SOCIAL MEDIA

Newsletter

PARTNER SITES
Select Language Select State

ಪೊಲೀಸ್ ಕಮಿಷನರ್‌ ಹೇಳಿಕೆ ಬೆನ್ನಲ್ಲೇ ಹೆಚ್‌ಡಿಕೆ ಗರಂ..! ದಾಖಲೆ ಸ್ಪೋಟಕ್ಕೆ ಸಮಯ ನಿಗದಿ ಮಾಡಿದ ಕೇಂದ್ರ ಸಚಿವ

ಸ್ಟಿಂಗ್ ಆಪರೇಷನ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಸಿಸಿಬಿ ತನಿಖೆಯಲ್ಲಿ ತಮ್ಮ ದೆಹಲಿ ನಿವಾಸದ ಲಿಂಕ್ ಪ್ರಸ್ತಾಪಿಸಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ನಾಳೆ (ಸೋಮವಾರ) ಬೆಳಿಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸ್ಫೋಟಕ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Written By Krishna NK
Published: Nov 01, 2026, 08:58 PM IST | Updated: Nov 01, 2026, 09:02 PM IST
Image Credit: HD Kumaraswamy
Join

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಿಸಿಬಿ (CCB) ಪೊಲೀಸರು ತಮ್ಮ ದೆಹಲಿ ನಿವಾಸದ ಲಿಂಕ್ ಪ್ರಸ್ತಾಪಿಸಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಪೊಲೀಸ್ ಆಯುಕ್ತರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, "ಈ ಕುಮಾರಸ್ವಾಮಿಯನ್ನು ಅಷ್ಟು ಸುಲಭವಾಗಿ ಯಾರೂ ಮುಟ್ಟಲು ಸಾಧ್ಯವಿಲ್ಲ" ಎಂದು ನೇರ ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ವಿಡಿಯೋ ಅಪ್‌ಲೋಡ್ ಮಾಡಲು ಬಳಸಲಾದ ಮೊಬೈಲ್ ಫೋನ್ ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದ ಬಳಿ ವಿನಿಮಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೀಡಿರುವ ಹೇಳಿಕೆಯನ್ನು ಅತ್ಯಂತ ಕಟುವಾಗಿ ಖಂಡಿಸಿದರು. "ಯಾರೀ ಆ ಕಮಿಷನರ್? ಅವರು ನಿಜಕ್ಕೂ ಪೊಲೀಸ್ ಕಮಿಷನರಾ ಅಥವಾ ಹೆಡ್ ಕ್ಲರ್ಕಾ? ತಮ್ಮ ಹುದ್ದೆ ಮತ್ತು ಕುರ್ಚಿ ಉಳಿಸಿಕೊಳ್ಳಲು ಯಾರೋ ಕೆಲವರ ಹಂಗಿನಲ್ಲಿ ಈ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ" ಎಂದು ಹರಿಹಾಯ್ದರು.

ಇದೇ ವೇಳೆ, ಸಚಿವ ಪ್ರಿಯಾಂಕ್ ಖರ್ಗೆ ಅವರ ‘ಟ್ರೇಲರ್ ಅಷ್ಟೇ ಮುಗಿದಿದೆ, ಪಿಕ್ಚರ್ ಅಭೀ ಬಾಕಿ ಹೈ’ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಹೆಚ್‌ಡಿಕೆ, "ನಾನು ಮೂಲತಃ ಸಿನಿಮಾ ನಿರ್ಮಾಪಕ, ನಾನು ಇವರಿಂದ ಸಿನಿಮಾ ಕಲಿಯುವ ಅಗತ್ಯವಿಲ್ಲ. ಈಗ ಅವರೇ ಸಿನಿಮಾ ಮಾಡಲು ಹೊರಟಿದ್ದಾರೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ನಾನೇ ಅಸಲಿ ಪಿಕ್ಚರ್ ತೋರಿಸುತ್ತೇನೆ. ಈ ಸ್ಟಿಂಗ್ ಆಪರೇಷನ್ ಪ್ರಕರಣ ಯಾರಿಗೆ ತಿರುಗುಬಾಣವಾಗಲಿದೆ, ಸರ್ಕಾರ ಯಾರನ್ನೆಲ್ಲ ರಕ್ಷಿಸಲು ಹೊರಟಿದೆ ಮತ್ತು ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಎಲ್ಲಾ ದಾಖಲೆಗಳ ಸಮೇತ ಜನರ ಮುಂದಿಡುತ್ತೇನೆ" ಎಂದು ಗುಡುಗಿದರು.

ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದನ್ನು ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಗಳನ್ನೂ ಕುಮಾರಸ್ವಾಮಿ ಈ ವೇಳೆ ಪ್ರಸ್ತಾಪಿಸಿದರು. ಯಾರೂ ಭಯಪಡುವ ಅಥವಾ ಗಾಬರಿಯಾಗುವ ಅಗತ್ಯವಿಲ್ಲ ಎಂದು ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಅವರು ಧೈರ್ಯ ತುಂಬಿದರು. ಒಟ್ಟಾರೆ, ಸೋಮವಾರ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಯಾವೆಲ್ಲಾ ಸ್ಫೋಟಕ ದಾಖಲೆಗಳನ್ನು ಹೊರಹಾಕಲಿದ್ದಾರೆ ಎಂಬುದು ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES