Bangalore Traffic Survey: ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ಕೇವಲ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುವ ಸಮಸ್ಯೆಯಾಗಿ ಉಳಿದಿಲ್ಲ. ಉದ್ಯೋಗಿಗಳ ಅಮೂಲ್ಯ ಸಮಯ, ಆದಾಯ ಮತ್ತು ಜೀವನಶೈಲಿಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ನಗರದ ಟ್ರಾಫಿಕ್ ಸಮಸ್ಯೆಯಿಂದ ಉದ್ಯೋಗಿಗಳು ವರ್ಷಕ್ಕೆ ಬರೋಬ್ಬರಿ 21 ಕೆಲಸದ ದಿನಗಳಿಗೆ ಸಮನಾದ ಸಮಯವನ್ನು ರಸ್ತೆಯಲ್ಲೇ ಕಳೆದುಕೊಳ್ಳುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿ ಖಾಸಗಿ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಕಚೇರಿಯ ಸಮೀಪ ಮನೆ ಮಾಡಿಕೊಳ್ಳುವವರು ವರ್ಷಕ್ಕೆ ₹2.4 ಲಕ್ಷದವರೆಗೆ ಹೆಚ್ಚುವರಿ ಬಾಡಿಗೆ ಪಾವತಿಸಬೇಕಾದ ಪರಿಸ್ಥಿತಿಯೂ ಎದುರಾಗಿದೆ.
ಪ್ರಾಸ್ಪರ್ ಐಒ (Prosper.io) ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಬೆಂಗಳೂರಿನ ಸಂಚಾರ ಸಮಸ್ಯೆಯಿಂದ ಉಂಟಾಗುತ್ತಿರುವ ಸಮಯದ ನಷ್ಟ ಮತ್ತು ಆರ್ಥಿಕ ಹೊರೆಯ ಬಗ್ಗೆ ಗಮನ ಸೆಳೆಯಲಾಗಿದೆ. ವಿಶೇಷವಾಗಿ ಸಂಜೆ ಪೀಕ್ ಅವರ್‌ನಲ್ಲಿ ಉಂಟಾಗುವ ವಾಹನ ದಟ್ಟಣೆ ಉದ್ಯೋಗಿಗಳ ದಿನನಿತ್ಯದ ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂಬುದನ್ನ ಸಮೀಕ್ಷೆ ಪರಿಶೀಲಿಸಿದೆ.
ಟ್ರಾಫಿಕ್‌ನಲ್ಲೇ ಕಳೆದುಹೋಗುತ್ತಿದೆ 21 ದಿನಗಳ ಸಮಯ!
ಬೆಂಗಳೂರಿನ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಅದರಲ್ಲೂ ಐಟಿ ಕಂಪನಿಗಳು ಮತ್ತು ಟೆಕ್ ಪಾರ್ಕ್‌ಗಳು ಇರುವ ಪ್ರದೇಶಗಳಲ್ಲಿ ಕಚೇರಿ ಮುಗಿಯುವ ಸಮಯದಲ್ಲಿ ವಾಹನಗಳ ಸಾಲು ಸಾಮಾನ್ಯ ದೃಶ್ಯವಾಗಿದೆ. ಸಮೀಕ್ಷೆಯ ಪ್ರಕಾರ, ಸಂಚಾರ ದಟ್ಟಣೆಯಿಂದ ಉದ್ಯೋಗಿಗಳು ಒಂದು ವರ್ಷದಲ್ಲಿ ಕಳೆದುಕೊಳ್ಳುವ ಸಮಯವನ್ನ ಒಟ್ಟುಗೂಡಿಸಿದರೆ ಅದು 21 ಕೆಲಸದ ದಿನಗಳಿಗೆ ಸಮನಾಗುತ್ತದೆ. ಅಂದರೆ ಸುಮಾರು ಮೂರು ವಾರಗಳ ಕೆಲಸದ ಅವಧಿಗೆ ಸಮನಾದ ಅಮೂಲ್ಯ ಸಮಯ ರಸ್ತೆಯಲ್ಲೇ ವ್ಯರ್ಥವಾಗುತ್ತಿದೆ ಎಂಬುದು ವರದಿಯ ಪ್ರಮುಖ ಅಂಶವಾಗಿದೆ. ಆದರೆ ಇದು ಪ್ರತಿಯೊಬ್ಬ ಉದ್ಯೋಗಿಯೂ ನಿಖರವಾಗಿ 21 ದಿನಗಳನ್ನ ಕಳೆದುಕೊಳ್ಳುತ್ತಾರೆ ಎಂಬ ಅರ್ಥವಲ್ಲ. ಸಮೀಕ್ಷೆಯಲ್ಲಿ ಬಳಸಿರುವ ಲೆಕ್ಕಾಚಾರದ ಆಧಾರದಲ್ಲಿ ವ್ಯಕ್ತಪಡಿಸಿರುವ ಸಮಯದ ನಷ್ಟದ ಅಂದಾಜಾಗಿದೆ.
ಕಚೇರಿ ಹತ್ತಿರ ಮನೆ ಮಾಡಿದರೆ ಲಕ್ಷಾಂತರ ರೂಪಾಯಿ ಹೊರೆ!
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಉದ್ಯೋಗಿಗಳ ವಾಸಸ್ಥಳದ ಆಯ್ಕೆಯ ಮೇಲೂ ಪರಿಣಾಮ ಬೀರುತ್ತಿದೆ. ಪ್ರತಿದಿನ ಹಲವು ಗಂಟೆಗಳ ಕಾಲ ಪ್ರಯಾಣಿಸುವುದನ್ನ ತಪ್ಪಿಸಲು ಅನೇಕರು ಕಚೇರಿ ಅಥವಾ ಟೆಕ್ ಪಾರ್ಕ್‌ಗಳ ಸಮೀಪವೇ ಮನೆ ಬಾಡಿಗೆಗೆ ಪಡೆಯಲು ಆದ್ಯತೆ ನೀಡುತ್ತಿದ್ದಾರೆ. ಆದರೆ ಈ ನಿರ್ಧಾರದಿಂದ ಮಾಸಿಕ ಬಾಡಿಗೆ ವೆಚ್ಚ ಹೆಚ್ಚಾಗಬಹುದು. ಪ್ರಾಸ್ಪರ್ ಐಒ ಸಮೀಕ್ಷೆಯ ಪ್ರಕಾರ, ಕಚೇರಿಯ ಸಮೀಪ ವಾಸಿಸಲು ಉದ್ಯೋಗಿಗಳು ವರ್ಷಕ್ಕೆ ಹೆಚ್ಚುವರಿಯಾಗಿ ಸುಮಾರು ₹1.6 ಲಕ್ಷದಿಂದ ₹2.4 ಲಕ್ಷದವರೆಗೆ ಬಾಡಿಗೆ ಪಾವತಿಸಬೇಕಾಗಬಹುದು. ಇದನ್ನ ಮಾಸಿಕ ಲೆಕ್ಕದಲ್ಲಿ ನೋಡಿದರೆ ಸುಮಾರು ₹13,333ರಿಂದ ₹20,000 ಹೆಚ್ಚುವರಿ ವೆಚ್ಚವಾಗುತ್ತದೆ. ಹೀಗಾಗಿ ಟ್ರಾಫಿಕ್‌ನಲ್ಲಿ ಸಮಯ ಉಳಿಸಿಕೊಳ್ಳಲು ಮುಂದಾಗುವ ಉದ್ಯೋಗಿಗಳು ತಮ್ಮ ಆದಾಯದ ದೊಡ್ಡ ಭಾಗವನ್ನ ಮನೆ ಬಾಡಿಗೆಗಾಗಿ ಮೀಸಲಿಡಬೇಕಾದ ಪರಿಸ್ಥಿತಿ ಎದುರಾಗಬಹುದು.
