• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳು ಎಂದೆಂದಿಗೂ ಪ್ರಸ್ತುತ : ಮಾಜಿ ಸಿಎಂ ಸಿದ್ದರಾಮಯ್ಯ

ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳು ಎಂದೆಂದಿಗೂ ಪ್ರಸ್ತುತ : ಮಾಜಿ ಸಿಎಂ ಸಿದ್ದರಾಮಯ್ಯ

ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನವು ಅರ್ಥಪೂರ್ಣ ಸಮಾರೋಪ ಸಮಾರಂಭದೊಂದಿಗೆ ತೆರೆಕಂಡಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮಾಜದಲ್ಲಿ ಅಸಮಾನತೆ ತೊಲಗಿ ಸಮಾನತೆಯ ಸಮಾಜ ನಿರ್ಮಾಣವಾಗಲು ಶಿಕ್ಷಣ, ವೈಚಾರಿಕ ಚಿಂತನೆ ಹಾಗೂ ಸಂವಿಧಾನದ ಆಶಯಗಳ ಪಾಲನೆ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸಿದರು..

Written ByKrishna NK
Published: Oct 25, 2026, 07:52 PM IST|Updated: Oct 25, 2026, 07:53 PM IST
joinshare
ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳು ಎಂದೆಂದಿಗೂ ಪ್ರಸ್ತುತ : ಮಾಜಿ ಸಿಎಂ ಸಿದ್ದರಾಮಯ್ಯ
Image Credit: siddaramaiah

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳು ಎಂದೆಂದಿಗೂ ಪ್ರಸ್ತುತ : ಮಾಜಿ ಸಿಎಂ ಸಿದ್ದರಾಮಯ್ಯ

ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳು ಎಂದೆಂದಿಗೂ ಪ್ರಸ್ತುತ : ಮಾಜಿ ಸಿಎಂ ಸಿದ್ದರಾಮಯ್ಯ

2

ಬೆನ್ನುಮೂಳೆಗೆ ಕುತ್ತು ತರುವ 3 ದೈನಂದಿನ ತಪ್ಪುಗಳು! ನೀವು ಮಾಡ್ತಿರೋ ಈ ತಪ್ಪುಗಳ ಬಗ್ಗೆ ಎಚ್ಚರ

3

ಅವಳಿ ವಾಯುಭಾರ ಕುಸಿತದ ಅಬ್ಬರ : ಬೆಂಗಳೂರು ಸೇರಿದಂತೆ 4 ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್'!

4

ಬಾಂಬ್ ಬ್ಲಾಸ್ಟ್‌ಗೆ AI, ChatGPT, Gemini ಮೊರೆ! ರಾಯಚೂರಿನಿಂದ ಬಸ್‌ನಲ್ಲಿ ಬಾಂಬ್ ತಂದಿದ್ದ ಕಿಡಿಗೇಡಿಗಳು?

5

ಉದ್ರಿ ಕೊಡಲ್ಲ ಎಂದಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಚಾಕು ಇರಿದು ಕೊ*ಲೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಚಾಮರಾಜನಗರ: ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಳೆದ ಕೆಲವು ದಿನಗಳಿಂದ ಅತ್ಯಂತ ಸಡಗರ ಹಾಗೂ ಉತ್ಸಾಹದಿಂದ ಜರುಗಿದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಸಮಾರೋಪ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಈ ಬೃಹತ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುಖಂಡರಾದ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಈ ಎರಡು ದಿನಗಳ ಸಮ್ಮೇಳನದಲ್ಲಿ ಆರಂಭಿಕ ದಿನದ ಬೆಳಗಿನ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ ಚಾಲನೆ ನೀಡಿದ್ದರೆ, ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗುವ ಮೂಲಕ ಕಾರ್ಯಕ್ರಮದ ವಿಶೇಷ ಮೆರಗು ತಂದರು. ಈ ಸಮಾರಂಭದಲ್ಲಿ ಎಂಎಲ್ಸಿ ಶಿವಕುಮಾರ್, ತಿಮ್ಮಯ್ಯ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಹಲವು ಪ್ರಮುಖ ಶಾಸಕರು ಹಾಗೂ ಗಣ್ಯರು ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಮಾರೋಪ ಭಾಷಣದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇಂತಹ ಒಂದು ಮಹತ್ವದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಮ್ಮ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿರುವುದು ನಮಗೆಲ್ಲರಿಗೂ ಅತ್ಯಂತ ಸಂತಸದ ವಿಚಾರ ಎಂದರು. ಬೌದ್ಧ ಧರ್ಮದ ತತ್ವಗಳನ್ನು ಮತ್ತು ಬುದ್ಧನ ಬೋಧನೆಗಳನ್ನು ಕೇವಲ ಧರ್ಮವಾಗಿ ಮಾತ್ರವಲ್ಲದೆ, ಆಳವಾದ ಚಿಂತನೆ ಹಾಗೂ ವಿಚಾರಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಲಾಗಿದೆ ಎಂದು ಬಣ್ಣಿಸಿದರು.

ಇಂದಿನ ಆಧುನಿಕ ಕಾಲಘಟ್ಟದಲ್ಲೂ ಕೂಡ ಬುದ್ಧ, ಬಸವ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತಗಳು ಎಂದಿಗೂ ಪ್ರಸ್ತುತವಾಗಿವೆ ಎಂದು ಪ್ರತಿಪಾದಿಸಿದ ಅವರು, ಮಾನವೀಯತೆ, ಸಾಮಾಜಿಕ ನ್ಯಾಯ ಹಾಗೂ ಸಮಾಜದಲ್ಲಿ ದ್ವೇಷವಿರದೆ ಎಲ್ಲರ ನಡುವೆ ಪ್ರೀತಿ-ವಿಶ್ವಾಸವಿರಬೇಕು ಎಂಬುದೇ ಎಲ್ಲಾ ಮಹಾನ್ ದಾರ್ಶನಿಕರ ಮೂಲ ಸಂದೇಶವಾಗಿತ್ತು ಎಂದರು. ಹಿಂದೂ ಧರ್ಮದಲ್ಲಿದ್ದ ತಾರತಮ್ಯ ಮತ್ತು ಪಿಡುಗುಗಳನ್ನು ಹೋಗಲಾಡಿಸಲು ಅಂದಿನ ಕಾಲದಿಂದಲೂ ಅನೇಕ ಮಹಾನುಭಾವರು ಪ್ರಯತ್ನಿಸಿದ್ದಾರೆ. ಜೈನ ಹಾಗೂ ಬೌದ್ಧ ಧರ್ಮಗಳೆರಡೂ ಕೂಡ ಮನುಷ್ಯನ ಜೀವನದ ದುಃಖ ಮತ್ತು ನೋವುಗಳನ್ನು ಹೋಗಲಾಡಿಸುವ ದಾರಿಯನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟಿವೆ ಎಂದು ವಿವರಿಸಿದರು.

ಸಮಾಜದಲ್ಲಿ ಇಂದು ಕೂಡ ದುಃಖ ಮತ್ತು ನೋವುಗಳಿಗೆ ಕೊರತೆಯಿಲ್ಲ. ಇವ್ಯಾವುದಕ್ಕೂ ನಿಜವಾದ ಪರಿಹಾರ ಬೇಕೆಂದರೆ ಅದು ಬುದ್ಧನ ಮಾರ್ಗದಲ್ಲೇ ಸಿಗುತ್ತದೆ. ಅತಿಯಾಸೆಯೇ ಸಕಲ ದುಃಖಗಳಿಗೆ ಮೂಲ ಕಾರಣ ಎಂದು ಬುದ್ಧ ಬಹಳ ಹಿಂದೆಯೇ ಹೇಳಿದ್ದನು ಎಂದು ಸಿದ್ದರಾಮಯ್ಯ ನೆನಪಿಸಿದರು. ಹಿಂದೂ ಧರ್ಮದಲ್ಲಿ ಕಾಲಕ್ಕೆ ತಕ್ಕಂತೆ ಸುಧಾರಣೆಗಳಾಗದ ಕಾರಣದಿಂದಲೇ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಅಂತಿಮವಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಬೇಕಾಯಿತು. ಎಷ್ಟೇ ಪ್ರಯತ್ನಿಸಿದರೂ ಸಮಾಜದಲ್ಲಿದ್ದ ತಳಮಟ್ಟದ ಅಸಮಾನತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಿಲ್ಲ. ಒಂದು ನಿಜವಾದ ಸಮಾನತೆಯ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಎಲ್ಲ ರೀತಿಯ ತಾರತಮ್ಯಗಳು ಬೇರುಸಹಿತ ಕಿತ್ತುಹೋಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಶಿಕ್ಷಣದಿಂದ ವಂಚಿತರಾದ ಜನರನ್ನು ಎಂದಿಗೂ ದಡ್ಡರೆಂದು ಕರೆಯಬಾರದು, ಅವರಿಗೆ ವ್ಯವಸ್ಥೆಯಿಂದ ಅವಕಾಶಗಳು ಸಿಗಲಿಲ್ಲವಷ್ಟೇ. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಮಾತ್ರ ಒಂದು ಸಮ ಸಮಾಜದ ನಿರ್ಮಾಣ ಸಾಧ್ಯವಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳಿಗೆ ಬಲಬರದೆ ಹೋದರೆ ಸಮಾನತೆ ಎಂಬುದು ಮರೀಚಿಕೆಯಾಗುತ್ತದೆ. ದೇಶದ ಎಲ್ಲಾ ಸರ್ಕಾರಗಳು ಕಡ್ಡಾಯವಾಗಿ ಸಂವಿಧಾನದ ಚೌಕಟ್ಟಿನೊಳಗೆ, ಸಂವಿಧಾನ ಬದ್ಧವಾಗಿ ನಡೆಯಬೇಕು ಎಂದು ಅವರು ಎಚ್ಚರಿಸಿದರು.

ಸಂವಿಧಾನ ಜಾರಿಗೆ ಬಂದು ಏಳು ದಶಕಗಳು ಕಳೆದರೂ ಇಂದಿಗೂ ಸಮಾಜದಲ್ಲಿ ಸಂಪೂರ್ಣ ಸಮಾನತೆ ಸಿಕ್ಕಿಲ್ಲ, ಎಲ್ಲರಿಗೂ ಸಮಾನ ಅವಕಾಶಗಳು ಲಭ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಚುನಾವಣಾ ಸಮಯದಲ್ಲಿ ಜಾತಿ ರಾಜಕಾರಣ ಮಾಡುವವರು ಯಾರು? ಬೇರೆ ಯಾರೂ ಅಲ್ಲ, ಸ್ವತಃ ನಾವೇ ಆದ ಶಿಕ್ಷಿತರೇ ಮಾಡುತ್ತೇವೆ. ಸಮಾಜದಲ್ಲಿ ಶೇ. 80ರಷ್ಟು ಸುಶಿಕ್ಷಿತರಿದ್ದರೂ ಕೂಡ ಚುನಾವಣಾ ಸಮಯದಲ್ಲಿ ತಮ್ಮ ತಮ್ಮ ಜಾತಿಗಳಿಗೇ ಮತ ಹಾಕುತ್ತೇವೆ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಇಂದು ಶಿಕ್ಷಣ ಪಡೆದವರು ಕೂಡ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಳ್ಳುತ್ತಿಲ್ಲ. ಶಿಕ್ಷಣ ಎನ್ನುವುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ವೈಜ್ಞಾನಿಕ ಮತ್ತು ವೈಚಾರಿಕವಾಗಿರಬೇಕು; ಇದು ಬದಲಾಗದಿದ್ದರೆ ನಮ್ಮ ವ್ಯವಸ್ಥೆ ಎಂದಿಗೂ ಬದಲಾಗಲು ಸಾಧ್ಯವಿಲ್ಲ ಎಂದರು.

ಬುದ್ಧ ಮತ್ತು ಬಸವಣ್ಣನವರು ಎಂದಿಗೂ ಮೌಢ್ಯ ಹಾಗೂ ಕಂದಾಚಾರಗಳಲ್ಲಿ ನಂಬಿಕೆ ಇಟ್ಟವರಲ್ಲ. ಬುದ್ಧನ ನಿಜವಾದ ತತ್ವಗಳೇನು ಎಂಬುದನ್ನು ಸಂಪೂರ್ಣವಾಗಿ ಅರಿಯಬೇಕಾದರೆ ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಕೃತಿಗಳನ್ನು ತಪ್ಪದೆ ಓದಬೇಕು. ತಾನು ಅಧಿಕಾರದಲ್ಲಿದ್ದ ಅವಧಿಯಲ್ಲಿ ಸಮಾಜದ ಅಸಮಾನತೆಯನ್ನು ನಿವಾರಣೆ ಮಾಡಲು ನನ್ನ ಕೈಲಾದಷ್ಟು ಪ್ರಾಮಾಣಿಕ ಕೆಲಸಗಳನ್ನು ಮಾಡಿದ್ದೇನೆ ಎಂದು ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಬೌದ್ಧ ಅನುಯಾಯಿಗಳು ಉಪಸ್ಥಿತರಿದ್ದರು.

Add Zee News as a Preferred Source
TAGS:
Kannada News