ಶಿಕ್ಷಕರ ಚುನಾವಣೆ.. ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ, ಹೋಟೆಲ್ & ರೆಸ್ಟೋರೆಂಟ್ ಉದ್ಯಮಕ್ಕೆ ₹500 ಕೋಟಿ ನಷ್ಟದ ಆತಂಕ
ಶಿಕ್ಷಕರ ಚುನಾವಣೆ ಹಿನ್ನಲೆಯಲ್ಲಿ ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಹೋಟೆಲ್ ಉದ್ಯಮಕ್ಕೆ ಸುಮಾರು ₹500 ಕೋಟಿ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ನಗರದಾದ್ಯಂತ (ಪೋಲೀಸ್ ಕಮೀಶನರೇಟ್ ವ್ಯಾಪ್ತಿ ಹೊರತುಪಡಿಸಿ) ಡ್ರೈ ಡೇ (Dry Day) ಘೋಷಣೆ ಮಾಡಲಾಗಿದೆ. ಅಕ್ಟೋಬರ್ನಲ್ಲಿ ಡ್ರೈ ಡೇ ಘೋಷಣೆಯಿಂದ ಬೆಂಗಳೂರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಲಿದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಡ್ರೈ ಡೇ:
ಈ ಕುರಿತಂತೆ ಆದೇಶ ಹೊರಡಿಸಿರುವ ಬೆಂಗಳೂರು ಜಿಲ್ಲೆ ಜಿಲ್ಲಾಧಿಕಾರಿಗಳು, ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ 2026 ಹಿನ್ನಲೆಯಲ್ಲಿ ಬೆಂಗಳೂರು ನಗರದಾದ್ಯಂತ ಶುಷ್ಕ ದಿನ (Dry Day) ಘೋಷಿಸಲು ನಿರ್ದೇಶಿಸಲಾಗಿರುತ್ತದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಮತದಾನದ ಪ್ರಯುಕ್ತ, ಅಕ್ಟೋಬರ್ 21, 2026 ರಿಂದ ಅಕ್ಟೋಬರ್ 23, 2026 ರ ಸಂಜೆ 4.00 ಗಂಟೆಯವರೆಗೆ ಹಾಗೂ ಮತ ಎಣಿಕೆ ಪ್ರಯುಕ್ತ ಅಕ್ಟೋಬರ್ 27, 2026 ರ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆವರೆಗೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ (ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಹೊರತುಪಡಿಸಿ) ಪಾನ ನಿಷೇಧ ಜಾರಿಗೊಳಿಸಿ, ಎಲ್ಲಾ ರೀತಿಯ ಮದ್ಯ ಉತ್ಪಾದನೆ, ಮಾರಾಟ, ಹಂಚಿಕೆ, ಸಾಗಾಣಿಕ, ಶೇಖರಣೆ ಇತ್ಯಾದಿಗಳನ್ನು ನಿಷೇಧಿಸಿ 'ಒಣ ದಿನ' (ಡ್ರೈ ಡೇ) ಗಳೆಂದು ಘೋಷಿಸಲು ಆದೇಶಿಸಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ:
ಅಕ್ಟೋಬರ್ ತಿಂಗಳಿನಲ್ಲಿ ಡ್ರೈ ಡೇ ಘೋಷಣೆಯಿಂದ ಹೋಟೆಲ್ ಉದ್ಯಮಕ್ಕೆ ಭಾರೀ ದೊಡ್ಡ ಹೊಡೆತ ಬೀಳಲಿದೆ ಎಂದು ಹೋಟೆಲ್ ಮಾಲೀಕರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅಬಕಾರಿ ಸಚಿವರಿಗೆ ಬೆಂಗಳೂರು ಹೋಟೆಲುಗಳ ಸಂಘ (ರಿ.) ಪತ್ರ ಬರೆದಿದ್ದು ಈ ರೀತಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಮಾನ್ಯರೇ,
ವಿಷಯ: ಶಿಕ್ಷಕರ ಚುನಾವಣೆಯ ಅಂಗವಾಗಿ Dry Day ಘೋಷಿಸಿರುವ ಬಗ್ಗೆ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಶಿಕ್ಷಕರ ಚುನಾವಣೆಯ ಅಂಗವಾಗಿ ದಿನಾಂಕ 21 ಅಕ್ಟೋಬರ್ 2026ರ ಸಂಜೆ 4:00 ಗಂಟೆಯಿಂದ ದಿನಾಂಕ 23 ಅಕ್ಟೋಬರ್ 2026 ರವರೆಗೆ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತ ಎಣಿಕೆಯ ದಿನವಾದ 2026ರ ಅಕ್ಟೋಬರ್ 27 ರಂದು ಡ್ರೈ ಡೇ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಬಾರ್ & ರಸ್ಟೋರೆಂಟ್ ಉದ್ಯಮಿಗಳಿಗೆ ಭಾರೀ ನಷ್ಟ ಉಂಟಾಗಲಿದೆ ಎಂದಿದ್ದಾರೆ.
ಸೀಮಿತ ಮತದಾರರರಿಗಾಗಿ ಈ ಕ್ರಮ ಸರಿಯಲ್ಲ:
ಈ ಚುನಾವಣೆಯಲ್ಲಿ ಕೇವಲ ಸುಮಾರು 20,000 ಮತದಾರರಿದ್ದು, ಅದರಲ್ಲಿ ಸುಮಾರು 15,009 ಮಹಿಳಾ ಮತದಾರರಿದ್ದಾರೆ, ಅಂತಹ ಸೀಮಿತ ಮತದಾರರನ್ನು ಹೊಂದಿರುವ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದಾದ್ಯಂತ (ಪೋಲೀಸ್ ಕಮೀಷನರೇಟ್ ವ್ಯಾಪ್ತಿ ಹೊರತುಪಡಿಸಿ) Dry Day ಘೋಷಿಸುವುದರಿಂದ ಮದ್ಯ ಮಾರಾಟಗಾರರು ಹಾಗೂ ಆತಿಥ್ಯ ಉದ್ಯಮದವರಿಗೆ ಅನಗತ್ಯ ತೊಂದರೆಯಾಗಲಿದೆ. ಇದು ಶಿಕ್ಷಕ ಸಮುದಾಯಕ್ಕೂ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ. ಇದಲ್ಲದೆ, ಈ ನಿರ್ಧಾರದಿಂದ ಸುಮಾರು ₹500 ಕೋಟಿಗೂ ಅಧಿಕ ವಹಿವಾಟಿನ ನಷ್ಟ ಉಂಟಾಗಲಿದ್ದು, ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯ ಆದಾಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ.
ಆದ್ದರಿಂದ, ಉದ್ಯಮದ ಹಿತದೃಷ್ಟಿಯಿಂದ ಶಿಕ್ಷಕರ ಚುನಾವಣೆ ಹಾಗೂ ಮತ ಎಣಿಕೆಯ ಸಂದರ್ಭದಲ್ಲಿ ಘೋಷಿಸಿರುವ ಡ್ರೈ ಡೇ ಅನ್ನು ಹಿಂಪಡೆಯಬೇಕಾಗಿ ತಮ್ಮಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.