SOCIAL MEDIA

Newsletter

PARTNER SITES
Select Language Select State

ಕರ್ನಾಟಕ ಬಂದ್‌..! ವಾರದೊಳಗೆ ರೈತರ ಬೇಡಿಕೆ ಈಡೇರದಿದ್ದರೆ ವಾಟಾಳ್‌ ಉಗ್ರ ಹೋರಾಟದ ಎಚ್ಚರಿಕೆ

ಸ್ಟಿಂಗ್ ಆಪರೇಷನ್ ಕುರಿತು ಸಮಗ್ರ ತನಿಖೆಯಾಗಬೇಕು ಹಾಗೂ ರೈತರ ಸಮಸ್ಯೆಗಳು ಬಗೆಹರಿಯಬೇಕು ಎಂದು ಆಗ್ರಹಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು, ಕೇವಲ ಒಂದು ವಾರದ ಗಡುವು ನೀಡಿದ್ದು, ಬೇಡಿಕೆ ಈಡೇರದಿದ್ದರೆ 'ಅಖಂಡ ಕರ್ನಾಟಕ ಬಂದ್' ಮಾಡುವುದಾಗಿ ಎಚ್ಚರಿಸಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 18, 2026, 05:33 PM IST | Updated: Oct 18, 2026, 05:35 PM IST
Image Credit: Vatal Nagaraj on Sugarcane farmers
Join

ಮಂಡ್ಯ: ಸ್ಟಿಂಗ್ ಆಪರೇಷನ್ ವಿವಾದ ಮತ್ತು ಬೆಳಗಾವಿಯ ಕಬ್ಬು ಬೆಳೆಗಾರರ ದಿಢೀರ್ ಹೋರಾಟ ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಗುಡುಗಿರುವ ಕನ್ನಡ ಪಕ್ಷದ ನಾಯಕ ವಾಟಾಳ್ ನಾಗರಾಜು, ಕೇವಲ ಒಂದು ವಾರದ ಗಡುವು ನೀಡಿದ್ದು, ಬೇಡಿಕೆಗಳು ಈಡೇರದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದ ಜನನಿಬಿಡ ಸಂಜಯ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜು ನೇತೃತ್ವ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ವಿಚಾರದ ಹಿಂದೆ ದೊಡ್ಡ ಮಟ್ಟದ ರಾಜಕೀಯ ಷಡ್ಯಂತ್ರವಿದ್ದು, ಇದರ ಬಗ್ಗೆ ಸರ್ಕಾರ ಸಮಗ್ರವಾದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕಳಕಳಿಯಿಂದ ಆಗ್ರಹಿಸಿದರು. ಇಂತಹ ಕೃತ್ಯಗಳು ರಾಜ್ಯದ ಹಿತಾಸಕ್ತಿಗೆ ಮಾರಕ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಿರುವ ಕಬ್ಬು ಬೆಳೆಗಾರರ ರೈತಪರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು. ಅನ್ನದಾತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೌನ ವಹಿಸಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜು, ದೆಹಲಿಯ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು ತಕ್ಷಣವೇ ಕರ್ನಾಟಕಕ್ಕೆ ಬಂದು ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಹಾಗೆಯೇ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೂ ಕೂಡ ದೆಹಲಿ ವಾಸವನ್ನು ಬಿಟ್ಟು ರಾಜ್ಯದ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ದಿಢೀರ್ ಹೆಜ್ಜೆ ಇಡಬೇಕು ಎಂದು ಸೂಚಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡ ವಾಟಾಳ್, ಸಿದ್ದರಾಮಯ್ಯನವರಿಗೆ ಏನೂ ಆಗಿಲ್ಲ, ಅವರು ರಾಜ್ಯದ ಅತ್ಯಂತ ದಕ್ಷ ಹಾಗೂ ಜನಪರ ನಾಯಕ ಎಂದು ಬಣ್ಣಿಸಿದರು. ಅಲ್ಲದೆ, ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ ಅವರು, "ಇನ್ನೊಂದು ವಾರದೊಳಗೆ ಸ್ಟಿಂಗ್ ಆಪರೇಷನ್ ವಿವಾದಕ್ಕೆ ತೆರೆ ಎಳೆದು, ರೈತರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಒಂದು ವೇಳೆ ಸರ್ಕಾರ ಕ್ಯಾರೆ ಎನ್ನದಿದ್ದರೆ, ನಾವು ಸುಮ್ಮನಿರುವುದಿಲ್ಲ; ಅಖಂಡ ಕರ್ನಾಟಕ ಬಂದ್ ಕರೆ ನೀಡುತ್ತೇವೆ" ಎಂದು ಗುಡುಗಿದರು. ಬಂದ್ ಯಶಸ್ಸಿಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಭೆಗಳನ್ನು ನಡೆಸಿ ಜನಜಾಗೃತಿ ಮೂಡಿಸುವುದಾಗಿ ತಿಳಿಸಿದರು.

ಈ ಮಹತ್ವದ ಹೋರಾಟದಲ್ಲಿ ಕೈಜೋಡಿಸುವಂತೆ ರಾಜ್ಯದ ಎಲ್ಲಾ ಪ್ರಮುಖ ಕನ್ನಡಪರ ಸಂಘಟನೆಗಳ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಅವರು ಕಳಕಳಿಯ ಮನವಿ ಮಾಡಿದರು. ದಯವಿಟ್ಟು ಎಲ್ಲರೂ ರಾಜಕೀಯ ಬದಿಗಿಟ್ಟು ಬಂದ್ ಅನ್ನು ಬೆಂಬಲಿಸಿ, ರೈತರ ಧ್ವನಿಯಾಗಿ ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಪ್ರತಿಭಟನಾ ಸಭೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮುಖಂಡ ಶಿವಳ್ಳಿ ಚಂದ್ರಶೇಖರ್ ಸೇರಿದಂತೆ ನೂರಾರು ಕನ್ನಡಪರ ಕಾರ್ಯಕರ್ತರು, ರೈತರು ಭಾಗವಹಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES