ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಹಾಗೂ ಫೇಮ್‌ಗಾಗಿ ವಿಚಿತ್ರ ವರ್ತನೆಗಳನ್ನು ತೋರುವುದು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದೀಗ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯುವತಿಯೊಬ್ಬರು ಪುಲ್ ಅಪ್ (Pull-up) ಮಾಡಿ ಹುಚ್ಚಾಟ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಮೆಟ್ರೋ ರೈಲಿನ ಒಳಗೆ ಮೇಲ್ಭಾಗದ ಹ್ಯಾಂಡ್‌ಬಾರ್ ಅಥವಾ ರಾಡ್ ಹಿಡಿದು ಯುವತಿ ಪುಲ್ ಅಪ್ ಮಾಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಇಂತಹ ಕೃತ್ಯಗಳು ಸುರಕ್ಷತೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದರೂ, ಬೆಂಗಳೂರು ನಮ್ಮ ಮೆಟ್ರೋ (BMRCL) ಆಡಳಿತ ಮಂಡಳಿ ಇದುವರೆಗೆ ಯಾವುದೇ ಅಧಿಕೃತ ಕ್ರಮ ಕೈಗೊಂಡಿಲ್ಲದಿರುವುದು ಸಾರ್ವಜನಿಕರ ವಿಪರ್ಯಾಸಕ್ಕೆ ಕಾರಣವಾಗಿದೆ.
ಮೆಟ್ರೋ ರೈಲುಗಳು ಲಕ್ಷಾಂತರ ಪ್ರಯಾಣಿಕರ ಸುರಕ್ಷಿತ ಸಂಚಾರದ ಕೇಂದ್ರಗಳಾಗಿವೆ. ಇಂತಹ ಸ್ಥಳಗಳಲ್ಲಿ ಈ ರೀತಿಯ ಸ್ಟಂಟ್‌ಗಳು ಕೇವಲ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ, ಸಹ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ಹಾಗೂ ಅಪಾಯವನ್ನು ಆಹ್ವಾನಿಸುವಂತವು. ಆದರೆ, ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್‌ಗಳ ಗೀಳಿಗೆ ಬಿದ್ದು ಕೆಲವರು ಇಂತಹ ಜವಾಬ್ದಾರಿಯಿಲ್ಲದ ವರ್ತನೆಗಳನ್ನು ತೋರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, "ಇಂತಹ ಅಶಿಸ್ತಿನ ವರ್ತನೆಗಳಿಗೆ ಆರಂಭದಲ್ಲೇ ಕಡಿವಾಣ ಹಾಕದಿದ್ದರೆ, ಮುಂದಿನ ದಿನಗಳಲ್ಲಿ ಇದು ಇತರರಿಗೆ ತೀಕ್ಷ್ಣ ಪ್ರೇರಣೆಯಾಗಿ ಪರಿಣಮಿಸುತ್ತದೆ" ಎಂದು ಸಾರ್ವಜನಿಕರು ಹಾಗೂ ಪ್ರತಿದಿನ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಕೂಡಲೇ ಬಿಎಂಆರ್‌ಸಿಎಲ್ ಹಾಗೂ ಮೆಟ್ರೋ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡು, ಇಂತಹ ನಿಯಮಬಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟಿಗರು ಒತ್ತಾಯಿಸುತ್ತಿದ್ದಾರೆ.. ಮುಂದಿನ ದಿನ ಈ ಕುರಿತು ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಅಂತ ಕಾಯ್ದು ನೋಡಬೇಕಿದೆ..