ಐಷಾರಾಮಿ ಜೀವನಕ್ಕಾಗಿ ಪ್ರೇಮಿಗಳಿಂದ ಡ್ರಗ್ ಪೆಡ್ಲಿಂಗ್..! 11 ಕೋಟಿ 44 ಲಕ್ಷ ರೂ. ಮಾದಕ ವಶ
ಮನೆಗಳ್ಳತನದಿಂದ ಹಿಡಿದು ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ ಪೆಡ್ಲಿಂಗ್‌ವರೆಗೆ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಖತರ್ನಾಕ್ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ, ಲಕ್ಷಾಂತರ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಮಾಲು ಜಪ್ತಿ ಮಾಡಿದ್ದಾರೆ. ಹಳೆ ಕಳ್ಳರು, ಬಾಲಕನನ್ನು ಬಳಸಿಕೊಂಡು ಕಳ್ಳತನ ಮಾಡಿಸಿದ ಕಿಲಾಡಿ, ಜೈಲಿನಿಂದ ಬಂದರೂ ಬುದ್ಧಿ ಕಲಿಯದ ಡ್ರಗ್ ಪೆಡ್ಲರ್ ಹಾಗೂ ಐಷಾರಾಮಿ ಜೀವನಕ್ಕಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜೋಡಿ ಸೇರಿದಂತೆ ಹಲವರನ್ನು ಹೆಡೆಮುರಿ ಕಟ್ಟಿರುವ ಪೊಲೀಸರ ಭರ್ಜರಿ ಕಾರ್ಯಾಚರಣೆ ಮತ್ತು ಸ್ವತ್ತು ವಶದ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು : ಒಬ್ಬ ಮನೆಗಳ್ಳತನವನ್ನೇ ಕಾಯಕ ಮಾಡಿಕೊಂಡ ಕಳ್ಳ, ಇನ್ನೊಬ್ಬ ಬಾಲಕನ ಬ್ರೈನ್ ವಾಶ್ ಕಳ್ಳತನ ಮಾಡಿಸಿದ ಕಿಲಾಡಿ, ಮತ್ತಿಬ್ಬರು ಕಳ್ಳತನ ಮಾಡಿ ಜೀವನ ನಡೆಸುತ್ತಿದ್ದ ಗೆಳೆಯರು, ಇನ್ನೊಂದು ಕಡೆ ಐಷಾರಾಮಿ ಜೀವನ ನಡೆಸಲು ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಪ್ರೇಮಿಗಳು, ಮತ್ತೊಂದು ಕಡೆ ಜೈಲಿಗೆ ಹೋಗಿ ಬಂದ್ರು ಬುದ್ದಿ ಕಲಿಯದ ಮೀನು ಮಾರೋನು. ಅರೆಸ್ಟ್ ಆಗಿರೋರು ಒಬ್ರ,ಇಬ್ರ. ಸಿಲಿಕಾನ್ ಸಿಟಿ ಪೊಲೀಸರು ಇವರೆಲ್ಲರ ಜನ್ಮವನ್ನೇ ಜಾಲಾಡಿ ಲಕ್ಷಾಂತರ ಮೌಲ್ಯದ ಸ್ವತ್ತನ್ನು ಸೀಜ್ ಮಾಡಿದ್ದಾರೆ. ಹಾಗಾದ್ರೆ ಪೊಲೀಸರ ಕಾರ್ಯಾಚರಣೆ ರಿಕವರಿ ಹೇಗಿದೆ ಎಂಬುದನ್ನು ಹೇಳ್ತಿವಿ ನೋಡಿ.
