ಬೆಂಗಳೂರು : ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಏಕಕಾಲಕ್ಕೆ ಎದ್ದಿರುವ 'ಅವಳಿ ವಾಯುಭಾರ ಕುಸಿತ' ಈಗ ಕರ್ನಾಟಕದ ಮೇಲೆ ವರುಣನ ರೌದ್ರಾವತಾರಕ್ಕೆ ವೇದಿಕೆ ಸಜ್ಜುಗೊಳಿಸಿದೆ.. ಬಂಗಾಳಕೊಲ್ಲಿಯಲ್ಲಿರುವ ತೀವ್ರ ವಾಯುಭಾರ ಕುಸಿತವು ಸೋಮವಾರ ಮುಂಜಾನೆಯ ವೇಳೆಗೆ ಭೀಕರ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದ್ದು, ಇದರ ನೇರ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನ ಮೇಲೆ ಬೀಳಲಿದೆ..
ರಾಜಧಾನಿ ಬೆಂಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಅಕ್ಟೋಬರ್ 26 ಮತ್ತು 27ರಂದು ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ್' ಘೋಷಿಸಿದೆ.. ಈಗಾಗಲೇ ಕಳೆದ 24 ಗಂಟೆಗಳಲ್ಲಿ ಮಾಗಡಿ, ಕುಣಿಗಲ್, ಹಾಸನದಲ್ಲಿ ಮೇಘಸ್ಫೋಟದಂತಹ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.. ನಾಳೆಯ ಹವಾಮಾನ ಹೇಗಿರಲಿದೆ?.. ಎಲ್ಲೆಲ್ಲಿ ಭಾರೀ ಮಳೆಯಾಗಲಿದೆ?.. ಡಿಎನ್‌ಎ ಐದನೇ ಸುದ್ದಿಯಲ್ಲಿ ನೋಡೋಣ..
ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಅವಳಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಹಿಂಗಾರು ಮಳೆಯ ಆರ್ಭಟ ತೀವ್ರಗೊಂಡಿದೆ. ಬಂಗಾಳಕೊಲ್ಲಿಯ ಸಿಸ್ಟಮ್ ಸೋಮವಾರ ವೇಳೆಗೆ ಚಂಡಮಾರುತವಾಗಿ ಬದಲಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 26 ಮತ್ತು 27ರಂದು ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಸಿದೆ. ಹೀಗಾಗಿ ರಾಜಧಾನಿ ಬೆಂಗಳೂರು ನಗರ, ಮೈಸೂರು, ಗಡಿ ಜಿಲ್ಲೆ ಚಾಮರಾಜನಗರ ಹಾಗೂ ಮಲೆನಾಡಿನ ಕೊಡಗು ಜಿಲ್ಲೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಹಲವೆಡೆ ಮೇಘಸ್ಫೋಟ ಮಾದರಿಯ ಮಳೆಯಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ಭಾಗದಲ್ಲಿ 143.5 ಮಿ.ಮೀ ಹಾಗೂ ತುಮಕೂರಿನ ಕುಣಿಗಲ್ ಭಾಗದಲ್ಲಿ 138 ಮಿ.ಮೀ ನಷ್ಟು ಧಾರಾಕಾರ ಮಳೆ ಸುರಿದಿದೆ. ಇತ್ತ ಚಾಮರಾಜನಗರದಲ್ಲಿ ಸತತವಾಗಿ ಸುರಿದ ಮಳೆಗೆ ಕೃಷಿ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದು, ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಚಿತ್ರದುರ್ಗ ಹಾಗೂ ಮೊಳಕಾಲ್ಮುರು ಭಾಗದಲ್ಲೂ ಸ್ವಾತಿ ಮಳೆ ಉತ್ತಮವಾಗಿ ಸುರಿದಿದ್ದು, ನೀರಿಲ್ಲದೆ ಒಣಗುತ್ತಿದ್ದ ಅಡಿಕೆ ತೋಟಗಳಿಗೆ ಸಂಜೀವಿನಿಯಂತಾಗಿದೆ.
ಸೋಮವಾರದ ಭಾರಿ ಮಳೆಯ ನಂತರ, ಮಂಗಳವಾರದಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯ ತೀವ್ರತೆ ಕೊಂಚ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದಾಗ್ಯೂ ಮೋಡಕವಿದ ವಾತಾವರಣ ಮತ್ತು ಚಳಿಗಾಳಿ ಮುಂದುವರಿಯಲಿದೆ. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಒಣಹವೆ ಮತ್ತು ಬಿಸಿಲು ಇರಲಿದೆ. ಈ ಮಳೆಯು ಹಿಂಗಾರು ಬೆಳೆಗಳಾದ ಕಡ್ಲೆ, ಜೋಳ ಬಿತ್ತನೆಗೆ ವರದಾನವಾಗಿದ್ದರೂ, ಕಟಾವಿಗೆ ಬಂದಿರುವ ಭತ್ತದ ಪೈರು ನೆಲಕಚ್ಚುವ ಭೀತಿ ಎದುರಾಗಿದೆ. ಚಂಡಮಾರುತವು ಅಕ್ಟೋಬರ್ 28ಕ್ಕೆ ಆಂಧ್ರ ಕರಾವಳಿ ತಲುಪಲಿದ್ದು, ನವೆಂಬರ್ ಮೊದಲ ವಾರದಲ್ಲೂ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಒಟ್ಟಿನಲ್ಲಿ, ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಅವಳಿ ಪ್ರಭಾವದಿಂದಾಗಿಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವರುಣನ ಅಬ್ಬರ ಜೋರಾಗಿರಲಿದೆ. ಸೋಮವಾರದ ಚಂಡಮಾರುತದ ಹೊಡೆತಕ್ಕೆ ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಜಾಗರೂಕರಾಗಿರುವುದು ಒಳಿತು.