SOCIAL MEDIA

Newsletter

PARTNER SITES
Select Language Select State

ಬೆಂಗಳೂರಿನಲ್ಲಿ 3 ದಿನ ಎಣ್ಣೆ ಸಿಗಲ್ಲ! 11 ಪೊಲೀಸ್ ವಿಭಾಗಗಳಲ್ಲಿ ಮದ್ಯ ಮಾರಾಟ ಬಂದ್‌!

ಕರ್ನಾಟಕ ವಿಧಾನ ಪರಿಷತ್ ಶಿಕ್ಷಕರ ಮತದಾನದ ಹಿನ್ನೆಲೆ ಬೆಂಗಳೂರಿನ 11 ಪೊಲೀಸ್ ವಿಭಾಗಗಳ ಆಯ್ದ ಠಾಣಾ ವ್ಯಾಪ್ತಿಗಳಲ್ಲಿ ಅಕ್ಟೋಬರ್ 21ರ ಬೆಳಗ್ಗೆ 6ರಿಂದ ಅಕ್ಟೋಬರ್ 23ರ ಸಂಜೆ 4ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಈ ಆದೇಶ ಹೊರಡಿಸಿದ್ದು, ಮತದಾನ ಶಾಂತಿಯುತವಾಗಿ ನಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

Written By Puttaraj K Alur
Published: Oct 20, 2026, 04:01 PM IST | Updated: Oct 20, 2026, 04:15 PM IST
Image Credit: Bengaluru Liquor Ban
Join

Bengaluru Liquor Ban: ಕರ್ನಾಟಕ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಮತದಾನದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟವನ್ನ ನಿಷೇಧಿಸಲಾಗಿದೆ. ಅಕ್ಟೋಬರ್ 21ರ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್ 23ರ ಸಂಜೆ 4 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್‌ನ ಒಟ್ಟು 11 ವಿಭಾಗಗಳ ವ್ಯಾಪ್ತಿಯಲ್ಲಿ ಬರುವ ಆಯ್ದ ಪೊಲೀಸ್ ಠಾಣಾ ಪ್ರದೇಶಗಳಿಗೆ ಈ ಆದೇಶ ಅನ್ವಯವಾಗಲಿದೆ. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುವುದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ. ಮದ್ಯ ಮಾರಾಟ ನಿಷೇಧದ ಅವಧಿಯಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ಮದ್ಯದಂಗಡಿಗಳು ಮತ್ತು ಮದ್ಯ ಮಾರಾಟಕ್ಕೆ ಸಂಬಂಧಿಸಿದ ಪರವಾನಗಿ ಹೊಂದಿರುವ ಸಂಸ್ಥೆಗಳು ಆದೇಶವನ್ನ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.

ಯಾವಾಗಿನಿಂದ ಯಾವಾಗದವರೆಗೆ ಮದ್ಯ ನಿಷೇಧ?

ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶದ ಪ್ರಕಾರ, ಅಕ್ಟೋಬರ್ 21ರ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್ 23ರ ಸಂಜೆ 4 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ ಜಾರಿಯಲ್ಲಿರಲಿದೆ. ಶಿಕ್ಷಕರ ಮತದಾನಕ್ಕೆ ಸಂಬಂಧಿಸಿದಂತೆ ಶಾಂತಿಯುತ ವಾತಾವರಣ ನಿರ್ಮಿಸುವುದು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಅಡಚಣೆ ಉಂಟಾಗದಂತೆ ನೋಡಿಕೊಳ್ಳುವುದು ಆಡಳಿತದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಪೊಲೀಸ್ ಠಾಣಾ ವ್ಯಾಪ್ತಿಗಳನ್ನ ಗುರುತಿಸಿ ಮದ್ಯ ಮಾರಾಟದ ಮೇಲೆ ನಿರ್ಬಂಧ ಹೇರಲಾಗಿದೆ.

ಕೇಂದ್ರ ವಿಭಾಗದಲ್ಲಿ ಎಲ್ಲಿ ಮದ್ಯ ಮಾರಾಟ ಬಂದ್?

ಬೆಂಗಳೂರಿನ ಕೇಂದ್ರ ವಿಭಾಗದ ಹೈಗ್ರೌಂಡ್ಸ್, ಕಬ್ಬನ್ ಪಾರ್ಕ್ ಮತ್ತು ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟ ನಿಷೇಧ ಜಾರಿಯಲ್ಲಿರಲಿದೆ.

ಪೂರ್ವ ವಿಭಾಗದ ವ್ಯಾಪ್ತಿ

ಪೂರ್ವ ವಿಭಾಗದ ಪುಲಿಕೇಶಿನಗರ ಮತ್ತು ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಪಶ್ಚಿಮ ವಿಭಾಗದ ಪ್ರದೇಶಗಳು

ಪಶ್ಚಿಮ ವಿಭಾಗದ ಚಾಮರಾಜಪೇಟೆ, ವಿಜಯನಗರ, ಗೋವಿಂದರಾಜನಗರ ಮತ್ತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟ ಬಂದ್ ಆಗಲಿದೆ.

ಉತ್ತರ ವಿಭಾಗದಲ್ಲಿ ನಿರ್ಬಂಧ

ಉತ್ತರ ವಿಭಾಗದ ರಾಜಾಜಿನಗರ, ಮಲ್ಲೇಶ್ವರ, ಸುಬ್ರಹ್ಮಣ್ಯನಗರ ಮತ್ತು ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ದಕ್ಷಿಣ ವಿಭಾಗದ ಠಾಣಾ ವ್ಯಾಪ್ತಿಗಳು

ದಕ್ಷಿಣ ವಿಭಾಗದ ವಿವಿ ಪುರ, ಹನುಮಂತನಗರ ಮತ್ತು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಈ ಆದೇಶ ಅನ್ವಯವಾಗಲಿದೆ.

ಆಗ್ನೇಯ ಮತ್ತು ನೈರುತ್ಯ ವಿಭಾಗ

ಆಗ್ನೇಯ ವಿಭಾಗದ ಕೋರಮಂಗಲ ಮತ್ತು ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇನ್ನು ನೈರುತ್ಯ ವಿಭಾಗದ ಕೆಂಗೇರಿ, ಸುಬ್ರಹ್ಮಣ್ಯಪುರ ಮತ್ತು ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ನಿರ್ಬಂಧ ಜಾರಿಯಲ್ಲಿರಲಿದೆ.

ವಾಯುವ್ಯ ಮತ್ತು ಈಶಾನ್ಯ ವಿಭಾಗಗಳಲ್ಲೂ ಮದ್ಯ ನಿಷೇಧ

ವಾಯುವ್ಯ ವಿಭಾಗದ ಬ್ಯಾಡರಹಳ್ಳಿ ಮತ್ತು ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಈಶಾನ್ಯ ವಿಭಾಗದ ದೇವನಹಳ್ಳಿ, ಅಮೃತಹಳ್ಳಿ ಮತ್ತು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಮದ್ಯ ಮಾರಾಟ ನಿಷೇಧ ಜಾರಿಯಲ್ಲಿರಲಿದೆ.

ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ವಿಭಾಗ

ವೈಟ್‌ಫೀಲ್ಡ್ ವಿಭಾಗದ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಎಲೆಕ್ಟ್ರಾನಿಕ್ ಸಿಟಿ ಮತ್ತು ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಈ ಆದೇಶ ಅನ್ವಯವಾಗಲಿದೆ.

ಮದ್ಯದಂಗಡಿಗಳಿಗೆ ಸೂಚನೆ

ಮದ್ಯ ಮಾರಾಟ ನಿಷೇಧದ ಆದೇಶವನ್ನ ಸಂಬಂಧಪಟ್ಟ ವ್ಯಾಪ್ತಿಗಳಲ್ಲಿರುವ ಎಲ್ಲಾ ಪರವಾನಗಿ ಹೊಂದಿರುವ ಮದ್ಯ ಮಾರಾಟಗಾರರು ಪಾಲಿಸಬೇಕಾಗಿದೆ. ನಿಯಮ ಉಲ್ಲಂಘನೆ ಆಗದಂತೆ ಪೊಲೀಸ್ ಇಲಾಖೆ ನಿಗಾ ವಹಿಸುವ ಸಾಧ್ಯತೆಯಿದೆ. ಒಟ್ನಲ್ಲಿ ಕರ್ನಾಟಕ ವಿಧಾನ ಪರಿಷತ್ ಶಿಕ್ಷಕರ ಮತದಾನದ ಹಿನ್ನೆಲೆಯಲ್ಲಿ ಬೆಂಗಳೂರಿನ 11 ಪೊಲೀಸ್ ವಿಭಾಗಗಳ ಆಯ್ದ ಠಾಣಾ ವ್ಯಾಪ್ತಿಗಳಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.  

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES