SOCIAL MEDIA

Newsletter

PARTNER SITES
Select Language Select State

ತಾಯಿ ತನ್ನ ಕೈ ಮುರಿದುಕೊಂಡು ಊರನ್ನು ರಕ್ಷಿಸಿದ್ದಾಳೆ : ಶಾಸಕ ಚೆನ್ನಬಸಪ್ಪ

ಶಿವಮೊಗ್ಗದಲ್ಲಿ ನಿನ್ನೆ ನಡೆದ ದಸರಾ ಮೆರವಣಿಗೆಯ ಸಂದರ್ಭದಲ್ಲಿ ಅಂಬಾರಿ ಹೊತ್ತ 'ಸೋಮಣ್ಣ' ಆನೆ ಬೆದರಿ ಓಡಿ, ಭಾರಿ ಅನಾಹುತ ತಪ್ಪಿದ ಪವಾಡ ಸದೃಶ್ಯ ಘಟನೆ ನಡೆಯಿತು. ಆನೆಯ ಆರ್ಭಟಕ್ಕೆ ಕಾರು ಹಾಗೂ ಬೈಕ್‌ಗಳು ಜಖಂಗೊಂಡು, ಅಂಬಾರಿ ಕೆಳಗೆ ಬಿದ್ದು ಚಾಮುಂಡೇಶ್ವರಿ ವಿಗ್ರಹಕ್ಕೂ ಹಾನಿಯಾಗಿದೆ. ಘಟನೆಯ ಕುರಿತು ಸ್ಥಳೀಯ ಶಾಸಕರು, ಮಾಜಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದ್ದು, ಸಿಸಿಎಫ್ ನೇತೃತ್ವದಲ್ಲಿ ಅಧಿಕೃತ ತನಿಖೆ ಆರಂಭಿಸಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 22, 2026, 09:15 PM IST | Updated: Oct 22, 2026, 09:17 PM IST
Image Credit: Shivamogga MLA Chennabasappa
Join

ಶಿವಮೊಗ್ಗ : ತಾಯಿ ತನ್ನ ಕೈ ಮುರಿದುಕೊಂಡು ಊರು ರಕ್ಷಿಸಿದ್ದಾಳೆ.. ಈಗ ಶಿವಮೊಗ್ಗದಲ್ಲಿ ಈ ಮಾತು ಎಲ್ಲೆಡೆ ಮಾರ್ಧನಿಸುತ್ತಿದೆ. ಹೌದು ನೆನ್ನೆ ದಸರಾ ಅಂಬಾರಿ ಹೊತ್ತ ಸೋಮಣ್ಣ ಆನೆ ವರ್ತಿಸಿದ ಪರಿ ಪ್ರಾಣಹಾನಿಯನ್ನೇ ಉಂಟು ಮಾಡಬೇಕಿತ್ತು. ಆದರೆ ಸೋಮಣ್ಣ ಆನೆ ಸಿಟ್ಟು ಸ್ಥಳದಲ್ಲಿದ್ದ ಕಾರು ಬೈಕ್ ಗಳ ಮೇಲೆ ಬಿದ್ದು ಅವು ಜಖಂ ಗೊಂಡಿದೆ. ಅಷ್ಟರಲ್ಲಾಗಲೇ ಅಂಬಾರಿ ಕೆಳಗೆ ಬಿದ್ದು ಚಾಮುಂಡೇಶ್ವರ ವಿಗ್ರಹಕ್ಕೆ ಕೊಂಚ ಹಾನಿಯಾಗಿತ್ತು. ಊರಿಗೆ ಕೆಡುಕಾಗಿದೆ ಎಂಬ ಭಾವದಲ್ಲಿ ಹೋಮ ಹವನಗಳು ನಡೆಯಬೇಕು ಎಂದು ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ.