ಉದ್ಯೋಗಿಗಳ ಜೀವನಶೈಲಿಯ ಮೇಲೂ ಪರಿಣಾಮ
ಸಂಚಾರ ದಟ್ಟಣೆ ಕೇವಲ ಕಚೇರಿಗೆ ತಲುಪುವ ಸಮಯವನ್ನ ಹೆಚ್ಚಿಸುವುದಿಲ್ಲ. ಕುಟುಂಬದೊಂದಿಗೆ ಕಳೆಯುವ ಸಮಯ, ವಿಶ್ರಾಂತಿ ಮತ್ತು ವೈಯಕ್ತಿಕ ಚಟುವಟಿಕೆಗಳಿಗೂ ಅಡ್ಡಿಯಾಗಬಹುದು. ಪ್ರತಿದಿನ ದೀರ್ಘಕಾಲ ಪ್ರಯಾಣಿಸುವ ಉದ್ಯೋಗಿಗಳಿಗೆ ವ್ಯಾಯಾಮ, ಮನರಂಜನೆ ಮತ್ತು ಇತರ ಕೆಲಸಗಳಿಗೆ ಸಮಯ ಹೊಂದಿಸಿಕೊಳ್ಳುವುದು ಸವಾಲಾಗಬಹುದು. ಇದಲ್ಲದೆ ವಾಹನಗಳ ಇಂಧನ ವೆಚ್ಚ ಹಾಗೂ ಪ್ರಯಾಣದ ಅನಿಶ್ಚಿತತೆಯೂ ಹೆಚ್ಚುವರಿ ಹೊರೆಯಾಗಬಹುದು. ಹೀಗಾಗಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನ ಕೇವಲ ರಸ್ತೆ ಸಂಚಾರದ ದೃಷ್ಟಿಯಿಂದ ನೋಡದೆ, ಉದ್ಯೋಗಿಗಳ ಜೀವನದ ಗುಣಮಟ್ಟ ಮತ್ತು ಆರ್ಥಿಕ ಸ್ಥಿತಿಯ ದೃಷ್ಟಿಯಿಂದಲೂ ಪರಿಶೀಲಿಸುವ ಅಗತ್ಯವಿದೆ.
ಆಂಬುಲೆನ್ಸ್ ಸಂಚಾರಕ್ಕೂ ಟ್ರಾಫಿಕ್ ಅಡ್ಡಿ
ನಗರದ ಸಂಚಾರ ದಟ್ಟಣೆಯ ಮತ್ತೊಂದು ಗಂಭೀರ ಸಮಸ್ಯೆಯೆಂದರೆ ತುರ್ತು ಸೇವೆಗಳ ಸಂಚಾರಕ್ಕೆ ಉಂಟಾಗುವ ಅಡಚಣೆ. ವಿಶೇಷವಾಗಿ ಆಂಬುಲೆನ್ಸ್‌ಗಳು ದಟ್ಟಣೆಯ ನಡುವೆ ಸಿಲುಕಿದರೆ ರೋಗಿಗಳನ್ನ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸುವುದು ಕಷ್ಟವಾಗಬಹುದು. ತುರ್ತು ಸಂದರ್ಭಗಳಲ್ಲಿ ಪ್ರತಿಯೊಂದು ನಿಮಿಷವೂ ಮಹತ್ವದ್ದಾಗಿರುವುದರಿಂದ ಆಂಬುಲೆನ್ಸ್‌ಗಳಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಅಗತ್ಯವನ್ನ ಸಮೀಕ್ಷಾ ವರದಿ ಒತ್ತಿಹೇಳಿದೆ.
ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು 5 ಪ್ರಮುಖ ಸಲಹೆಗಳು
ಸಂಚಾರ ಸಮಸ್ಯೆ ನಿಯಂತ್ರಣಕ್ಕೆ ಪ್ರಾಸ್ಪರ್ ಐಒ ಸಂಸ್ಥೆ ಹಲವು ಕ್ರಮಗಳನ್ನ ಶಿಫಾರಸು ಮಾಡಿದೆ.