ಯೆಸ್, ಮನೆಗಳ್ಳತವನ್ನೇ ಜೀವನ ಮಾಡಿಕೊಂಡಿದ್ದ ಖತರ್ನಾಕ್ ಕಳ್ಳನೊಬ್ಬ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಯಾಸೀನ್ ಖಾನ್ ಅಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿಯಾಗಿದ್ದಾನೆ. ಬರೋಬ್ಬರಿ 50 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ 22 ಬಾರಿ ಅರೆಸ್ಟ್ ಆಗಿದ್ದರೂ ತನ್ನ ಚಾಳಿ ಮಾತ್ರ ಬಿಟ್ಟಿರಲಿಲ್ಲ. ಬಿಲ್ಡಿಂಗ್‌ಗಳ ಕೆಳ ಅಂತಸ್ತಿಗೆ ತೆರಳಿ, ಮೇಲಿನ ಮನೆಯಲ್ಲಿ ಯಾರಾದರೂ ಇದ್ದಾರಾ ಎಂದು ವಿಚಾರಿಸಿ, ಮನೆಯವರು ಇಲ್ಲವೆಂದರೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ.ಗೋವಿಂದರಾಜನಗರ, ಕೆಪಿ ಅಗ್ರಹಾರ ಹಾಗೂ ಜೆಪಿ ನಗರ ಠಾಣಾ ವ್ಯಾಪ್ತಿಯ ನಾಲ್ಕು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, 45
ಮತ್ತೊಂದು ನಾಲ್ಕು ವರ್ಷ ಜೈಲಿನಲ್ಲಿದ್ದರೂ ಬುದ್ಧಿ ಕಲಿಯದ ಡ್ರಗ್ ಪೆಡ್ಲರ್, ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ. ಶೇಖ್ ಮುದಾಸಿರ್ ಎಂಬಾತನನ್ನು ಬಂಧಿಸಿರುವ ಭಾರತಿನಗರ ಪೊಲೀಸರು, ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಮೀನು ಮಾರಾಟದ ನೆಪದಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದ ಆರೋಪಿ, ಸ್ಥಳೀಯರು ಹಾಗೂ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಈತನ ವಿರುದ್ಧ ಬೆಂಗಳೂರಿನ 12ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಇನ್ನೊಂದು ಕಡೆ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಭರತ್ ಅಲಿಯಾಸ್ ಡ್ರ್ಯಾಗನ್ ಹಾಗೂ ಸುನಿಲ್ ಅಲಿಯಾಸ್ ಬುಡ್ಡಾನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ 57 ಲಕ್ಷ ರೂಪಾಯಿ ಮೌಲ್ಯದ 447 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕನಿಗೆ ಆಮಿಷವೊಡ್ಡಿ ಆತನ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿಸಿದ್ದ ಆಟೋ ಚಾಲಕ ಏಗ ಎಂಬಾತನನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬರ್ತ್‌ಡೇ ಪಾರ್ಟಿ ಹಾಗೂ ದುಬಾರಿ ಬಟ್ಟೆಗಳ ಆಮಿಷವೊಡ್ಡಿ ಬಾಲಕನಿಂದ ಕಳ್ಳತನ ಮಾಡಿಸಿದ್ದ ಆರೋಪಿಯಿಂದ 180 ಗ್ರಾಂ ಚಿನ್ನ ಹಾಗೂ ಒಂದೂವರೆ ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.
ಇನ್ನು ಯಲಹಂಕ ಉಪನಗರದಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದ ಪ್ರೇಮಿಗಳಾದ ಇಮ್ರಾನ್ ಸಿದ್ದಿಕ್ ಹಾಗೂ ಆಯಿಷಾಳನ್ನು ಬಂಧಿಸಿರುವ ಪೊಲೀಸರು, ಬರೋಬ್ಬರಿ 11 ಕೋಟಿ 44 ಲಕ್ಷ ರೂಪಾಯಿ ಮೌಲ್ಯದ 5 ಕೆಜಿ 720 ಗ್ರಾಂ ಎಂಡಿಎಂಎ ಹಾಗೂ ಕಾರನ್ನು ಜಪ್ತಿ ಮಾಡಿದ್ದಾರೆ. ಐಷಾರಾಮಿ ಜೀವನ ನಡೆಸಲು ದೆಹಲಿಯಿಂದ ಮಾದಕ ವಸ್ತು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಒಟ್ಟಾರೆ ಬೆಂಗಳೂರಿನಲ್ಲಿ ಮನೆಗಳ್ಳತನದಿಂದ ಹಿಡಿದು ಡ್ರಗ್ ದಂಧೆಯವರೆಗೆ ಖತರ್ನಾಕ್ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮುಂದೆ ಮತ್ತಷ್ಟು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸೋರ ವಿರುದ್ಧ ಸಮರ ಸಾರುವ ಎಚ್ಚರಿಕೆ ನೀಡಿದ್ದಾರೆ.