SOCIAL MEDIA

Newsletter

PARTNER SITES
Select Language Select State

ಇಂದೇ ಕ್ಯಾಬಿನೆಟ್‌ ಸಭೆ: ನಂದಿನಿ ಹಾಲಿನ ದರ ಏರಿಕೆ ಫಿಕ್ಸ್!‌

ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಬಳಿಕ ಈಗ ನಂದಿನಿ ಹಾಲಿ ದರ ಹೆಚ್ಚಾಗುವುದು ಕೂಡ ಗ್ಯಾರಂಟಿ. ಎಷ್ಟು ಹೆಚ್ಚು ಮಾಡಬೇಕು? ಯಾವಾಗಿನಿಂದ ಬೆಲೆ ಏರಿಕೆಯಾಗುತ್ತೆ ಎನ್ನುವುದು ಇವತ್ತೇ ಡಿಸೈಡ್ ಆಗುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿಯನ್ನು ಪೂರ್ತಿ ಓದಿ.

Written By Yashaswini V
Published: Oct 06, 2026, 11:08 AM IST | Updated: Oct 06, 2026, 11:10 AM IST
Join

ಇದು ನಿಜಕ್ಕೂ ಗ್ರಾಹಕರಿಗೆ ಕಹಿ ಸುದ್ದಿ. ಹಾಲಿನ ಬೆಲೆ ಏರಿಕೆ ಆಗುವುದರಲ್ಲಿ ಈಗ ಯಾವ್ಯಾವ ಅನುಮಾನಗಳು ಉಳಿದಿಲ್ಲ. ಇನ್ನೇನಿದ್ದರೂ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಬೆಲೆ ಏರಿಸಲಿ ಎಂದುಕೊಳ್ಳಬೇಕು ಅಷ್ಟೇ. ಏಕೆಂದರೆ ರಾಜ್ಯದ ವಿವಿಧ ಹಾಲು ಉತ್ಪಾದನಾ ಒಕ್ಕೂಟಗಳು ನಂದಿನಿ ಹಾಲಿನ ದರ ಏರಿಕೆ ಮಾಡಬೇಕು ಎಂದು ರಾಜ್ಯ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿವೆ. ಅದರಿಂದಾಗಿ ರಾಜ್ಯ ಸರ್ಕಾರ ಇವತ್ತು ನಂದಿನಿ ಹಾಲಿನ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಒಕ್ಕೂಟಗಳು ಹಾಲಿನ ದರ ಏರಿಕೆಗೆ ಒತ್ತಾಯಿಸುತ್ತಿರುವುದೇಕೆ?
ರಾಜ್ಯದಲ್ಲಿ ಈಗ ತೀವ್ರ ರೀತಿಯ ಬರ ಇದೆ. 25ರಿಂದ 30 ತಾಲೂಕು ಹಾಗೂ ಬೆಂಗಳೂರು ಸೇರಿಂದಂತೆ ನಗರ ಪ್ರದೇಶಗಳನ್ನು ಬಿಟ್ಟರೆ ಇಡೀ ರಾಜ್ಯವೇ ಬರಪೀಡಿತ ಎಂದು ಘೋಷಣೆಯಾಗಿದೆ. ಬರ ಇರುವುದರಿಂದ ಹಸುಗಳಿಗೆ ಹುಲ್ಲಿನ ಖರ್ಚು ಮತ್ತು ಫೀಡ್ಸ್ ಖರ್ಚು ಹೆಚ್ಚಾಗುತ್ತಿದೆ. ಇದು ರೈತರಿಗೆ ಹೊರೆಯಾಗುತ್ತಿದೆ. ಬರದಂತಹ ಕಷ್ಟದ ಸಂದರ್ಭದಲ್ಲಿ ಒಕ್ಕೂಟಗಳು ರೈತರ (ಹಾಲು ಉತ್ಪಾದಕರ) ಪರ ನಿಲ್ಲಬೇಕಾಗುತ್ತದೆ. ಅದಕ್ಕಾಗಿ ಅವರು ಡೈರಿಗಳಿಗೆ ಹಾಕುವ ಹಾಲಿಗೆ ಹೆಚ್ಚಿನ ದರ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹಾಲಿನ ದರ ಏರಿಸಿ ಎಂದು ರಾಜ್ಯದ ವಿವಿಧ ಹಾಲು ಉತ್ಪಾದನಾ ಒಕ್ಕೂಟಗಳು ನಂದಿನಿ ಹಾಲಿನ ದರ ಏರಿಕೆ ಮಾಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.

ಒಂದು ಲೀಟರ್ ಹಾಲಿಗೆ ಎಷ್ಟು ರೂಪಾಯಿ ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ?
ವಿವಿಧ ಹಾಲು ಉತ್ಪಾದನಾ ಒಕ್ಕೂಟಗಳು ಪ್ರತಿ ಒಂದು ಲೀಟರ್‌ ಹಾಲಿಗೆ ಬರೋಬ್ಬರಿ 10 ರೂಪಾಯಿ ಹೆಚ್ಚಳ ಮಾಡಬೇಕು. ಆಗ ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್ ಹಾಲಿಗೆ ಏಳು ರೂಪಾಯಿ ಹೆಚ್ಚಳ ಮಾಡಬಹುದು. ಉಳಿದ ಮೂರು ರೂಪಾಯಿಗಳನ್ನು ಒಕ್ಕೂಟಗಳು ಇಟ್ಟುಕೊಳ್ಳಬಹುದು. ಹೀಗೆ ಮಾಡಿದರೆ ಮಾತ್ರ ಹಾಲು ಉತ್ಪಾದಕರಾದ ರೈತರ ಹಿತ ಕಾಯಲು ಸಾಧ್ಯ ಮತ್ತು ಹಾಲು ಉತ್ಪಾದಕ ಒಕ್ಕೂಟಗಳು ಉಳಿಯಲು ಸಾಧ್ಯ ಎಂದು ಸರ್ಕಾರಕ್ಕೆ ತಿಳಿಸಿವೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಹಾಲು ಉತ್ಪಾದನಾ ಒಕ್ಕೂಟಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ.

ಸರ್ಕಾರ ಒಂದು ಲೀಟರ್ ಹಾಲಿಗೆ ಎಷ್ಟು ರೂಪಾಯಿ ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ?
ಬರದ ಬವಣೆಯಿಂದ ಬಳಲುತ್ತಿರುವ ರೈತರ ಮತ್ತು ಹಾಲು ಉತ್ಪಾದಕರ ಹಿತ ಕಾಪಾಡಬೇಕು ಎನ್ನುವುದು ಸರಿ. ಹಾಗಂತಾ ಏಕಾಏಕಿ ಪ್ರತಿ ಒಂದು ಲೀಟರ್‌ ಹಾಲಿಗೆ ಬರೋಬ್ಬರಿ 10 ರೂಪಾಯಿ ಹೆಚ್ಚಳ ಮಾಡಿದರೆ ಗ್ರಾಹಕರಿಗೆ ದೊಡ್ಡ ಮಟ್ಟದ ಹೊರೆಯಾಗಲಿದೆ. ಜೊತೆಗೆ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚೆಂದರೆ ಪ್ರತಿ ಒಂದು ಲೀಟರ್‌ ಹಾಲಿಗೆ ಐದರಿಂದ ಆರು ರೂಪಾಯಿ ಹೆಚ್ಚಳ ಮಾಡುವ ಸಾಧ್ಯತೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ.

ಇವತ್ತಿನ ಸಚಿವ ಸಂಪುಟ ಸಭೆಯಲ್ಲೇ ಆಗುತ್ತೆ ಹಾಲಿನ ಬೆಲೆ ಏರಿಕೆ ನಿರ್ಧಾರ!
ಇವತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧ ಕ್ಯಾಬಿನೆಟ್ ಹಾಲ್‌ನಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಆ ಸಂಪುಟ ಸಭೆಯಲ್ಲಿ ಬೇರೆ ಬೇರೆ ವಿಷಯಗಳು ಕೂಡ ಚರ್ಚೆಯಾಗಲಿವೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಚರ್ಚೆ ನಡೆಯಲಿದೆ ಮತ್ತು ಹಾಲಿನ ದರ ಏರಿಕೆ ಬಗ್ಗೆ ನಿರ್ಧಾರ ಕೂಡ ಆಗಲಿದೆ ಎಂದು ಸರ್ಕಾರದ ಉನ್ನತ ಮೂಲಗಳ ಮಾಹಿತಿಗಳು ತಿಳಿಸಿವೆ. ಸಾಮಾನ್ಯವಾಗಿ ಪ್ರತಿ ಗುರುವಾರ ಕ್ಯಾಬಿನೆಟ್ ಸಭೆ ನಡೆಯುವುದು ವಾಡಿಕೆ. ಆದರೆ ಈ ಬಾರಿ ಮಂಗಳವಾರವೇ ಸಂಪುಟ ಸಭೆ ಕರೆದಿರುವುದು ಕೂಡ ಹಾಲಿನ ದರ ಬೆಲೆ ಏರಿಕೆ ಬಗ್ಗೆ ನಿರ್ಧರಿಸುವ ಉದ್ದೇಶಕ್ಕಾಗಿ ಎಂದು ಹೇಳಲಾಗುತ್ತಿದೆ.

ಇವತ್ತಿನ ಸಚಿವ ಸಂಪುಟ ಸಭೆಯಲ್ಲೇ ಏಕೆ ಹಾಲಿನ ಬೆಲೆ ಏರಿಕೆ ಬಗ್ಗೆ ನಿರ್ಧಾರ?
ಒಂದು ಕಡೆ ರಾಜ್ಯದ ವಿವಿಧ ಹಾಲು ಉತ್ಪಾದನಾ ಒಕ್ಕೂಟಗಳ ನಂದಿನಿ ಹಾಲಿನ ದರ ಏರಿಕೆ ಒತ್ತಡ ನಿರಂತರವಾಗಿ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಮುಂದಿನವಾರದಿಂದ ನವರಾತ್ರಿ ಸಂಭ್ರಮ ಹಾಗೂ ದಸರಾ ಹಬ್ಬಗಳು ಶುರುವಾಗಲಿವೆ. ಆ ಸಂದರ್ಭದಲ್ಲಿ ಹಾಲಿನ ದರ ಏರಿಕೆ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ರೀತಿಯ ಆಕ್ರೋಶ ವ್ಯಕ್ತವಾಗುತ್ತದೆ. ಪ್ರತಿಪಕ್ಷಗಳು ಕೂಡ ‘ರಾಜ್ಯ ಸರ್ಕಾರದಿಂದ ದಸರಾ ಹಬ್ಬಕ್ಕೆ ಹಾಲಿನ ದರದ ಬಳುವಳಿ’ ಎಂದು ಪ್ರಚಾರ ಮಾಡುತ್ತಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ವಾರವೇ ಹಾಲಿನ ದರ ಏರಿಕೆ ಬಗ್ಗೆ ನಿರ್ಧರಿಸಬೇಕು ಎಂದು ಇವತ್ತಿನ ಸಚಿವ ಸಂಪುಟ ಸಭೆಯಲ್ಲೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಸಾರಿಗೆ ಇಲಾಖೆಯಿಂದಲೂ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವನೆ: 
ಒಂದೆಡೆ ನಂದಿನಿ ಹಾಲಿನ ದರ ಹೆಚ್ಚಳ ಮಾಡಲು ಹಾಲು ಉತ್ಪಾದಕ ಒಕ್ಕೂಟಗಳು ಒತ್ತಡ ಹೇರುತ್ತಿದ್ದರೆ ಇನ್ನೊಂದೆಡೆ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿ ನಡೆಯುತ್ತಿರುವುದರಿಂದ ಬಸ್ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಸಾರಿಗೆ ಇಲಾಖೆ ಕೂಡ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಅಜೆಂಡಾ ರೂಪದಲ್ಲಿ ಬಸ್ ಪ್ರಯಾಣ ದರ ಏರಿಕೆ ಬರದೇ ಇದ್ದರೂ ಔಪಚಾರಿಕವಾಗಿ ಕೆಲವೇ ದಿನಗಳಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಬೇಕಾಗುತ್ತದೆ ಎನ್ನುವ ರೀತಿಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

ಕುತೂಹಲ ಮೂಡಿಸಿರುವ ಸಚಿವ ಸಂಪುಟ ಸಭೆ: 
ಇವತ್ತಿನ ಸಚಿವ ಸಂಪುಟ ಸಭೆ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ನಂದಿನ ಹಾಲಿನ ದರ ಏರಿಕೆ ಬಗ್ಗೆ ಸರ್ಕಾರ ಏನು ನಿರ್ಧಾರ ಮಾಡುತ್ತೆ? ಎಷ್ಟು ನಿರ್ಧಾರ ಮಾಡುತ್ತೆ ಎನ್ನುವ ಕುತೂಹಲ. ಹಾಗೆಯೇ ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಕೂತಹಲ. ಇದೆಲ್ಲದರ ಜೊತೆಗೆ ರಾಜ್ಯದಲ್ಲಿನ ಬರಗಾಲದ ಬಗ್ಗೆ ಚರ್ಚೆ ನಡೆಯಲಿದೆ. ಕೇಂದ್ರ ಸರ್ಕಾರ ಬರ ಪರಿಹಾರ ಕೊಡಲು ಹಿಂದೇಟು ಹಾಕುತ್ತಿರುವುದರಿಂದ ರಾಜ್ಯ ಸರ್ಕಾರ ಏನು ಮಾಡಬೇಕು ಎನ್ನುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.  ಇದೇ ಕಾರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿಗೆ ರಾಜ್ಯದಿಂದ ಸರ್ವಪಕ್ಷಗಳ ನಿಯೋಗ ಹೋಗುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಕೂಡ ಇದೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES