ಜಪಾನ್‌ನಿಂದ ಬಂದ ಬಳಿಕವಾದ್ರೂ ಆಶಾ ಕಾರ್ಯಕರ್ತೆಯರ ನೋವಿಗೆ ಸಿಎಂ ಮಿಡಿಯಲಿ: ಹೆಚ್.ಡಿ.ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಒಂದು ವಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರವನ್ನ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಅವರದ್ದು ಹೂವಿನಂತಹ ಹೃದಯವಾಗಿದ್ದು, ಜಪಾನ್ ಪ್ರವಾಸದಿಂದ ಮರಳಿದ ಬಳಿಕವಾದರೂ ಆಶಾ ಕಾರ್ಯಕರ್ತೆಯರ ಸಂಕಷ್ಟಕ್ಕೆ ಸ್ಪಂದಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಬರ ಪರಿಹಾರ ವಿಚಾರದಲ್ಲಿ ಲಂಡನ್ ಕೋರ್ಟ್‌ಗೆ ಹೋಗುವ ಸಾಧ್ಯತೆಯ ಬಗ್ಗೆ ಟೀಕಿಸಿದ್ದು, ಹಿರಿಯೂರು ಟಿಕೆಟ್‌ಗಿಂತ ಮೈತ್ರಿಪಕ್ಷದ ಗೆಲುವೇ ತಮ್ಮ ಆದ್ಯತೆ ಎಂದು ಹೇಳಿದ್ದಾರೆ.
HDK on Asha Workers Protest: ಹಗಲು ರಾತ್ರಿ ಎನ್ನದೇ ಚಳಿಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಪ.. ಹೂವಿನಂತಹ ಹೃದಯ ಹೊಂದಿರುವ ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರಿಗೆ ಸ್ಪಂದಿಸಬೇಕಿತ್ತು, ಅವರದ್ದು ಬಂಡೆಯಂಥ ಹೃದಯ ಅಲ್ಲ ಅನ್ನೋದು ನನ್ನ ಭಾವನೆ. ಬಹುಶಃ ಟೋಕಿಯೋ ಪ್ರವಾಸದಿಂದ ವಾಪಸ್ ಬಂದ ಬಳಿಕ ಈ ಹೆಣ್ಣುಮಕ್ಕಳ ನೋವಿಗೆ ಸ್ಪಂದಿಸಬಹುದು ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಒಂದು ವಾರದಿಂದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಶ್ರಮದ ಬಗ್ಗೆ ಬಾಯಿ ಮಾತಿನಲ್ಲಿ ಎಲ್ಲಾ ಅನುಕಂಪದಿಂದಲೇ ಮಾತನಾಡುತ್ತೇವೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅನ್ನುವುದಕ್ಕಿಂತ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ನಾನು ಒಮ್ಮೆ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳನ್ನ ಕೇಂದ್ರದ ಅಂದಿನ ಶಿಕ್ಷಣ ಸಚಿವರಾಗಿದ್ದ ಧರ್ಮೆಂದ್ರ ಪ್ರಧಾನ್ ಅವರನ್ನ ಭೇಟಿ ಮಾಡಿಸಿದ್ದೆ. ಇವತ್ತಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಅವರ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರು.
ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡುವುದಕ್ಕೆ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಆರ್ಥಿಕ ಇಲಾಖೆಯನ್ನ ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದಾರೆ. ಭಾರತ ಜೋಡೋ ಸಂಘಗಳ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ₹1000 ಕೋಟಿ ಕೊಡುತ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಆಶಾ ಕಾರ್ಯಕರ್ತೆಯರ ಬಗ್ಗೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ನುಡಿದಂತೆ ನಡೆದಿದ್ದೇವೆ ಎಂದು ನೂರಾರು ಬಾರಿ ಈ ಮುಖ್ಯಮಂತ್ರಿ ಹೇಳಿರಬಹುದು. ನಮ್ಮ ಮುಖ್ಯಮಂತ್ರಿಗಳದ್ದು ಬಂಡೆ ರೀತಿಯ ಹೃದಯ ಅಲ್ಲ, ಹೂವಿನಂತಹ ಹೃದಯ ಅಲ್ಲವೇ? ಇಷ್ಟೋತ್ತಿಗೆ ಆಶಾ ಕಾರ್ಯಕರ್ತೆಯರ ಸಂಕಷ್ಟಕ್ಕೆ ಅವರು ಮಿಡಿಯಬೇಕಿತ್ತು. ಅವರ ಹೃದಯ ಕರಗಬೇಕಿತ್ತು. ಯಾಕೆ ಕರಗಿಲ್ಲವೋ ಗೊತ್ತಿಲ್ಲ. ಬಹುಶಃ ಜಪಾನ್ ಪ್ರವಾಸದಿಂದ ಬಂದ ಬಳಿಕ ಅವರ ಹೃದಯ ಮಿಡಿಯಬಹುದು ಎಂದು ಸಿಎಂ ನಡೆ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ. ಪರಿಹಾರಕ್ಕೆ ಕೋರ್ಟ್‌ಗೆ ಹೋಗಬೇಕಾಗುತ್ತದೆ ಅನ್ನುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು; ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋಗುತ್ತೋ, ಲಂಡನ್ ಕೋರ್ಟ್‌ಗೆ ಹೋಗುತ್ತೋ ಗೊತ್ತಿಲ್ಲ. ನೈಸ್ ಪ್ರಾಜೆಕ್ಟ್ ವ್ಯಾಜ್ಯ ಬಂದರೆ ಲಂಡನ್ ಕೋರ್ಟ್‌ಗೆ ಹೋಗಬೇಕೆಂದು ತೀರ್ಮಾನ ಮಾಡಿದ್ದು ಯಾರು? ಸುಪ್ರಿಂಕೋರ್ಟ್, ಹೈಕೋರ್ಟ್‌ನಲ್ಲಿ ಆಗಲ್ಲ, ಅವರಿಗೆ ಲಂಡನ್ ಕೋರ್ಟ್‌ಗೇ ಹೋಗಬೇಕು. ಕಾಂಗ್ರೆಸ್ ಮಹಾನುಭಾವರೇ ಲಂಡನ್ ಕೋರ್ಟ್‌ಗೆ ಹೋಗಬೇಕೆಂದು ಸರ್ಕಾರದಲ್ಲಿ ತೀರ್ಮಾನಿಸಿದ್ದರು. ಈಗ ಬರದ ವಿಚಾರದಲ್ಲಿ ಲಂಡನ್ ಕೋರ್ಟ್‌ಗೆ ರಾಜ್ಯ ಸರ್ಕಾರ ಹೋಗಬಹುದು ಎಂದು ಟಾಂಗ್ ನೀಡಿದರು.
ಪ್ರಧಾನಮಂತ್ರಿಗಳು, ಗೃಹ ಮಂತ್ರಿಗಳ ಜೊತೆ ಮುಖ್ಯಮಂತ್ರಿಗಳು ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಆತ್ಮೀಯತೆ ಇದ್ದವರು ಕೋರ್ಟ್‌ಗೆ ಹೋಗುವ ಅನಿರ್ವಾಯ ಬರಲ್ಲ ಅನ್ನಿಸುತ್ತೆ ಎಂದ ಅವರು; ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಯಾವತ್ತೂ ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದಿರಲಿಲ್ಲ. ಕೋರ್ಟ್‌ಗೆ ಹೋಗಿರಲಿಲ್ಲ. ಕೊಡಗಿನಲ್ಲಿ ನೆರೆ ಬಂದು ಜನರು ಮನೆಗಳನ್ನ ಕಳೆದುಕೊಂಡಾಂಗ ಕೇಂದ್ರ ಸರ್ಕಾರದ ಮುಂದೆ ಹಣಕ್ಕಾಗಿ ಕಾದಿರಲಿಲ್ಲ. ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಟ್ಟೆ. ಪರಿಹಾರ ಕೊಟ್ಟಿದ್ದೆ, ಮನೆ ನಿರ್ಮಿಸಿಕೊಡುವ ತನಕ ಮಾಸಿಕ ₹10,000 ಬಾಡಿಗೆ ಹಣವನ್ನ ಪ್ರತಿ ಕುಟುಂಬಕ್ಕೂ ನೀಡಿದ್ದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಹಿರಿಯೂರು ಟಿಕೆಟ್ ವಿಚಾರದಲ್ಲಿ ನನಗೆ ಯಾವುದೇ ರೀತಿಯ ಆತುರ ಇಲ್ಲ. ಚುನಾವಣೆ ನಡೆಯುತ್ತಯೋ ಇಲ್ಲವೋ ಗೊತ್ತಿಲ್ಲ. ಮೈತ್ರಿ ಪಕ್ಷದಿಂದ ಸಮರ್ಥ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕು ಎಂಬುಂದಷ್ಟೇ ನನ್ನ ಆದ್ಯತೆ. ಪಾಪ.. ಮುಖ್ಯಮಂತ್ರಿಗಳು ಸಿಕ್ಕಾಪಟ್ಟೆ ಹಿರಿಯೂರು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಆ ಕ್ಷೇತ್ರವನ್ನ ದತ್ತು ತೆಗೆದುಕೊಂಡು, ಕನಕಪುರದ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತಾರಂತೆ ಅಂತಾ ಟೀಕಿಸಿದರು.
ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷ ಸಭೆ ಮಾಡುತ್ತೇವೆ. ಅಗತ್ಯವಿದ್ದರೆ ಬಿಜೆಪಿ ಜೊತೆ ಸಭೆ ಮಾಡುತ್ತೇವೆ ಎಂದ ಎಚ್‌ಡಿಕೆ, ಮತಾಂತರ ಮಸೂದೆ, ಗೋಹತ್ಯೆ ನಿಷೇಧ ಮಸೂದೆ ವಾಪಸ್ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ಪ್ರಮೋದ್ ಮುತಾಲಿಕ್ ಅವರು ಬಂದಿದ್ದಾರೆ. ಚರ್ಚೆ ಮಾಡುತ್ತೇವೆ ನೋಡೋಣ ಎಂದು ಪ್ರತಿಕ್ರಿಯಿಸಿದರು. ಜೆಡಿಎಸ್ ಜಿಬಿಎ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮುಖಂಡ ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದರು