ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಗೌತಮಪುರ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳು ಪ್ರತ್ಯಕ್ಷಗೊಂಡಿದ್ದು, ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಬೆಳಂದೂರು ಅರಣ್ಯಕ್ಕೆ ಹೊಂದಿಕೊಂಡಿರುವ ಗೌತಮಪುರ ಮತ್ತು ಚನ್ನಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಆನೆಗಳು ಬೀಡುಬಿಟ್ಟಿವೆ ಎಂದು ಅಂಬ್ಲಿಗೋಳ ಅರಣ್ಯ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾಡಾನೆಗಳು ಮುಂಬರುವ ದಿನಗಳಲ್ಲಿ ನಾಡವಳ್ಳಿ, ಕುಡಿಗೇರಿ ಹಾಗೂ ಲಾವಿಗೇರಿ ಮಾರ್ಗವಾಗಿ ಚಲಿಸುವಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.ಜನರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಗಳ ಚಲನವಲನದ ಮೇಲೆ ನಿರಂತರವಾಗಿ ಕಣ್ಗಾವಲು ಇರಿಸಿದ್ದಾರೆ. ರೈತರು ಮತ್ತು ಸಾರ್ವಜನಿಕರು ರಾತ್ರಿ ಅಥವಾ ಮುಂಜಾನೆ ವೇಳೆ ಒಂಟಿಯಾಗಿ ಓಡಾಡುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಯಾವುದೇ ಕಾರಣಕ್ಕೂ ಕಾಡಾನೆಗಳ ಹತ್ತಿರ ತೆರಳದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಒಂದು ವೇಳೆ ಗ್ರಾಮಗಳ ಸುತ್ತಮುತ್ತ ಆನೆಗಳ ಹೆಜ್ಜೆ ಗುರುತುಗಳು ಅಥವಾ ಓಡಾಟ ಕಂಡುಬಂದ ಕೂಡಲೇ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.