SOCIAL MEDIA

Newsletter

PARTNER SITES
Select Language Select State

ಮೈಸೂರು ದಸರಾ ವ್ಯವಸ್ಥೆ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ತೀವ್ರ ಅಸಮಾಧಾನ

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಜ್ರಮುಷ್ಠಿ ಕಾಳಗದ ವೇಳೆ ಪೊಲೀಸರ ನಡವಳಿಕೆಯನ್ನು ರಾಜಮಾತೆ ತೀವ್ರವಾಗಿ ಟೀಕಿಸಿದ್ದಾರೆ. ಜಟ್ಟಿ ಸಮುದಾಯ ಹಾಗೂ ಪೊಲೀಸರ ನಡುವಿನ ಸಮನ್ವಯದ ಕೊರತೆಯಿಂದ ಈ ಬಾರಿ ಕಾಳಗ ರದ್ದಾಗಿದೆ.

Reported By Manjunath Naragund Written By Manjunath Naragund
Published: Oct 26, 2026, 12:31 PM IST | Updated: Oct 26, 2026, 12:48 PM IST
Image Credit: Pramodadevi Odeyar
Join

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆ ಹಾಗೂ ಆಡಳಿತಾತ್ಮಕ ವೈಫಲ್ಯಗಳ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಪೊಲೀಸ್ ಇಲಾಖೆಯ ಸಮನ್ವಯದ ಕೊರತೆಯನ್ನು ಖಂಡಿಸಿ ಅವರು ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿದ್ದು, ಸರ್ಕಾರದ ಧೋರಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಜ್ರಮುಷ್ಠಿ ಕಾಳಗದ ವೇಳೆ ಪೊಲೀಸರ ನಡವಳಿಕೆಯನ್ನು ರಾಜಮಾತೆ ತೀವ್ರವಾಗಿ ಟೀಕಿಸಿದ್ದಾರೆ. ಜಟ್ಟಿ ಸಮುದಾಯ ಹಾಗೂ ಪೊಲೀಸರ ನಡುವಿನ ಸಮನ್ವಯದ ಕೊರತೆಯಿಂದ ಈ ಬಾರಿ ಕಾಳಗ ರದ್ದಾಗಿದೆ. ಇತಿಹಾಸದಲ್ಲಿ 1970, 1980 ಹಾಗೂ 2020ರಲ್ಲೂ ಕೆಲವು ಕಾರಣಗಳಿಂದ ಇದು ನಿಂತಿದೆ. ವಜ್ರಮುಷ್ಠಿ ಕಾಳಗಕ್ಕೆ ಧಾರ್ಮಿಕ ಮಹತ್ವವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ವಿಜಯಯಾತ್ರೆ ಮಾತ್ರ ನಿಗದಿತ ಮುಹೂರ್ತದಂತೆ ನಡೆದಿದೆ ಎಂದಿದ್ದಾರೆ. ಇನ್ನು ಪೊಲೀಸ್ ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಚಿನ್ನದ ಅಂಬಾರಿ ವಿಷಯದಲ್ಲೂ ಪೊಲೀಸರ ನಿರ್ಲಕ್ಷ್ಯಕ್ಕೆ ರಾಜಮಾತೆ ಕಿಡಿಕಾರಿದ್ದಾರೆ. ಪೊಲೀಸ್ ಆಯುಕ್ತರು ನೀಡಿದ ಭರವಸೆಯ ಮೇರೆಗೆ ಅಂಬಾರಿ ನೀಡಲಾಗಿತ್ತು. ಆದರೆ, ಅಂಬಾರಿ ಸುತ್ತಮುತ್ತ ಅನಧಿಕೃತ ವ್ಯಕ್ತಿಗಳ ಓಡಾಟ ಹೆಚ್ಚಾಗಿತ್ತು. ಅಂಬಾರಿ ಸರ್ಕಾರದ ಸ್ವಾಮ್ಯದ್ದಲ್ಲ, ಅದು ನಮ್ಮ ಖಾಸಗಿ ಆಸ್ತಿ. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಪೊಲೀಸರು ಹಾಗೂ ಅವರ ಕುಟುಂಬಸ್ಥರು ಅಂಬಾರಿ ಬಳಿ ಸುಳಿದಾಡಿ, ಅದರ ಭದ್ರತೆಗೆ ಧಕ್ಕೆ ತಂದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ರಾಜ ಕುಟುಂಬಕ್ಕಾಗಿ ಮೀಸಲಿರಿಸಿದ್ದ ಖಾಸಗಿ ಸ್ಥಳವನ್ನು ಪೊಲೀಸರು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ. ಅನಧಿಕೃತ ತಡೆಬೇಲಿ ಹಾಕಿ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಪಡಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ವಿರುದ್ಧ ನೇರ ಆರೋಪ ಮಾಡಿರುವ ಅವರು, ನಮ್ಮ ಧಾರ್ಮಿಕ ಕಾರ್ಯಗಳಿಗೆ ಸರ್ಕಾರಿ ಅಧಿಕಾರಿಗಳಿಂದಲೇ ಅಡೆತಡೆಗಳುುಂಟಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ, ಪ್ರತಿ ವರ್ಷವೂ ಸಹಕಾರ ನೀಡುತ್ತಾ ಬಂದಿದ್ದೇವೆ. ಆದರೆ, ನವರಾತ್ರಿ ಆಚರಣೆಯಲ್ಲಿ ನಮ್ಮ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಉಚ್ಛ ನ್ಯಾಯಾಲಯದ ಮೊರೆ ಹೋಗಲು ನಮಗೆ ಸ್ವಾತಂತ್ರ್ಯವಿದೆ ಎಂದು ರಾಜಮಾತೆ ಎಚ್ಚರಿಕೆ ನೀಡಿದ್ದಾರೆ.

ಅಂತಿಮವಾಗಿ, ಅಂಬಾರಿ ಹೊರುವ ಆನೆ ಆಯ್ಕೆ ವಿಷಯವನ್ನು ಕೊನೆಯ ಕ್ಷಣದವರೆಗೂ ಗೌಪ್ಯವಾಗಿಡಲಾಗಿತ್ತು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ 45 ವರ್ಷಗಳಲ್ಲಿ ಮೊದಲ ಬಾರಿಗೆ ಈ ರೀತಿ ರಹಸ್ಯವಾಗಿಡಲಾಗಿದೆ.ಕಾರ್ಯಕ್ರಮಕ್ಕೆ ಐದು ದಿನ ಇರುವಾಗ ನಾನೇ ಖುದ್ದು ಡಿಸಿಎಫ್ ಬಳಿ ಯಾವ ಆನೆಗೆ ಅಂಬಾರಿ ಹೊರೆಸುತ್ತೀರಿ ಎಂದು ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ನಮ್ಮ ಸಹಕಾರವನ್ನೇ ಕೇವಲ ಸಾಮಾನ್ಯ ಸಂಗತಿ ಎಂದು ಪರಿಗಣಿಸಿ ನಿರ್ಲಕ್ಷ್ಯ ತೋರುತ್ತಿರುವುದು ತೀವ್ರ ನಿರಾಸೆ ತಂದಿದೆ. ಮುಂದೆ ಸರ್ಕಾರ ನನ್ನ ಸಲಹೆಗಳನ್ನು ಪರಿಗಣಿಸಬೇಕು ಎಂದು ಪ್ರಮೋದಾದೇವಿ ಒಡೆಯರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES