ʼಸ್ವಚ್ಛ ರಾಜಕಾರಣ ಮಾಡುತ್ತಿರುವೆʼ ಎನ್ನುವ ಸಚಿವ ಕೃಷ್ಣ ಭೈರೇಗೌಡರೇ... ಇದು ನಿಜವಾಗಿಯೂ ಎಷ್ಟು ಸತ್ಯ?
ʼಸ್ವಚ್ಛ ರಾಜಕಾರಣ ಮಾಡುತ್ತಿರುವೆʼ ಎಂದು ಹೇಳಿಕೊಳ್ಳುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರೇ ಈ ಮಾತು ಎಷ್ಟು ಸತ್ಯ ಎಂದು ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ರಮೇಶ್ ಎನ್.ಆರ್. ಬಹಿರಂಗ ಪತ್ರದ ಮೂಲಕ ಪ್ರಶ್ನಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸದ್ಯ ಆಕ್ಟೀವ್ ಮಿನಿಸ್ಟರ್ ಎಂತಲೇ ಖ್ಯಾತಿ ಪಡೆದಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ರಮೇಶ್ ಎನ್.ಆರ್. ಬಹಿರಂಗ ಪತ್ರ ಬರೆಯುವ ಮೂಲಕ ಗಂಭೀರ ಆರೋಪ ಮಾಡಿದ್ದು, ʼಸ್ವಚ್ಛ ರಾಜಕಾರಣ ಮಾಡುತ್ತಿರುವೆʼ ಎಂದು ಹೇಳಿಕೊಳ್ಳುವ ನೀವು ಸುಮಾರು 27 ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳಿಗೆ ಸಂಬಂಧಿಸಿದ 80ಕ್ಕೂ ಅಧಿಕ ಫೈಲ್‌ಗಳನ್ನು ಕಳೆದೆರಡು ತಿಂಗಳಿನಿಂದ ನಿಮ್ಮ ಬಳಿಯೇ ಇರಿಸಿಕೊಂಡಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿರುವ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ರಮೇಶ್ ಎನ್.ಆರ್., 27 ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳ 80ಕ್ಕೂ ಹೆಚ್ಚು ಕಡತಗಳು ಸಚಿವರ ಕಚೇರಿಯಲ್ಲಿ ಬಾಕಿ ಉಳಿದಿವೆ. ಟೆಂಡರ್ ಪ್ರಕ್ರಿಯೆಯ ಕಡತಗಳಿಗೆ ಸಚಿವರ ಅನುಮೋದನೆ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕರಿಗೆ ಉತ್ತರ ನೀಡುವಂತೆ ಆಗ್ರಹ:
ಸ್ವಚ್ಛ ರಾಜಕಾರಣ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ಸಚಿವರು ಕಡತಗಳ ವಿಳಂಬದ ಬಗ್ಗೆ ಸಾರ್ವಜನಿಕರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿರುವ ರಮೇಶ್ ಎನ್.ಆರ್., ರಾಜ್ಯ ರಾಜಧಾನಿ ಬೆಂಗಳೂರಿನ ಬರೋಬ್ಬರಿ 27 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಕಾಮಗಾರಿ ಟೆಂಡರ್ ಫೈಲ್‌ಗಳು ತಿಂಗಳುಗಳಿಂದ ಬೆಂಗಳೂರು ಅಭಿವೃದ್ಧಿ ಸಚಿವರ ಸಹಿಗಾಗಿ ಕಾದು ಕುಳಿತಿವೆ ಎಂದು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದಾರೆ. ಇದರೊಂದಿಗೆ, ಅಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಂದ ಮುಖ್ಯ ಅಭಿಯಂತರರು, ಅಪರ ಆಯುಕ್ತರಿಂದ ಹಿಡಿದು ಪಾಲಿಕೆ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳವರೆಗೆ ಐದು ಹಂತಗಳ ಅನುಮೋದನೆ ಪಡೆದ ಬಳಿಕ ಕಡತಗಳು ಸಚಿವ ಕೃಷ್ಣ ಬೈರೇಗೌಡರ ಸಹಿಗಾಗಿ ಬಾಕಿ ಉಳಿದಿವೆ. ಸಚಿವರ ಆಪ್ತ ಕಾರ್ಯದರ್ಶಿ ಸೇರಿದಂತೆ ಕಚೇರಿ ಸಿಬ್ಬಂದಿ ಮೂಲಕ ಟೆಂಡರ್ ಕಡತಗಳ ಅನುಮೋದನೆಗೆ ಶೇ.5ರಷ್ಟು ಕಮಿಷನ್ ಕೇಳಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಪ್ರತಿಯೊಂದು ಕಡತಕ್ಕೆ ಶೇ.5ರಷ್ಟು ಕಮಿಷನ್!
ಐದು ನಗರ ಪಾಲಿಕೆಗಳ ಮುಖ್ಯ ಅಭಿಯಂತರರ ಮೂಲಕ ಪ್ರತಿಯೊಂದು ಕಡತಕ್ಕೆ ಶೇ.5ರಷ್ಟು ಕಮಿಷನ್ ಹಣ ತಲುಪಿಸುವಂತೆ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರನ್ನು ಕೇಳಲಾಗುತ್ತಿದೆ ಎಂದು ಆರೋಪಿಸಿರುವ ರಮೇಶ್ ಎನ್.ಆರ್. , ತಮ್ಮ ಹೆಸರಿನಲ್ಲಿ ಕಮಿಷನ್ ಕೇಳಲಾಗುತ್ತಿದೆ ಎಂಬ ಆರೋಪ ಸಚಿವರ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆ ಮಾಡಿರುವುದರ ಜೊತೆಗೆ, ಆರೋಪಗಳು ನಿಜವಾಗಿದ್ದರೆ ಸಂಬಂಧಪಟ್ಟ ಕಚೇರಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸಚಿವರು ಸಿದ್ಧರಿದ್ದಾರೆಯೇ ಎಂದು ಬಹಿರಂಗ ಪತ್ರದಲ್ಲಿ ಕೇಳಿದ್ದಾರೆ.
ಸರ್ಕಾರಿ ಭೂಮಿ ಒತ್ತುವರಿ ವಿಚಾರದಲ್ಲೂ ಸಚಿವರಿಗೆ ಪ್ರಶ್ನೆ:
* ಸಚಿವ ಕೃಷ್ಣ ಭೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಗಳನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲಾಗಿದೆ ಎಂದು ರಮೇಶ್ ಎನ್.ಆರ್. ಆರೋಪ ಮಾಡಿದ್ದು, ಸರ್ಕಾರಿ ಆಸ್ತಿ ಕಬಳಿಕೆ ಪ್ರಕರಣಗಳನ್ನು ದಾಖಲೆಗಳ ಸಹಿತ ಬಹಿರಂಗಪಡಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.
ಕೊಡಗಲಹಟ್ಟಿ ಗ್ರಾಮದಲ್ಲಿ ಸುಮಾರು 22.30 ಎಕರೆ ಸರ್ಕಾರಿ ಆಸ್ತಿಯನ್ನು ಕಬಳಿಸಿದ ಆರೋಪದ ಪ್ರಕರಣವನ್ನೂ ಪ್ರಸ್ತಾಪಿಸಿರುವ ಅವರು, ಸದರಿ ಆಸ್ತಿಯ ಮೌಲ್ಯ ₹600 ಕೋಟಿಗೂ ಹೆಚ್ಚು ಎಂದು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಭೂ ಹಗರಣಕ್ಕೆ ಸಂಬಂಧಿಸಿದಂತೆ ತಾವು ನೀಡಿದ ದಾಖಲೆ ಆಧಾರಿತ ದೂರಿನ ಬಳಿಕ 2016ರಲ್ಲೇ ಜಿಲ್ಲಾಡಳಿತ ಆಸ್ತಿಯನ್ನು ವಶಕ್ಕೆ ಪಡೆದಿತ್ತು ಎಂದು ರಮೇಶ್ ಎನ್.ಆರ್. ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸರ್ಕಾರಿ ಆಸ್ತಿ ಕಬಳಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ಆಸ್ತಿಗಳನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಲು ಸಚಿವರು ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಪ್ರಶ್ನೆ ಮಾಡಿರುವ ಅವರು ಕೆಳಗಿನ ಪ್ರಶ್ನೆಗಳಿಗೆ ಬಹಿರಂಗ ಉತ್ತರ ನೀಡುವಂತೆ ಸಚಿವ ಕೃಷ್ಣ ಭೈರೇಗೌಡರಿಗೆ ಆಗ್ರಹಿಸಿದ್ದಾರೆ.
* ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ದೀರ್ಘಕಾಲದಿಂದ ನಿಲ್ಲಿಸಿರುವ ವಾಹನಗಳ ಮಾಲೀಕರ ವಿರುದ್ಧ ಕ್ರಮ ಸೇರಿದಂತೆ ಹಲವು ಕಾರ್ಯಗಳನ್ನು ಸಚಿವರು ಕೈಗೊಂಡಿರುವುದನ್ನು ಪತ್ರದಲ್ಲಿ ಉಲ್ಲೇಖ
* ಒಂದೆಡೆ ಸ್ವಚ್ಛ ರಾಜಕಾರಣದ ಹೇಳಿಕೆ, ಮತ್ತೊಂದೆಡೆ ಟೆಂಡರ್ ಕಡತಗಳ ವಿಳಂಬ ಮತ್ತು ಕಮಿಷನ್ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹ
* 27 ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳ ಕಡತಗಳು ಎರಡು ತಿಂಗಳಿಂದ ಬಾಕಿ ಉಳಿದಿರುವುದಕ್ಕೆ ಕಾರಣ ತಿಳಿಸುವಂತೆ ಒತ್ತಾಯ
* ಕಮಿಷನ್ ಆರೋಪಗಳ ಬಗ್ಗೆ ತನಿಖೆ ಅಥವಾ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಸಚಿವರ ನಿಲುವು ಏನು ಎಂದು ಪ್ರಶ್ನೆ
* ಈ ಎಲ್ಲ ಆರೋಪಗಳು ಮತ್ತು ಪ್ರಶ್ನೆಗಳಿಗೆ ಕೃಷ್ಣ ಭೈರೇಗೌಡರು ಕೂಡಲೇ ಬಹಿರಂಗ ಉತ್ತರ ನೀಡಬೇಕೆಂದು ರಮೇಶ್ ಎನ್.ಆರ್. ಆಗ್ರಹಿಸಿದ್ದಾರೆ.