SOCIAL MEDIA

Newsletter

PARTNER SITES
Select Language Select State

ಚಿತ್ರದುರ್ಗ ಸಮೀಪ ತಲೆ ಎತ್ತಲಿದೆ ಬುಡಕಟ್ಟು ವಿಶ್ವವಿದ್ಯಾಲಯ: ಸಚಿವ ಟಿ. ರಘುಮೂರ್ತಿ

ವಾಲ್ಮೀಕಿಯವರ ಆದರ್ಶಗಳು ಸದಾ ಪ್ರಸ್ತುತ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ಹೇಳಿದ್ದಾರೆ.

Written By Yashaswini V
Published: Oct 27, 2026, 05:12 PM IST | Updated: Oct 27, 2026, 05:18 PM IST
Join

ಬುಡಕಟ್ಟು ಸಮುದಾಯವರ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್‌ ಸರ್ಕಾರ ಸದಾ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಚಿತ್ರದುರ್ಗದ ಸಮೀಪ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದ್ದಾರೆ.

ಇಂದು (ಅ. 27) ಬೆಂಗಳೂರಿನಲ್ಲಿ ಜರುಗಿದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ, ಚಿತ್ರದುರ್ಗದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ತಲೆ ಎತ್ತಲಿದೆ. 120 ಎಕರೆ ಜಾಗದಲ್ಲಿ ʼಬುಡಕಟ್ಟು ವಿಶ್ವವಿದ್ಯಾಲಯʼವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬುಡಕಟ್ಟು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಲಾಗಿದೆ. ಈ ಕುರಿತಂತೆ ಶೀಘ್ರದಲ್ಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದು ಬುಡಕಟ್ಟು ಸಮುದಾಯದವರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಉದ್ದೇಶ ಹೊಂದಿದೆ. ಬುಡಕಟ್ಟು ಕಲೆ, ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು  ಸಾಂಪ್ರಾಯಿಕ ಜ್ಞಾನವನ್ನು ಅಧ್ಯಯನ ಮಾಡಬಹುದಾಗಿದೆ ಎಂದರು.

ಬುಡಕಟ್ಟು ಸಮುದಾಯಗಳ ಜೀವನ ಶೈಲಿ, ಸಾಮಾಜಿಕ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ ಹಾಗೂ ಇತರೆ ವ್ಯವಸ್ಥೆಗಳ ಕುರಿತು ಸಂಶೋಧನೆಗೆ ಉತ್ತೇಜನ ನೀಡಬುದಾಗಿದೆ. ಕೌಶಲ್ಯಾಧಾರಿತ ಶಿಕ್ಷಣ, ವೃತ್ತಿಪರ ಕೋರ್ಸ್‌ ಮೂಲಕ ಉದ್ಯೋಗಕ್ಕೆ ಅಗತ್ಯ ಶಿಕ್ಷಣ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ ಎಂದು ಸಚಿವ ರಘುಮೂರ್ತಿ ತಿಳಿಸಿದರು.

ಈ ವೇಳೆ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೆ ವೇದಿಕೆಯಲ್ಲೇ ಸ್ಪಷ್ಟನೆ ನೀಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ, ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಎಲ್ಲರೂ ಒಂದೊಂದು ಸಾಧನೆ ಮಾಡಿದವರೇ ಆಗಿದ್ದಾರೆ ಎಂದರು.

ಪ್ರಶಸ್ತಿ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಉಗ್ರಪ್ಪ ಅವರಿಗೂ ವೇದಿಕೆಯಲ್ಲಿಯೇ ಸಚಿವರು ಸ್ಪಷ್ಟನೆ ನೀಡಿದರು. ಪ್ರಶಸ್ತಿಗೆ ಆಯ್ಕೆಯಾದವರು ತಮ್ಮದೇ ರೀತಿಯಲ್ಲಿ ಸಮುದಾಯದ ಏಳಿಗೆಗೆ, ದಮನಿತರ ಪರವಾಗಿ ದನಿ ಎತ್ತಿದ್ದಾರೆ ಎಂದು ಹೇಳಿದರು.

ವೀರ ಮದಕರಿನಾಯಕ ವಾಲ್ಮೀಕ ಸಂಘ, ರೈಲ್ವೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಎಂ.ಜಿ. ರೈಲ್ವೆ ಕಾಲೋನಿ ಬಳಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಭಾಷಣ ಮಾಡಿದ ರಘುಮೂರ್ತಿ ಅವರು ಶ್ರೀ ವಾಲ್ಮೀಕಿಯವರು ಮಾತೃಹೃದಯ ಹೊಂದಿದ ಸಂತ ಶ್ರೇಷ್ಠ ಮಹಾನ್ ಮಾನವತಾ ವಾದಿ, ದಾರ್ಶನಿಕ, ಮಾದರಿ ನೀತಿ ಶಾಸ್ತ್ರಜ್ಞ, ತತ್ವಜ್ಞಾನಿ, ಮಹಾನ್ ಚಿಂತಕ, ಸಮಾಜ ಸುಧಾರಕ ಎಂದು ಸಚಿವರು ತಿಳಿಸಿದ್ದಾರೆ.

ಮನೆಯಲ್ಲಿ ವಾಲ್ಮೀಕಿಗೆ ಪೂಜೆ ಮಾಡಿ: ಸ್ವಾಮೀಜಿಗಳ ಕರೆ:
ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಡಾ. ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿಗಳು, ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಕರೆ ನೀಡಿದರು. ಆರ್ಥಿಕವಾಗಿ ಶಕ್ತಿವಂತರು ಅನ್ನದಾಸೋಹ ಕೂಡ ಏರ್ಪಡಿಸಬೇಕು. ಅದು ಮಾಡಲು ಆಗದವರು ಮನೆಯಲ್ಲಿ ಕಡ್ಡಾಯವಾಗಿ ಪೂಜೆ ಮಾಡಿ, ಹಬ್ಬದಂತೆ ಜಯಂತಿಯನ್ನು ಆಚರಿಸಬೇಕು ಎಂದು ಸ್ವಾಮೀಜಿಗಳು ತಿಳಿಸಿದರು.

ಬೆಂಗಳೂರಿನಲ್ಲಿರುವ ಮೆಟ್ರೋ ನಿಲ್ದಾಣವೊಂದಕ್ಕೆ ಮಹರ್ಷಿ ವಾಲ್ಮೀಕಿ ಹೆಸರನ್ನು ಇಡಬೇಕು ಎಂದು ಸ್ವಾಮೀಜಿಗಳು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ಮಾಜಿ ಸಚಿವರಾದ ದಿನೇಶ್‌ ಗುಂಡೂರಾವ್‌, ಮಾಜಿ ಸಂಸದರಾದ ಬಿ.ವಿ. ನಾಯಕ್‌, ನಿವೃತ್ತ ನ್ಯಾಯಮೂರ್ತಿಗಳಾದ ಎನ್‌.ಎಸ್‌. ಪಾಟೀಲ್‌, ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES