ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ ಇಬ್ಬರ ನಡುವಿನ ಜಗಳ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಪುಂಡರು ಧಾಂದಲೆ ನಡೆಸಿ, ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಪಾಲಜೋಗಹಳ್ಳಿಯಲ್ಲಿ ನಡೆದಿದೆ. ರಾತ್ರಿ ಪಾಳಯದ ಕರ್ತವ್ಯದಲ್ಲಿದ್ದ 'ನಮ್ಮ 112' ತುರ್ತು ವಾಹನದ ಸಿಬ್ಬಂದಿ ಮಣಿಕಂಠ ಹಾಗೂ ರಾಯಪ್ಪ ಪೂಜಾರಿ ಹಲ್ಲೆಗೊಳಗಾದ ಪೊಲೀಸರು.
ಘಟನೆಯ ವಿವರ: ಪಾಲಜೋಗಹಳ್ಳಿಯಲ್ಲಿ ಇಬ್ಬರು ವ್ಯಕ್ತಿಗಳು ಮದ್ಯ ಸೇವಿಸಿ ಪರಸ್ಪರ ಭೀಕರವಾಗಿ ಹೊಡೆದಾಡಿಕೊಳ್ಳುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಕೂಡಲೇ 'ನಮ್ಮ 112' ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ರಾತ್ರಿ ಪಾಳಯದ ಪೊಲೀಸರು, ಜಗಳ ತಡೆಯಲು ಮುಂದಾಗಿದ್ದಾರೆ.
ಈ ವೇಳೆ ಆಕ್ರೋಶಗೊಂಡ ಆರೋಪಿಗಳಾದ ಫರ್ಹಾನ್ ಸಾರಿಹಾನ್ ಹಾಗೂ ಬಸೀರ್ ಅಲಿಯಾಸ್ ಗಿಡ್ಡ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ದಿಢೀರ್ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ಏಕಾಏಕಿ ದಾಳಿಯಿಂದಾಗಿ ಪೊಲೀಸ್ ಸಿಬ್ಬಂದಿಯ ಎದೆ, ಕೈ ಹಾಗೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಆಸ್ಪತ್ರೆಗೆ ದಾಖಲು – ಆರೋಪಿಗಳು ವಶಕ್ಕೆ: ಗಾಯಗೊಂಡ ಮಣಿಕಂಠ ಮತ್ತು ರಾಯಪ್ಪ ಪೂಜಾರಿ ಅವರನ್ನು ತಕ್ಷಣವೇ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು, ಹಲ್ಲೆ ನಡೆಸಿದ ಆರೋಪಿಗಳಾದ ಫರ್ಹಾನ್ ಸಾರಿಹಾನ್ ಮತ್ತು ಬಸೀರ್‌ನನ್ನು ತಕ್ಷಣವೇ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.