ಆತ ಜವಾಬ್ದಾರಿಯುತ ಸ್ಥಾನದಲ್ಲಿ ಇರುವಂತಹ ಅಧಿಕಾರಿ.ಆದರೆ ಕುಡಿದ ಅಮಲಿನಲ್ಲಿ ಮಾಡಬಾರದ ಕೆಲಸ ಮಾಡಿಬಿಟ್ಟಿದ್ದಾನೆ. ತಮ್ಮ ಕರ್ತವ್ಯ ಮಾಡಿದ ಪೊಲೀಸರ ಮೇಲೆ ದರ್ಪ ಮೆರೆದಿದ್ದಾನೆ.ಹಾಗಾದ್ರೆ ಯಾರು ಆ ಅಧಿಕಾರಿ. ಆತ ಏನ್ ಮಾಡಿದ ಎಂಬುದನ್ನು ಹೇಳ್ತಿವಿ ನೋಡಿ.
ಯೆಸ್,ಪೊಲೀಸರ ಸಮವಸ್ತ್ರಕ್ಕೂ ಗೌರವ ಕೊಡದ ಅಧಿಕಾರಿಯ ದರ್ಪಕ್ಕೆ ಬೆಂಗಳೂರಿನ ಬ್ರಿಗೇಡ್ ರಸ್ತೆಯ ಕಾವೋರ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಾಕ್ಷಿಯಾಗಿದೆ. ನಗರದ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ, ಅಪ್ರಾಪ್ತರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆ ಸಿಸಿಬಿ ಅಧಿಕಾರಿಗಳ ತಂಡ ಕಾವೋರ್ ಬಾರ್‌ನಲ್ಲೂ ತಪಾಸಣೆಗೆ ಮುಂದಾಗಿತ್ತು. ಇದೇ ವೇಳೆ ಆಂಧ್ರಪ್ರದೇಶ ಮೂಲದ, ಕುಪ್ಪಂ ಯೋಜನಾ ಪ್ರಾಧಿಕಾರದ ನಿರ್ದೇಶಕ ಐಎಎಸ್ ಅಧಿಕಾರಿ ವಿಕಾಸ್ ಮರ್ಮತ್ ಮತ್ತು ಅವರ ತಂಡ ಅಲ್ಲಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪ್ರಶ್ನಿಸಿದಾಗ, ಅಧಿಕಾರಿ ಪೊಲೀಸ್ ಸಿಬ್ಬಂದಿಯ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾನೂನು ಪಾಲನೆ ಮಾಡಬೇಕಾದ ಅಧಿಕಾರಿಯೇ ಕಾನೂನು ರಕ್ಷಕರೊಂದಿಗೆ ಈ ರೀತಿ ವರ್ತಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಇನ್ನು ಈ ಪ್ರಕರಣದಲ್ಲಿ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿಯವರ ಕಚೇರಿಯಿಂದ ಕರೆ ಮಾಡಿಸಿ ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪ್ರಕರಣದಲ್ಲಿ ಜಾಮೀನು ಪಡೆಯಲು ಅವಕಾಶವಿರುವ ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರ ಕ್ರಮದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲಿನ ಹಲ್ಲೆ ಪ್ರಕರಣದಲ್ಲೇ ಇಂತಹ ಧೋರಣೆ ಅನುಸರಿಸಿದರೆ, ಸಾಮಾನ್ಯ ವ್ಯಕ್ತಿಯೊಬ್ಬ ಇಂತಹ ಕೃತ್ಯ ಎಸಗಿದ್ದರೆ ಇದೇ ರೀತಿಯ ಕ್ರಮ ಕೈಗೊಳ್ಳುತ್ತಿದ್ದರೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆರೋಪಿಯ ಹುದ್ದೆ, ಪ್ರಭಾವ ಅಥವಾ ಸಂಪರ್ಕಗಳನ್ನು ಲೆಕ್ಕಿಸದೆ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.
ಇದೇ ಬಾರ್‌ಗೆ ಸಂಬಂಧಿಸಿದಂತೆ ಈ ಹಿಂದೆಯೂ ವಿವಾದವೊಂದು ಸುದ್ದಿಯಾಗಿತ್ತು. ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇಲ್ಲಿ ಅಸಭ್ಯವಾಗಿ ವರ್ತಿಸಿದ್ದರು ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು. ಇದೀಗ ಪೊಲೀಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ಮತ್ತು ನಿಂದನೆಯ ಆರೋಪ ಕೇಳಿಬಂದಿರುವುದು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರ ಮೇಲೆಯೇ ಹಲ್ಲೆ ನಡೆದರೆ, ಸಾಮಾನ್ಯ ಜನರ ಸುರಕ್ಷತೆಯ ಪ್ರಶ್ನೆ ಏಳುವುದು ಸಹಜ.
ಈ ಪ್ರಕರಣದಲ್ಲಿ ನಿಜವಾಗಿ ಏನಾಯಿತು, ಆರೋಪಗಳ ಕುರಿತು ಸಮಗ್ರ ತನಿಖೆ ನಡೆಯುತ್ತದೆಯೇ, ತಪ್ಪು ಸಾಬೀತಾದರೆ ಆರೋಪಿಯ ಹುದ್ದೆ ನೋಡದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ಉತ್ತರ ನೀಡಬೇಕಿದೆ. ಪೊಲೀಸರಾಗಲಿ, ಐಎಎಸ್ ಅಧಿಕಾರಿಗಳಾಗಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲಿನ ಹಲ್ಲೆ ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕಿದೆ. ಪ್ರಭಾವಿಗಳಿಗೆ ಒಂದು ನ್ಯಾಯ,ಸಾಮಾನ್ಯರಿಗೆ ಮತ್ತೊಂದು ನ್ಯಾಯ ಎಂಬ ಭಾವನೆ ಮೂಡದಂತೆ ಪೊಲೀಸರು ನಡೆದುಕೊಳ್ಳಬೇಕಿದೆ.