ್ ಕೈಸೇರಿದ ಫಿಸಿಬಿಲಿಟಿ ಸ್ಟಡಿ ವರದಿ
ಬೆಂಗಳೂರಿನ 6 ಹೊಸ ಪ್ರದೇಶಗಳಿಗೆ ಮೆಟ್ರೋ ವಿಸ್ತರಣೆ ಕಾರ್ಯಸಾಧ್ಯತಾ ವರದಿ ಬಿಎಂಆರ್‌ಸಿಎಲ್ ಕೈಸೇರಿದ್ದು, ಶೀಘ್ರದಲ್ಲೇ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆದಿದೆ. ಆ ನಂತರ ಡಿಪಿಆರ್ ಸಿದ್ಧಪಡಿಸಲಿದೆ.
ಬೆಂಗಳೂರಿನಿಂದ 6 ಏರಿಯಾ, ಊರುಗಳಿಗೆ ಮೆಟ್ರೋ ಸಂಚಾರ:
ಲಭ್ಯವಿರುವ ಮಾಹಿತಿಗಳ ಪ್ರಕಾರ, ನಮ್ಮ ಮೆಟ್ರೋ ಬೆಂಗಳೂರಿನಿಂದ ಬಿಡದಿ, ಹಾರೋಹಳ್ಳಿ, ತುಮಕೂರು ಸೇರಿದಂತೆ 6 ಹೊಸ ಏರಿಯಾಗಳಿಗೆ ನಮ್ಮ ಮೆಟ್ರೋ ಸಂಚಾರ ವಿಸ್ತರಣೆಗೆ ಯೋಜನೆ ರೂಪಿಸಿದೆ. ಇದರನ್ವಯ ಚಲ್ಲಘಟ್ಟ-ಬಿಡದಿ, ಸಿಲ್ಕ್ ಇನ್‌ಸ್ಟಿಟ್ಯೂಟ್-ಹಾರೋಹಳ್ಳಿ ಸೇರಿದಂತೆ ಪ್ರಮುಖ ಕೈಗಾರಿಕಾ ವಲಯಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಆರು ಮಾರ್ಗಗಳಲ್ಲಿ ಮೆಟ್ರೋ ವಿಸ್ತರಣೆಗೆ ಪ್ಲಾನ್ ಮಾಡಲಾಗುತ್ತಿದೆ.
ಈ ತಿಂಗಳ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಬಿಎಂಆರ್ಸಿಎಲ್ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಆ ವರದಿಯನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಕಳುಹಿಸಲಿದೆ.
ನಗರದ ಪ್ರಮುಖ ಕೈಗಾರಿಕಾ ವಲಯಗಳಿಗೆ ಸಂಪರ್ಕ ಕಲ್ಪಿಸುವುದಕ್ಕೆ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಈ ಮೆಟ್ರೋ ವಿಸ್ತರಣೆ ತುಂಬಾ ಸಹಕಾರಿ ಆಗುತ್ತದೆ. ಆರು ಪ್ರಮುಖ ನಮ್ಮ ಮೆಟ್ರೋ ಮಾರ್ಗಗಳ ವಿಸ್ತರಣೆಗೆ ಪ್ರಸ್ತಾಪ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಸ್ತಾವಿತ 6 ಮಾರ್ಗಗಳು ಯಾವವು?
1. ಚಲ್ಲಘಟ್ಟದಿಂದ ಬಿಡದಿ ವರೆಗೆ, ಮಾರ್ಗದ ಅಂದಾಜು ಉದ್ದ 15 ಕಿ.ಮೀ (ಸದ್ಯ ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)
2. ಸಿಲ್ಕ್ ಇನ್ಸ್ಟಿಟ್ಯೂಟ್ ಟು ಹಾರೋಹಳ್ಳಿ ವರೆಗೆ, ಮಾರ್ಗದ ಅಂದಾಜು ಉದ್ದ 24 ಕಿ.ಮೀ (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)
3. ಬೊಮ್ಮಸಂದ್ರ ಟು ಅತ್ತಿಬೆಲೆ ವರೆಗೆ, ಮಾರ್ಗದ ಅಂದಾಜು ಉದ್ದ 11 ಕಿ.ಮೀ (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)
4. ಕಾಳೇನ ಅಗ್ರಹಾರ ಟು ಕಾಡುಗೋಡಿ ಟ್ರೀ ಪಾರ್ಕ್ ವರೆಗೆ, ಮಾರ್ಗದ ಅಂದಾಜು ಉದ್ದ 68 ಕಿ.ಮೀ. ಇದು ಅತಿ ಉದ್ದದ ಮಾರ್ಗವಾಗಿದೆ. (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)
5. ಮಾದವಾರ ಟು ತುಮಕೂರು ವರೆಗೆ, ಮಾರ್ಗದ ಅಂದಾಜು ಉದ್ದ 60 ಕಿ.ಮೀ (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)
6. ಕೆ.ಆರ್ ಪುರಂ ಟು ಹೊಸಕೋಟೆ ಬೂದಿಗೆರೆ ಕ್ರಾಸ್ ವರೆಗೆ, ಮಾರ್ಗದ ಅಂದಾಜು ಉದ್ದ 16 ಕಿ.ಮೀ. (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)