ಬೆಂಗಳೂರಿನ 24ಲಕ್ಷ ಆಸ್ತಿ ಮಾಲೀಕರಿಗೆ ಭರ್ಜರಿ ಗುಡ್‌ನ್ಯೂಸ್: ಇನ್ಮುಂದೆ ನಿಮ್ಮ ವಾಟ್ಸಾಪ್‌ಗೆ ಬರಲಿದೆ ಇ-ಖಾತಾ
ಬೆಂಗಳೂರಿನ 24ಲಕ್ಷ ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್ ನೀಡಿರುವ ಜಿಬಿಎ ಇನ್ಮುಂದೆ, ಭೂ ಗ್ಯಾರಂಟಿ ಯೋಜನೆ ಅಭಿಯಾನದಡಿ ಇ ಖಾತಾ ಸೇವೆಯನ್ನು ನೇರವಾಗಿ ವಾಟ್ಸಾಪ್‌ಗೆ ಕಳುಹಿಸಲು ಸಿದ್ಧತೆ ನಡೆಸಿದೆ. ಇದರೊಂದಿಗೆ ಆನ್‌ಲೈನ್ ಮೂಲಕ ಇ-ಖಾತಾದಲ್ಲಿ ತಿದ್ದುಪಡಿ ಅಥವಾ ಮಾಲೀಕತ್ವ ಬದಲಾವಣೆ ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸಲು ಸಹ ಜಿಬಿಎ ಅವಕಾಶ ನೀಡಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಮನೆ ಅಥವಾ ನಿವೇಶನ ಹೊಂದಿರುವ ಲಕ್ಷಾಂತರ ಆಸ್ತಿ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಇ-ಖಾತಾ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಮತ್ತು ಮಧ್ಯವರ್ತಿಗಳ ಕಾಟಕ್ಕೆ ಒಳಗಾಗುವ ದಿನಗಳಿಗೆ ಇನ್ಮುಂದೆ ಪೂರ್ಣವಿರಾಮ ಬೀಳಲಿದೆ. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಸಂಪೂರ್ಣ ಉಚಿತವಾಗಿ, ನೇರವಾಗಿ ಅವರ ವಾಟ್ಸಾಪ್ ಸಂಖ್ಯೆಗೇ ಇ-ಖಾತಾ ಪ್ರಮಾಣಪತ್ರವನ್ನು ತಲುಪಿಸುವ ವಿನೂತನ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
‘ಭೂ-ಗ್ಯಾರಂಟಿ’ ಅಭಿಯಾನದಡಿ ಮಹತ್ವದ ಹೆಜ್ಜೆ:
ಈ ಕುರಿತು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾದ 'ಭೂ-ಗ್ಯಾರಂಟಿ - ನನ್ನ ಖಾತಾ, ನನ್ನ ಹಕ್ಕು' ಅಭಿಯಾನದಡಿ ಈ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲೀಕರಿಗೆ ಖಾತಾ ವಿತರಣೆ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸುವುದು ಮತ್ತು ಪಾರದರ್ಶಕಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ವಾಟ್ಸಾಪ್‌ನಲ್ಲಿ ಇ-ಖಾತಾ ಹೇಗೆ ಸಿಗುತ್ತೆ?
ಈ ಹೊಸ ವ್ಯವಸ್ಥೆಯಡಿ ಆಸ್ತಿ ಮಾಲೀಕರು ತಮ್ಮ ಮೊಬೈಲ್‌ನಲ್ಲೇ ಕುಳಿತು ಅತ್ಯಂತ ಸುಲಭವಾಗಿ ದಾಖಲೆ ಪಡೆಯಬಹುದು.
* ಆಸ್ತಿ ಮಾಲೀಕರ ನೋಂದಾಯಿತ ವಾಟ್ಸಾಪ್ ಸಂಖ್ಯೆಗೆ ನೇರವಾಗಿ ಇ-ಖಾತಾ ಪ್ರಮಾಣಪತ್ರವು ಪಿಡಿಎಫ್ ರೂಪದಲ್ಲಿ ಬರಲಿದೆ.
* ಪ್ರತಿಯೊಂದು ಇ-ಖಾತಾ ಪ್ರಮಾಣಪತ್ರವು ವಿಶಿಷ್ಟವಾದ ePID ಸಂಖ್ಯೆಯನ್ನು ಹೊಂದಿರಲಿದ್ದು, ಇದು ಆಸ್ತಿಯ ಅಧಿಕೃತ ಡಿಜಿಟಲ್ ಗುರುತಾಗಿರಲಿದೆ.
* ಇದಕ್ಕಾಗಿ ಸಾರ್ವಜನಿಕರು ಒಂದು ರೂಪಾಯಿಯನ್ನೂ ಖರ್ಚು ಮಾಡಬೇಕಿಲ್ಲ. ಯಾವುದೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡದೆ ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸದೆ, ತಮ್ಮ ಮೊಬೈಲ್‌ನಲ್ಲೇ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.
ಕೇವಲ ಇ-ಖಾತಾ ವಿತರಣೆ ಮಾತ್ರವಲ್ಲದೆ, ದಾಖಲೆಗಳಲ್ಲಿ ಏನಾದರೂ ದೋಷಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಲೂ ಜಿಬಿಎ ಸುಲಭ ದಾರಿ ಮಾಡಿಕೊಟ್ಟಿದೆ.
ವಾಟ್ಸಾಪ್‌ಗೆ ಬರುವ ಸಂದೇಶದ ಜೊತೆಗೆ ಜಿಬಿಎಯ ಅಧಿಕೃತ ಇ-ಖಾತಾ ವೆಬ್ ಲಿಂಕ್ ಅನ್ನು ಸಹ ನೀಡಲಾಗುತ್ತದೆ. ಆಸ್ತಿ ಮಾಲೀಕರು ತಮ್ಮ ePID ಸಂಖ್ಯೆಯನ್ನು ಬಳಸಿಕೊಂಡು ಈ ಲಿಂಕ್ ಮೂಲಕ ಆನ್‌ಲೈನ್‌ನಲ್ಲೇ ಇ-ಖಾತಾದಲ್ಲಿನ ಹೆಸರು, ವಿಸ್ತೀರ್ಣ ಸೇರಿದಂತೆ ಇತರ ತಿದ್ದುಪಡಿಗಳಿಗೆ ಅಥವಾ ಆಸ್ತಿ ಮಾಲೀಕತ್ವ ಬದಲಾವಣ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈಗಾಗಲೇ ಆನ್‌ಲೈನ್ ಪೋರ್ಟಲ್ ಮೂಲಕ ಇ-ಖಾತಾ ವಿತರಣೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದ್ದು, ಇದೀಗ ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ವಾಟ್ಸಾಪ್ ಮೂಲಕವೇ ದಾಖಲೆ ತಲುಪಿಸುತ್ತಿರುವುದು ಬೆಂಗಳೂರಿನ ಆಸ್ತಿ ಮಾಲೀಕರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ.