SOCIAL MEDIA

Newsletter

PARTNER SITES
Select Language Select State

KMF ಬ್ರಹ್ಮಾಂಡ ಭ್ರಷ್ಟಾಚಾರ : ರಾಬಕೊವಿ ಹಾಲು ಒಕ್ಕೂಟದಲ್ಲಿ ₹16.5 ಕೋಟಿ ಅವ್ಯವಹಾರ ಆರೋಪ

ರೈತರ ಬದುಕಿಗೆ ಆಸರೆಯಾಗಬೇಕಿದ್ದ ಹಾಲು ಒಕ್ಕೂಟದಲ್ಲೇ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆಯಾ? ಜಾನುವಾರುಗಳ ವಿಮೆ ಪರಿಹಾರ ಹಾಗೂ ರೈತ ಕಲ್ಯಾಣ ಟ್ರಸ್ಟ್‌ಗೆ ಸೇರಿದ ಹಣ ರೈತರ ಕೈ ಸೇರಬೇಕಿತ್ತು. ಆದ್ರೆ, ಬರೋಬ್ಬರಿ 16.5 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 15, 2026, 06:31 PM IST | Updated: Oct 15, 2026, 06:37 PM IST
Image Credit: KMF News
Join

ಬಳ್ಳಾರಿ : ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಈ ಅಕ್ರಮಕ್ಕೆ ಸಂಬಂಧಿಸಿದಂತೆ, ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಆರು ಜನರ ವಿರುದ್ಧ ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕುಟುಂಬಸ್ಥರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ, ಶೇಕಡಾ 80ರಷ್ಟು ನಕಲಿ ದಾಖಲೆಗಳ ಬಳಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ದೂರುದಾರರು ಮಾಡಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ? ಇಲ್ಲಿದೆ ಕಂಪ್ಲೀಟ್ ಸ್ಟೋರಿ....

ಹೌದು.. ರೈತರ ಹಿತ ಕಾಯಬೇಕಾದ ಹಾಲು ಒಕ್ಕೂಟದಲ್ಲೇ ಬಹುಕೋಟಿ ಅವ್ಯವಹಾರದ ಆರೋಪ ಕೇಳಿಬಂದಿದೆ.. ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಜಾನುವಾರುಗಳ ವಿಮೆ ಪರಿಹಾರ ಹಾಗೂ ರೈತ ಕಲ್ಯಾಣ ಟ್ರಸ್ಟ್‌ನ ಹಣ ಸೇರಿದಂತೆ ₹16.5 ಕೋಟಿಗೂ ಅಧಿಕ ಮೊತ್ತ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಒಕ್ಕೂಟದ ಮಾಜಿ ನಿರ್ದೇಶಕ ಧನಂಜಯ ಹಮಾಲ್ ನೀಡಿದ ದೂರಿನ ಆಧಾರದಲ್ಲಿ, ವ್ಯವಸ್ಥಾಪಕ ನಿರ್ದೇಶಕ ಎಸ್. ಸುದರ್ಶನ ರೆಡ್ಡಿ ಸೇರಿದಂತೆ ಆರು ಜನರ ವಿರುದ್ಧ ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

2018ರಿಂದ 2026ರ ನಡುವಿನ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ, ದೂರುದಾರ ಧನಂಜಯ ಹಮಾಲ್ ಅವರು ತಮ್ಮ ಹೇಳಿಕೆಯಲ್ಲಿ 2022ರಿಂದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಒಕ್ಕೂಟಕ್ಕೆ ಹಾಲು ಪೂರೈಸುವ ರೈತರ ಜಾನುವಾರುಗಳಿಗೆ ಖಾಸಗಿ ವಿಮಾ ಕಂಪನಿಗಳ ಮೂಲಕ ವಿಮೆ ಮಾಡಿಸಲಾಗುತ್ತಿತ್ತು. ವಿಮಾ ಪ್ರೀಮಿಯಂ ಮೊತ್ತದಲ್ಲಿ ಶೇಕಡಾ 60ರಷ್ಟನ್ನು ಒಕ್ಕೂಟ ಹಾಗೂ ಶೇಕಡಾ 40ರಷ್ಟನ್ನು ರೈತರು ಪಾವತಿಸುತ್ತಿದ್ದರು ಎನ್ನಲಾಗಿದೆ.

ವಿಮಾ ಸೌಲಭ್ಯ ಹೊಂದಿದ್ದ ಜಾನುವಾರುಗಳು ಮೃತಪಟ್ಟಾಗ, ವಿಮಾ ಕಂಪನಿಗಳಿಂದ ದೊರೆಯುವ ಪರಿಹಾರದ ಹಣವನ್ನು ಸಂಬಂಧಪಟ್ಟ ರೈತರಿಗೆ ತಲುಪಿಸಬೇಕಿತ್ತು. ಆದರೆ, ರೈತರಿಗೆ ಸೇರಬೇಕಿದ್ದ ಪರಿಹಾರದ ಹಣ ಹಾಗೂ ರೈತ ಕಲ್ಯಾಣ ಟ್ರಸ್ಟ್‌ನ ಹಣವನ್ನು ಫಲಾನುಭವಿಗಳಿಗೆ ನೀಡದೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ದೂರಿನ ಪ್ರಮುಖ ಆರೋಪವಾಗಿದೆ.

ಇನ್ನು, ರೈತರ ಖಾತೆಗಳಿಗೆ ಜಮೆಯಾಗಬೇಕಿದ್ದ ಹಣವನ್ನು ಆರೋಪಿಗಳ ಪರಿಚಯಸ್ಥರು ಹಾಗೂ ಕುಟುಂಬಸ್ಥರಿಗೆ ಸೇರಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆ. ಬಸವರಾಜ, ಕೆ. ಈರಮ್ಮ, ಸಾಗರಬಾಬು, ಸಾಗರ ರಾಣಿ ಸೇರಿದಂತೆ ಇತರರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಾಲು ಒಕ್ಕೂಟದ ಅಕೌಂಟೆಂಟ್‌ಗಳ ಮೂಲಕ ಅಕ್ರಮ ನಡೆದಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ. ಶೇಕಡಾ 80ರಷ್ಟು ದಾಖಲೆಗಳು ಬೋಗಸ್ ಆಗಿವೆ ಎಂದು ದೂರುದಾರ ಧನಂಜಯ ಹಾವಲ್ ಗಂಭೀರ ಆರೋಪ ಮಾಡಿದ್ದಾರೆ. ಕುಟುಂಬಸ್ಥರ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಜಮೆಯಾಗಿರುವುದು ಅವ್ಯವಹಾರಕ್ಕೆ ಸಾಕ್ಷಿ ಎಂದು ಅವರು ಪ್ರತಿಪಾದಿಸಿದ್ದಾರೆ.
ಆದರೆ, ಈ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ದೃಢಪಡಬೇಕಿದೆ...

ಈ ಪ್ರಕರಣದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್. ಸುದರ್ಶನ ರೆಡ್ಡಿ, ನಿವೃತ್ತ ಉಪ ವ್ಯವಸ್ಥಾಪಕ ಹಾಗೂ ಹಾಲಿ ನಿರ್ದೇಶಕ ಎಚ್. ಮರುಳಸಿದ್ದಪ್ಪ, ಆಡಳಿತ ಮತ್ತು ಯೋಜನೆಗಳ ಉಪ ವ್ಯವಸ್ಥಾಪಕ ವೆಂಕಟೇಶ್ ಜವಳಿ, ಪಶುವೈದ್ಯಾಧಿಕಾರಿ ಶಂಭುಕುಮಾರ್, ಡೆಪ್ಯುಟಿ ಮ್ಯಾನೇಜರ್ ಹನುಮಂತ ಗೌಡ ಹಾಗೂ ಅಕೌಂಟೆಂಟ್ ಸಹಾಯಕಿ ಉಮಾಮಹೇಶ್ವರಿ ವಿರುದ್ಧ ದೂರು ನೀಡಲಾಗಿದೆ.
ಇವರಲ್ಲಿ ಮಾಜಿ ಮ್ಯಾನೇಜರ್ ಹಾಗೂ ಹಾಲಿ ನಿರ್ದೇಶಕ ಮರುಳಸಿದ್ದಪ್ಪ ಅವರು ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಹಣದ ವರ್ಗಾವಣೆ ಹಾಗೂ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ.ಕೂಡಲೇ ತನಿಖೆ ನಡೆಸಬೇಕು ಎಂದು ರೈತರು ಆಗ್ರಹ ಮಾಡಿದ್ದಾರೆ.

ರೈತರ ಜಾನುವಾರುಗಳಿಗೆ ವಿಮೆ ಮಾಡಿಸಿ, ಅವು ಮೃತಪಟ್ಟ ಸಂದರ್ಭದಲ್ಲಿ ಸಿಗಬೇಕಾದ ಪರಿಹಾರದ ಹಣವೇ ರೈತರಿಗೆ ತಲುಪಿಲ್ಲ ಎಂಬ ಆರೋಪ ಇದೀಗ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ₹16.5 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎನ್ನಲಾಗಿರುವ ಈ ಪ್ರಕರಣದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಹಣ ದುರುಪಯೋಗವಾಗಿದ್ದರೆ ಅದನ್ನು ವಾಪಸ್ ಪಡೆದು ಅರ್ಹ ರೈತರಿಗೆ ತಲುಪಿಸಬೇಕು. ಜೊತೆಗೆ, ತಪ್ಪಿತಸ್ಥರೆಂದು ಸಾಬೀತಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ದೂರುದಾರರ ಆಗ್ರಹವಾಗಿದೆ.

ಒಟ್ಟಿನಲ್ಲಿ, ರೈತರ ಹಣ ದುರುಪಯೋಗದ ಆರೋಪದೊಂದಿಗೆ ರಾಬಕೊವಿ ಹಾಲು ಒಕ್ಕೂಟದ ವಿರುದ್ಧ ಗಂಭೀರ ಪ್ರಶ್ನೆಗಳು ಎದ್ದಿವೆ. ಕುಟುಂಬಸ್ಥರ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆಯೇ? ದಾಖಲೆಗಳು ನಕಲಿಯಾಗಿವೆಯೇ? ₹16.5 ಕೋಟಿಗೂ ಅಧಿಕ ಮೊತ್ತದ ಹಣ ಎಲ್ಲಿ ಹೋಯಿತು? ಎಂಬೆಲ್ಲಾ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES