ಬಡ ಕುಟುಂಬದ ಮೇಲೆ ಡೆಡ್ಲಿ ಅಟ್ಯಾಕ್.. ಇನ್‌ಸ್ಪೆಕ್ಟರ್, ಕಾಂಗ್ರೆಸ್ ಮುಖಂಡನ ವಿರುದ್ಧ FIR
ನಿವೇಶನವೊಂದರ ಸ್ಥಳದ ಸಂಬಂಧ ಬಡ ಕುಟುಂಬದ ಮೇಲೆ 20ಕ್ಕೂ ಹೆಚ್ಚು ಜನರಿಂದ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ಇನ್‌ಸ್ಪೆಕ್ಟರ್ ಮತ್ತು ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
Bengaluru Hulimavu near Family attacked: ಜಾಗದ ವಿಚಾರಕ್ಕೆ ಶುರುವಾದ ಕಿರಿಕ್ ರಾತ್ರೋರಾತ್ರಿ ಬಡ ಕುಟುಂಬದ ಮೇಲೆ ಡೆಡ್ಲಿ ಅಟ್ಯಾಕ್‌ಗೆ ತಿರುಗಿದೆ. ಲಾಂಗು, ಮಚ್ಚು, ದೊಣ್ಣೆ, ಕಲ್ಲು ಹಿಡಿದು ಬಂದ 20ಕ್ಕೂ ಹೆಚ್ಚು ಮಂದಿ ಮನೆಗೇ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಹಲ್ಲೆಯಲ್ಲಿ ಯುವಕನೊಬ್ಬನ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಕಣ್ಣನ್ನೇ ಕಳೆದುಕೊಂಡಿದ್ದಾನೆ. ಈ ದಾಳಿಯ ಹಿಂದೆ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಕಾಂಗ್ರೆಸ್ ಮುಖಂಡನ ಕುಟುಂಬದ ಕೈವಾಡ ಇದೆ ಅನ್ನೋ ಗಂಭೀರ ಆರೋಪವೂ ಕೇಳಿಬಂದಿದೆ. ಅಷ್ಟಕ್ಕೂ ಏನಿದು ಜಾಗದ ಜಗಳ, ಬಡ ಕುಟುಂಬದ ಮೇಲೆ ನಡೆದ ಆ ಡೆಡ್ಲಿ ಅಟ್ಯಾಕ್ ಹಿಂದಿನ ಅಸಲಿ ಕಥೆಯೇನು?.
ಬಡ ಕುಟುಂಬದ ಮನೆಗೇ ನುಗ್ಗಿ ಡೆಡ್ಲಿ ಅಟ್ಯಾಕ್ ಮಾಡಿದೆ. ಹಲ್ಲೆ ಅಂದರೆ ಕೇವಲ ಕೈಕೈ ಮಿಲಾಯಿಸಿಲ್ಲ. ಇದರ ಬದಲಿಗೆ ಲಾಂಗು- ಮಚ್ಚು, ದೊಣ್ಣೆ- ಕಲ್ಲು ಹಿಡಿದು ಬಂದ 20ಕ್ಕೂ ಹೆಚ್ಚು ಮಂದಿ ಕುಟುಂಬವೊಂದರ ಮೇಲೆ ತೀವ್ರವಾಗಿ ದಾಳಿ ಮಾಡಿ ಬಿಟ್ಟಿದೆ. ಜಾಗದ ಜಗಳಕ್ಕೆ ಕೊಲೆ ಯತ್ನದ ಆರೋಪ ಮಾಡಲಾಗುತ್ತಿದೆ. ಖಾಕಿ- ಖಾದಿ ಪ್ರಭಾವ ಬಳಸಿ ದೌರ್ಜನ್ಯ ಮಾಡಿದ್ರಾ? ಎನ್ನುವ ಪ್ರಶ್ನೆ ಮೂಡುತ್ತಿದೆ. ಅಸಲಿಗೆ ಏನಾಗಿದೆ ಎನ್ನುವ ಸಂಪೂರ್ಣವಾದ ವಿವರ ಈ ಕೆಳಗಿನಂತೆ ಇದೆ.
ಜಾಗದ ವಿಚಾರದಲ್ಲಿ ಶುರುವಾದ ಕಿರಿಕ್ ಇದೀಗ ಕೊಲೆ ಯತ್ನದ ಆರೋಪದವರೆಗೂ ಬಂದು ನಿಂತಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಗ್ರಾಮಠಾಣಾ- 91ರ ನಿವೇಶನ ವಿಚಾರವಾಗಿ ಕಳೆದ 4 ರಂದು ರಾತ್ರಿ ಈ ಗಲಾಟೆ ನಡೆದಿದೆ. ಫಾತಿಮಾ ಹಾಗೂ ಕಾಣಿಕ್ಯರಾಜ್ ದಂಪತಿ ಮನೆಯ ಬಳಿ ಏಕಾಏಕಿ 25 ರಿಂದ 30 ಜನರ ಗುಂಪು ಏಕಾಏಕಿ ನುಗ್ಗಿದೆ. ನೋಡ್ ನೋಡುತ್ತಿದ್ದಂತೆ ಲಾಂಗು- ಮಚ್ಚು, ದೊಣ್ಣೆ ಹಾಗೂ ಕಲ್ಲುಗಳಿಂದ ದಾಳಿ ನಡೆಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಈ ದಾಳಿಯಲ್ಲಿ ಕಾಣಿಕ್ಯರಾಜ್ ಪುತ್ರ ನವೀನ್ ಬಲಗಣ್ಣಿಗೆ ಗಂಭೀರ ಗಾಯವಾಗಿದೆ. ಗಾಯದ ತೀವ್ರತೆಯಿಂದ ನವೀನ್ ತನ್ನ ಕಣ್ಣನ್ನು ಕಳೆದುಕೊಂಡಿದ್ದಾನೆ. ತೀವ್ರವಾದ ನೋವಿನಿಂದ ಬಳಲುತ್ತಿದ್ದಾನೆ. ಇನ್ನು ಕಾಣಿಕ್ಯರಾಜ್ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಲಾಗಿದ್ದು, ಮೂಗು ಹಾಗೂ ಕಣ್ಣಿನ ಕೆಳಭಾಗದಲ್ಲಿ ಗಾಯಗಳಾಗಿವೆ. ದಾಳಿ ವೇಳೆ ಕಿರುಚಾಡಿದರೂ ಬಿಡದ ಕಿರಾತಕರು ಹಲ್ಲೆಯನ್ನು ಮುಂದುವರೆಸಿ ಮನಬಂದಂತೆ ದಾಳಿ ಮಾಡಿಬಿಟ್ಟಿದ್ದಾರೆ.
ಪತ್ನಿ ಫಾತಿಮಾ, ಪುತ್ರ ಬಾಲರಾಜ್ ಹಾಗೂ ಸೊಸೆ ನಕ್ಷತ್ರ ಮೇಲೂ ಹಲ್ಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಾತ್ರಿ ಸುಮಾರು 10:55ರ ವೇಳೆಗೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿವೇಶನ ವಿವಾದವೇ ಈ ಮಾರಣಾಂತಿಕ ಹಲ್ಲೆಗೆ ಕಾರಣ ಎನ್ನಲಾಗ್ತಿದೆ.
ಇನ್ನು ಘಟನೆ ನಡೆದ ರಾತ್ರಿ ಕಾಣಿಕ್ಯರಾಜ್ ಮನೆಯ ಶೀಟ್ ತೆಗೆಯುವ ಸದ್ದು ಕೇಳಿಸಿದೆ. ಸದ್ದು ಕೇಳಿ ಹೊರಬಂದ ಕುಟುಂಬಸ್ಥರ ಮೇಲೆ ಏಕಾಏಕಿ ದಾಳಿ ನಡೆಸಲಾಗಿದೆ ಎಂದು ಕಾಣಿಕ್ಯರಾಜ್ ಕುಟುಂಬಸ್ಥರು ಆರೋಪಿಸಿದೆ. ದಾಳಿ ಮಾಡುವ ವೇಳೆ ನಮ್ಮ ಬಾಸ್ ಅನಿಲ್ ಕುಮಾರ್ ಮೇಲೆ ಕೇಸ್ ಹಾಕಿ, ಕೋರ್ಟ್‌ನಿಂದ ಇಂಜಕ್ಷನ್ ಆರ್ಡರ್ ತರುತ್ತೀಯಾ ಎಂದು ಪ್ರಶ್ನಿಸುತ್ತಾ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಬಸವನಪುರ ನಿವಾಸಿ ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ಕುಟುಂಬದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಕಿಶೋರ್ ಕುಮಾರ್ ಅವರ ಸಹೋದರ ಅನಿಲ್ ಕುಮಾರ್ ಕಾಂಗ್ರೆಸ್ ಮುಖಂಡರಾಗಿದ್ದು, ಮತ್ತೋರ್ವ ಸಹೋದರ ಪ್ರವೀಣ್ ಕುಮಾರ್ ವಕೀಲ ಹಾಗೂ ರಾಜಕೀಯ ಹಿನ್ನೆಲೆಯುಳ್ಳವರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಅನಿಲ್ ಕುಮಾರ್, ಪ್ರವೀಣ್ ಕುಮಾರ್, ನಾಗವೇಣಿ, ಅಜಯ್ ಸೇರಿದಂತೆ ಹಲವರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. FIR ದಾಖಲಾಗಿದ್ದರೂ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.
ಇದರಿಂದಾಗಿ ದಾಳಿಗೊಳಗಾದ ಕುಟುಂಬ ಆತಂಕದಲ್ಲೇ ದಿನದೂಡುವಂತಾಗಿದೆ. ಜಾಗದ ವಿಚಾರದಲ್ಲಿ ಪ್ರಭಾವ ಬಳಸಿಕೊಂಡು ನಿವೇಶನ ಕಬಳಿಸಲು ಯತ್ನಿಸಲಾಗಿದೆ ಎಂಬ ಆರೋಪವನ್ನೂ ಕುಟುಂಬಸ್ಥರು ಮಾಡಿದ್ದಾರೆ. ಇನ್ನೊಂದೆಡೆ, ಪ್ರಕರಣದ ಹಿನ್ನೆಲೆಯಲ್ಲಿ ಹೊಮ್ಮ ದೇವನಹಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ರೋಟ್ ಮಾರ್ಚ್ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಒಂದೆಡೆ ಜಾಗದ ವಿವಾದ, ಮತ್ತೊಂದೆಡೆ ಮಾರಣಾಂತಿಕ ಹಲ್ಲೆಯ ಆರೋಪ, ಅದರಲ್ಲೂ ಪೊಲೀಸ್ ಅಧಿಕಾರಿ ಹಾಗೂ ಪ್ರಭಾವಿ ರಾಜಕೀಯ ಕುಟುಂಬದ ಹೆಸರು ಕೇಳಿಬಂದಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. FIR ದಾಖಲಾದ ಬಳಿಕವೂ ಆರೋಪಿಗಳ ಬಂಧನವಾಗಿಲ್ಲ ಎಂಬ ಕುಟುಂಬದ ಆರೋಪಕ್ಕೆ ಪೊಲೀಸರು ಯಾವ ಉತ್ತರ ಕೊಡ್ತಾರೆ. ಪ್ರಭಾವಿಗಳಿಗೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ತಾರಾ?, ಬಡ ಕುಟುಂಬಕ್ಕೆ ನ್ಯಾಯ ಸಿಗುತ್ತಾ? ಅಥವಾ ಪ್ರಭಾವಿಗಳ ಆಟದ ಮುಂದೆ ನ್ಯಾಯವೇ ಸೋಲುತ್ತಾ?, ಪೊಲೀಸರ ತನಿಖೆಯಿಂದಲೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.