ಮುತ್ಯಾಲಮಡುವು ಬಳಿ ದಂತಚೋರರ ಬೇಟೆ : 7 ಆನೆ ದಂತಗಳ ಜೊತೆ ಮೂವರು ಅರೆಸ್ಟ್
ಆನೇಕಲ್‌ನ ಮುತ್ಯಾಲಮಡುವು ಪ್ರವಾಸಿ ತಾಣದ ಸಮೀಪ ಅಕ್ರಮವಾಗಿ ಆನೆ ದಂತಗಳನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡವು 15 ದಿನಗಳ ಕಾರ್ಯಾಚರಣೆಯ ನಂತರ ಏಳು ಆನೆ ದಂತಗಳು, ಕಾರು, ಮೊಬೈಲ್‌ಗಳು ಹಾಗೂ ಬೇಟೆಗೆ ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
ಆನೇಕಲ್ : ಅದು ಕಾಡಂಚಿನಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ.ಅಲ್ಲಿಗೆ ನಿತ್ಯ ನೂರಾರು ಮಂದಿ ಪ್ರವಾಸಿಗರುವ ಆ ಸ್ಥಳವನ್ನು ನೋಡಲು ಬರುತ್ತಾರೆ. ಹಾಗೆಯೆ ಅಲ್ಲಿ ಆಗಾಗ ಆನೆಗಳು ಓಡಾಡುವುದು ಸಹಜ, ಆದರೆ ಕಾಡಿನ ವನ್ಯಜೀವಿಗಳನ್ನ ಬೇಟೆಯಾಡಿ, ಆನೆ ದಂತಗಳನ್ನ ಮಾರಾಟ ಮಾಡಲು ಹೊರಟಿದ್ದ ದಂತಚೋರರಿಗೆ ಇದೀಗ ಆನೇಕಲ್ ಪೊಲೀಸರ ಖೆಡ್ಡಾಗೆ ಕೆಡವಿದ್ದಾರೆ. ತಮಿಳುನಾಡಿನಿಂದ ಬೆಂಗಳೂರಿನತ್ತ ದಂತಗಳನ್ನ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನ ಮುತ್ಯಾಲಮಡುವು ಬಳಿ ಪೊಲೀಸರು ಬಂಧಿಸಿದ್ದಾರೆ.. ಬಂಧಿತರಿಂದ ಬರೋಬ್ಬರಿ ಏಳು ಆನೆ ದಂತಗಳು, ಕಾರು, ಮೊಬೈಲ್ ಹಾಗೂ ಬೇಟೆಗೆ ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ.. ಕಳೆದ ಹದಿನೈದು ದಿನಗಳಿಂದ ಆರೋಪಿಗಳ ಮೇಲೆ ಕಣ್ಣಿಟ್ಟಿದ್ದ ಆನೇಕಲ್ ಪೊಲೀಸರು, ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.
ಹೌದು.. ವನ್ಯಜೀವಿಗಳನ್ನ ಬೇಟೆಯಾಡಿ ಅವುಗಳ ದಂತ, ಮಾಂಸ ಸೇರಿದಂತೆ ವಿವಿಧ ಅಂಗಾಂಗಗಳನ್ನ ಅಕ್ರಮವಾಗಿ ಮಾರಾಟ ಮಾಡುವ ಜಾಲದ ಮೇಲೆ ಆನೇಕಲ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಆನೆ ದಂತ ಹಾಗೂ ಜಿಂಕೆ ಮಾಂಸ ಸಾಗಾಣಿಕೆ ಮಾಡಲಾಗ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಮಾಹಿತಿ ಸಿಕ್ಕ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಗಳ ಜಾಡು ಹಿಡಿಯಲು ಕಳೆದ ಹದಿನೈದು ದಿನಗಳಿಂದ ಮಾಹಿತಿ ಕಲೆಹಾಕುತ್ತಿದ್ದರು. ತಮಿಳುನಾಡಿನಿಂದ ಬೆಂಗಳೂರಿನತ್ತ ಕಾರಿನಲ್ಲಿ ಆನೆ ದಂತಗಳನ್ನ ಸಾಗಿಸಿ ಮಾರಾಟ ಮಾಡಲು ಆರೋಪಿಗಳು ಬರುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.. ಆರೋಪಿಗಳನ್ನ ಖೆಡ್ಡಾಗೆ ಕೆಡವಲು ಆನೇಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಮಾಸ್ಟರ್ ಪ್ಲಾನ್ ರೂಪಿಸಿತ್ತು. ಮುತ್ಯಾಲಮಡುವು ಪ್ರವಾಸಿ ತಾಣದ ಸಮೀಪ ಆರೋಪಿಗಳ ಕಾರು ಬರುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಕಾರಿನಲ್ಲಿದ್ದ ಮೂವರನ್ನ ವಶಕ್ಕೆ ಪಡೆದು ದಂತಗಳ ಸಮೇತ ಬಂಧಿಸಿದ್ದಾರೆ..
ಇನ್ನು ಬಂಧಿತರನ್ನ ತಮಿಳುನಾಡು ಮೂಲದ ಸತೀಶ್ವರನ್, ಶರತ್ ಕುಮಾರ್ ಹಾಗೂ ಶಂಕರ್ ಎಂದು ಗುರುತಿಸಲಾಗಿದೆ. ಆರೋಪಿಗಳ ಬಳಿ ಇದ್ದ ಏಳು ಆನೆ ದಂತಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಂತ ಸಾಗಾಣಿಕೆಗೆ ಬಳಸುತ್ತಿದ್ದ ಕಾರು, ಮೊಬೈಲ್ ಫೋನ್ ಹಾಗೂ ವನ್ಯಜೀವಿ ಬೇಟೆಗೆ ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನೂ ಜಪ್ತಿ ಮಾಡಿದ್ದಾರೆ.. ದಂತ ಮಾರಾಟದ ಉದ್ದೇಶದಿಂದ ಬೆಂಗಳೂರಿನತ್ತ ಬರುತ್ತಿದ್ದ ಆರೋಪಿಗಳನ್ನ ಆನೇಕಲ್ ಪೊಲೀಸರು ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.
ವನ್ಯಜೀವಿಗಳನ್ನ ಬೇಟೆಯಾಡುವುದು ಹಾಗೂ ಅವುಗಳ ಅಂಗಾಂಗಗಳನ್ನ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ಬಂಧಿತ ಮೂವರ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಆರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ದಂತಗಳನ್ನ ಎಲ್ಲಿಂದ ಸಂಗ್ರಹಿಸಲಾಗಿತ್ತು, ಬೇಟೆಯ ಹಿಂದೆ ದೊಡ್ಡ ಜಾಲವೇನಾದರೂ ಇದೆಯಾ, ದಂತಗಳ ಮಾರಾಟಕ್ಕೆ ಯಾರು ನೆರವಾಗ್ತಿದ್ದರು ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಒಟ್ನಲ್ಲಿ ಕಾಡಿನ ಸಂಪತ್ತು ಕದ್ದು ವನ್ಯಜೀವಿಗಳನ್ನ ಬಲಿಪಡೆದು ಹಣ ಮಾಡಿಕೊಳ್ಳುವ ದಂತಚೋರರಿಗೆ ಆನೇಕಲ್ ಪೊಲೀಸರು ನಡುಕ ಹುಟ್ಟಿಸಿದ್ದಾರೆ. ಏಳು ಆನೆ ದಂತಗಳ ಜಪ್ತಿ ಮಾಡಿ,ಮೂವರು ಆರೋಪಿಗಳನ್ನ ಬಂಧಿಸಿರುವ ಆನೇಕಲ್ ಪೋಲಿಸರು, ದಂತಗಳ ಅಕ್ರಮ ವ್ಯಾಪಾರದ ಹಿಂದಿರುವ ದೊಡ್ಡ ಜಾಲವನ್ನ ಬಯಲಿಗೆಳೆಯುತ್ತಾರ , ವನ್ಯಜೀವಿಗಳ ಬೇಟೆ ಹಾಗೂ ಅವುಗಳ ಅಂಗಾಂಗಗಳ ಮಾರಾಟಕ್ಕೆ ಕಡಿವಾಣ ಹಾಕಲು ಪೊಲೀಸರು ನಡೆಸುತ್ತಿರುವ ಈ ಕಾರ್ಯಾಚರಣೆ ಇನ್ನಷ್ಟು ಬೇಟೆಗಾರರಿಗೆ ಬಲೆ ಬೀಸುವ ಮುನ್ಸೂಚನೆಯಾಗಿದ್ದು, ಕಾಡಿನ ಜೀವಿಗಳ ರಕ್ಷಣೆಗೆ ಕಾನೂನಿನ ಕಾವಲು ಮತ್ತಷ್ಟು ಬಿಗಿಯಾಗಬೇಕಿದೆ.