ಔಟರ್ ರಿಂಗ್ ರಸ್ತೆಯಲ್ಲಿ ಪ್ರತ್ಯೇಕ ಬಸ್ ಪಥ: ಸಾರ್ವಜನಿಕ ಸಾರಿಗೆ ಬಸ್‌ಗಳ ಸುಗಮ ಸಂಚಾರಕ್ಕಾಗಿ ಪ್ರತ್ಯೇಕ ಬಸ್ ಪಥವನ್ನ ಪುನರಾರಂಭಿಸುವುದು.
ಮೆಟ್ರೋ ಕಾಮಗಾರಿಗೆ ವೇಗ: ಹೊರ ವರ್ತುಲ ರಸ್ತೆ ಮೆಟ್ರೋ ಯೋಜನೆಯನ್ನ ಶೀಘ್ರ ಪೂರ್ಣಗೊಳಿಸಲು ಆದ್ಯತೆ ನೀಡುವುದು.
ಉಪನಗರ ರೈಲು ಸಂಪರ್ಕ: ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳ ಕಾಮಗಾರಿಯನ್ನ ವೇಗಗೊಳಿಸಿ ಸಾರ್ವಜನಿಕ ಸಾರಿಗೆ ಸಂಪರ್ಕವನ್ನ ಬಲಪಡಿಸುವುದು.
ಆಂಬುಲೆನ್ಸ್‌ಗಳಿಗೆ ಆದ್ಯತೆ: ತುರ್ತು ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕದಂತೆ ಅಗತ್ಯ ಕ್ರಮಗಳನ್ನ ಜಾರಿಗೊಳಿಸುವುದು.
ರಸ್ತೆ ಗುಂಡಿಗಳ ವೈಜ್ಞಾನಿಕ ದುರಸ್ತಿ: ರಸ್ತೆ ಗುಂಡಿಗಳನ್ನ ವೈಜ್ಞಾನಿಕ ವಿಧಾನದಲ್ಲಿ ಮುಚ್ಚುವ ಮೂಲಕ ವಾಹನ ಸಂಚಾರಕ್ಕೆ ಉಂಟಾಗುವ ಅಡಚಣೆಗಳನ್ನ ಕಡಿಮೆ ಮಾಡುವುದು.
ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ?
ಬೆಂಗಳೂರಿನ ಬೆಳವಣಿಗೆಯೊಂದಿಗೆ ವಾಹನಗಳ ಸಂಖ್ಯೆ ಮತ್ತು ಪ್ರಯಾಣದ ಬೇಡಿಕೆಯೂ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಗಳನ್ನ ದುರಸ್ತಿ ಮಾಡುವುದರ ಜೊತೆಗೆ ಸಮರ್ಥ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ. ಪ್ರಾಸ್ಪರ್ ಐಒ ಸಮೀಕ್ಷೆಯು ಬೆಂಗಳೂರಿನ ಸಂಚಾರ ದಟ್ಟಣೆಯಿಂದ ಉಂಟಾಗುವ ಸಮಯದ ನಷ್ಟ ಮತ್ತು ಹೆಚ್ಚುವರಿ ಬಾಡಿಗೆ ವೆಚ್ಚದ ಬಗ್ಗೆ ಗಮನ ಸೆಳೆದಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಸಮನ್ವಯದಿಂದ ಕ್ರಮ ಕೈಗೊಂಡರೆ ಉದ್ಯೋಗಿಗಳ ಪ್ರಯಾಣದ ಸಮಯ ಮತ್ತು ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ನೆರವಾಗಬಹುದು. ಒಟ್ನಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ರಸ್ತೆಯಲ್ಲಿನ ವಾಹನ ದಟ್ಟಣೆಗೆ ಮಾತ್ರ ಸೀಮಿತವಾಗಿಲ್ಲ. ಇದು ಉದ್ಯೋಗಿಗಳ ಸಮಯ, ಹಣ ಮತ್ತು ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿರುವ ಪ್ರಮುಖ ನಗರ ಸಮಸ್ಯೆಯಾಗಿದೆ.