ತಾಯಿ ತನ್ನ ಕೈ ಮುರಿದುಕೊಂಡು ಊರನ್ನು ರಕ್ಷಿಸಿದ್ದಾಳೆ ಎಂದು ಶಿವಮೊಗ್ಗ ಶಾಸಕ ಚೆನ್ನಬಸಪ್ಪ ಹೇಳಿದ್ದಾರೆ. ಸೋಮಣ್ಣ ಆನೆ ಮೆರವಣಿಗೆಯಲ್ಲಿ ಗಾಬರಿಯಾಗಿ ಓಡಿತ್ತು. ಆದರೆ ಆನೆ ಯಾರಿಗೂ ಏನೂ ಮಾಡಿಲ್ಲ ಇದು ಚಾಮುಂಡೇಶ್ವರಿ ಆಶೀರ್ವಾದ ಇರುವುದಕ್ಕೆ ಏನೂ ಆಗಿಲ್ಲ.ಪವಾಡ ಸದೃಶವಾಗಿ ಘಟನೆ ನಡೆದು ಹೋಯಿತು. ಧಾರ್ಮಿಕ ವಿಧಿ ಪೂಜೆ ಏನಾದರೂ ನಡೆಸಬೇಕಾ ಎಂಬ ಚರ್ಚೆ ನಡೆದಿದೆ.

ಘಟನೆಯ ಹೊಣೆ ನಾವೇ ಹೋರಬೇಕು. ಒಳ್ಳೆಯದಾಗ ನಾವು ಕ್ರೆಡಿಟ್ ತೆಗೆದುಕೊಳ್ಳುತ್ತೇವೆ. ನಾವು ಹೊಣೆಗಾರಿಕೆಯಿಂದ ಜಾರಿಕೊಳ್ಳಲ್ಲ. ಆನೆ ಎಂಬ ಪ್ರಾಣಿಯ ಮಾನಸಿಕತೆ ಬಗ್ಗೆ ಏನೂ ಹೇಳಲು ಆಗಲ್ಲ. ಆದರೆ ಎಲ್ಲರೂ ಜವಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಉಂಟಾದ ನಷ್ಟದ ಬಗ್ಗೆ ಕೂತು ಚರ್ಚೆ ಮಾಡುತ್ತೇವೆ ಹೆಚ್ಚೇನು ನಷ್ಟವಾಗಿಲ್ಲ. ಅರಣ್ಯಾಧಿಕಾರಿಗಳ ಲೋಪದ ಬಗ್ಗೆ ನಾನೇನು ಹೇಳಲ್ಲ. ಇದರ ತನಿಖೆ ಬಳಿಕವಷ್ಟೇ ಈ ಬಗ್ಗೆ ಹೇಳಲು ಆಗುತ್ತೆ ಎಂದು ಚೆನ್ನಬಸಪ್ಪ ಹೇಳಿದ್ದಾರೆ.

ಡಿಸಿ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದ ಕೆ.ಎಸ್. ಈಶ್ವರಪ್ಪ ಹಾಗೂ ಮಾಜಿ ಶಾಸಕ ಪ್ರಸನ್ನಕುಮಾರ್   
ಇನ್ನು ಇಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇತ್ರತ್ವದಲ್ಲಿ ಸರ್ವ ಪಕ್ಷ ನಿಯೋಗ ಭೇಟಿ ನೀಡಿ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸರಿಯಾಗಿ ತಾಲೀಮು ನಡೆಸದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಆಗ್ರಹಿಸಲಾಯಿತು. 15 ದಿನಗಳ ಹಿಂದೆಯೇ ಡಿಸಿಎಫ್‌ಗೆ ಮನವಿ ಮಾಡಿದ್ದರೂ ಅವರು ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲಪ್ರಭು ಮೈದಾನದಲ್ಲೇ ಈ ಅನಾಹುತ ಸಂಭವಿಸಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ ನಿಯೋಗ ದಸರಾ ಆನೆಗಳ ಆಯ್ಕೆ ಮತ್ತು ಸಕ್ರೆಬೈಲು ಬಿಡಾರದ ವೈಫಲ್ಯದ ಬಗ್ಗೆ ತೀವ್ರ ಆಕ್ರೋಶ ಪಡಿಸಿತು. ದೇವಿಯ ವಿಗ್ರಹ ಹಾಗೂ ಅಂಬಾರಿಗೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ಶಾಂತಿ ಹೋಮಕ್ಕೆ ಆಗ್ರಹಿಸಿತು.

ಸಿಸಿಎಫ್ ನೇತೃತ್ವದಲ್ಲಿ ಅಧಿಕೃತ ತನಿಖೆ ಆರಂಭ  
ಘಟನೆ ಬಗ್ಗೆ ಪ್ರತಿಕ್ರೀಯಿಸಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಮೆರವಣಿಗೆ ವೇಳೆ ಎರಡು ಆನೆಗಳು ