SOCIAL MEDIA

Newsletter

PARTNER SITES
Select Language Select State

ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಾಂಕ ಫಿಕ್ಸ್! ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಬೆಂಗಳೂರು–ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಆರಂಭವಾಗುವ ಸಾಧ್ಯತೆಯಿದೆ. ಎಸ್‌ಎಂವಿಟಿ ಬೆಂಗಳೂರಿನಿಂದ ರಾತ್ರಿ 7.50ಕ್ಕೆ ಹೊರಡುವ ರೈಲು, ಮರುದಿನ ಬೆಳಗ್ಗೆ 11.55ಕ್ಕೆ ಮುಂಬೈ ತಲುಪುವ ನಿರೀಕ್ಷೆಯಿದೆ. ಗುಂತಕಲ್ ಮಾರ್ಗವಾಗಿ ಏಳು ನಿಲುಗಡೆಗಳನ್ನ ಪ್ರಸ್ತಾಪಿಸಲಾಗಿದೆ. ಆದರೆ ರೈಲ್ವೆ ಮಂಡಳಿಯ ಅಧಿಕೃತ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.

Written By Puttaraj K Alur
Published: Oct 20, 2026, 04:23 PM IST | Updated: Oct 20, 2026, 04:34 PM IST
Image Credit: Vande Bharat Sleeper Train
Join

Bengaluru Mumbai Vande Bharat Sleeper Train:  ಬೆಂಗಳೂರು ಮತ್ತು ಮುಂಬೈ ನಡುವಿನ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ. ಬಹುನಿರೀಕ್ಷಿತ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಆರಂಭವಾಗುವ ಸಾಧ್ಯತೆಯಿದೆ. ಈ ರೈಲು ಸೇವೆ ಆರಂಭವಾದರೆ ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ದೇಶದ ಪ್ರಮುಖ ವಾಣಿಜ್ಯ ನಗರಿ ಮುಂಬೈ ನಡುವಿನ ಪ್ರಯಾಣ ಮತ್ತಷ್ಟು ಅನುಕೂಲಕರವಾಗುವ ನಿರೀಕ್ಷೆಯಿದೆ.

ರೈಲ್ವೆ ಇಲಾಖೆಯ ಉನ್ನತ ಮೂಲಗಳ ಮಾಹಿತಿಯ ಪ್ರಕಾರ, ಈ ರೈಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಲ್ದಾಣದಿಂದ ಹೊರಟು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಿಲ್ದಾಣವನ್ನ ತಲುಪಲಿದೆ. ನವೆಂಬರ್ 1ರಂದು ರೈಲಿಗೆ ಚಾಲನೆ ದೊರೆಯುವ ಸಾಧ್ಯತೆಯಿದ್ದು, ನವೆಂಬರ್ 2ರಿಂದ ನಿಯಮಿತ ಸಂಚಾರ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಈ ದಿನಾಂಕಗಳು ಮತ್ತು ವೇಳಾಪಟ್ಟಿಗೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ.

ಬೆಂಗಳೂರು–ಮುಂಬೈ ರೈಲಿನ ತಾತ್ಕಾಲಿಕ ವೇಳಾಪಟ್ಟಿ

ಸದ್ಯ ಲಭ್ಯವಿರುವ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನಿಂದ ಹೊರಡುವ ರೈಲು ರಾತ್ರಿ 7.50ಕ್ಕೆ ಎಸ್‌ಎಂವಿಟಿ ನಿಲ್ದಾಣದಿಂದ ಪ್ರಯಾಣ ಆರಂಭಿಸಿ, ಮರುದಿನ ಬೆಳಗ್ಗೆ 11.55ಕ್ಕೆ ಮುಂಬೈನ ಸಿಎಸ್‌ಎಂಟಿ ನಿಲ್ದಾಣ ತಲುಪುವ ನಿರೀಕ್ಷೆಯಿದೆ. ಈ ಮಾರ್ಗದ ಪ್ರಯಾಣಕ್ಕೆ ಸುಮಾರು 16 ಗಂಟೆ 5 ನಿಮಿಷ ಬೇಕಾಗಬಹುದು. ಇನ್ನು ಮುಂಬೈನಿಂದ ಬೆಂಗಳೂರಿಗೆ ವಾಪಸಾಗುವ ರೈಲು ರಾತ್ರಿ 8.10ಕ್ಕೆ ಸಿಎಸ್‌ಎಂಟಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಗ್ಗೆ 11.55ಕ್ಕೆ ಎಸ್‌ಎಂವಿಟಿ ನಿಲ್ದಾಣ ತಲುಪುವ ಸಾಧ್ಯತೆಯಿದೆ. ಈ ದಿಕ್ಕಿನ ಪ್ರಯಾಣಕ್ಕೆ ಸುಮಾರು 15 ಗಂಟೆ 45 ನಿಮಿಷ ಬೇಕಾಗಬಹುದು. ಈ ಸಮಯಗಳು ತಾತ್ಕಾಲಿಕವಾಗಿದ್ದು, ಅಂತಿಮ ವೇಳಾಪಟ್ಟಿ ರೈಲ್ವೆ ಇಲಾಖೆಯ ಅಧಿಕೃತ ಅಧಿಸೂಚನೆ ಪ್ರಕಟವಾದ ಬಳಿಕವೇ ಖಚಿತವಾಗಲಿದೆ.

ಗುಂತಕಲ್ ಮಾರ್ಗವಾಗಿ ಸಂಚಾರ: ಏಳು ನಿಲುಗಡೆಗಳ ನಿರೀಕ್ಷೆ

ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಗುಂತಕಲ್ ಮಾರ್ಗವಾಗಿ ಸಂಚರಿಸುವ ಯೋಜನೆಯಿದೆ. ಈ ಮಾರ್ಗದಲ್ಲಿ ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೊಲ್ಲಾಪುರ, ಪುಣೆ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ಸಾಧ್ಯತೆಯಿದೆ. ಈ ನಿಲುಗಡೆಗಳು ಅಂತಿಮಗೊಂಡರೆ ಕರ್ನಾಟಕದ ರಾಯಚೂರು ಮತ್ತು ಕಲಬುರಗಿ ಸೇರಿದಂತೆ ಹಲವು ನಗರಗಳ ಪ್ರಯಾಣಿಕರಿಗೆ ಮುಂಬೈ ಸಂಪರ್ಕ ಸುಲಭವಾಗಬಹುದು. ವಿಶೇಷವಾಗಿ ಉದ್ಯೋಗ, ವ್ಯಾಪಾರ, ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಬೆಂಗಳೂರು–ಮುಂಬೈ ನಡುವೆ ಸಂಚರಿಸುವವರಿಗೆ ಈ ರೈಲು ಅನುಕೂಲ ಒದಗಿಸುವ ನಿರೀಕ್ಷೆಯಿದೆ. ಆದರೆ ಪ್ರಸ್ತಾಪಿತ ನಿಲುಗಡೆಗಳ ಕುರಿತು ಅಧಿಕೃತ ದೃಢೀಕರಣ ಹೊರಬರುವವರೆಗೆ ಪ್ರಯಾಣಿಕರು ಅಂತಿಮ ಪಟ್ಟಿಗಾಗಿ ಕಾಯಬೇಕಿದೆ.

22ರಿಂದ 24 ಗಂಟೆಗಳ ಪ್ರಯಾಣದ ಬದಲು ಕಡಿಮೆ ಸಮಯ?

ಪ್ರಸ್ತುತ ಬೆಂಗಳೂರು ಮತ್ತು ಮುಂಬೈ ನಡುವಿನ ರೈಲು ಪ್ರಯಾಣಕ್ಕೆ ರೈಲಿನ ಮಾರ್ಗ ಮತ್ತು ಸೇವೆಯನ್ನ ಅವಲಂಬಿಸಿ ಸಾಮಾನ್ಯವಾಗಿ 22ರಿಂದ 24 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ರೈಲಿನ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಈ ಪ್ರಯಾಣವನ್ನ ಸುಮಾರು 16 ಗಂಟೆಗಳಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಇದರಿಂದ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ರಾತ್ರಿ ರೈಲು ಹತ್ತಿ ಮರುದಿನ ಬೆಳಗ್ಗೆ ಅಥವಾ ಮಧ್ಯಾಹ್ನದ ವೇಳೆಗೆ ಗಮ್ಯಸ್ಥಾನ ತಲುಪುವ ವ್ಯವಸ್ಥೆ ಪ್ರಯಾಣಿಕರಿಗೆ ಅನುಕೂಲವಾಗಬಹುದು. ಸ್ಲೀಪರ್ ವ್ಯವಸ್ಥೆ ಇರುವುದರಿಂದ ರಾತ್ರಿ ಪ್ರಯಾಣದ ವೇಳೆ ವಿಶ್ರಾಂತಿ ಪಡೆಯಲು ಅವಕಾಶ ದೊರೆಯಲಿದೆ.

ಬಿಇಎಂಎಲ್ ನಿರ್ಮಿತ ರೈಲು ಸೆಟ್‌ಗಳ ಬಳಕೆ

ಈ ಸೇವೆಗಾಗಿ ಬಿಇಎಂಎಲ್ (BEML) ನಿರ್ಮಿಸಿರುವ ತಲಾ 16 ಬೋಗಿಗಳ ಎರಡು ರೈಲು ಸೆಟ್‌ಗಳನ್ನ ಬಳಸಲು ಉದ್ದೇಶಿಸಲಾಗಿದೆ ಎಂದು ವರದಿಯಾಗಿದೆ. ರೈಲಿನ ತಾಂತ್ರಿಕ ಸಿದ್ಧತೆಗಳ ಭಾಗವಾಗಿ ಮುಂಬೈ–ಪುಣೆ ನಡುವಿನ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರವನ್ನೂ ನಡೆಸಲಾಗಿದೆ ಎಂದು ತಿಳಿಸಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲು ದೀರ್ಘ ದೂರದ ರಾತ್ರಿ ಪ್ರಯಾಣವನ್ನ ಗಮನದಲ್ಲಿಟ್ಟುಕೊಂಡು ರೂಪಿಸಲಾದ ಸೇವೆಯಾಗಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ಒದಗಿಸುವುದು ಇದರ ಉದ್ದೇಶವಾಗಿದೆ.

ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಆರಂಭಿಸಬೇಕೆಂಬ ಒತ್ತಾಯ

ಪ್ರಸ್ತುತ ಯೋಜನೆಯ ಪ್ರಕಾರ ರೈಲು ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ ಸಂಚರಿಸಲಿದೆ. ಆದರೆ ನಗರದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದಲೇ ಈ ಸೇವೆಯನ್ನ ಆರಂಭಿಸಬೇಕು ಎಂಬ ಒತ್ತಾಯವನ್ನ ಕೆಲವು ರೈಲ್ವೆ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭವಾದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ರೈಲು ಸಂಪರ್ಕಕ್ಕೆ ಹೊಸ ಆಯಾಮ ಸಿಗಬಹುದು. ಆದರೆ ಉದ್ಘಾಟನಾ ದಿನಾಂಕ, ಅಂತಿಮ ವೇಳಾಪಟ್ಟಿ, ನಿಲುಗಡೆಗಳು ಮತ್ತು ಟಿಕೆಟ್ ದರಗಳ ಕುರಿತು ರೈಲ್ವೆ ಮಂಡಳಿಯ ಅಧಿಕೃತ ಪ್ರಕಟಣೆ ಹೊರಬಂದ ಬಳಿಕವೇ ಪ್ರಯಾಣಿಕರಿಗೆ ಸಂಪೂರ್ಣ ಸ್ಪಷ್ಟತೆ ದೊರೆಯಲಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES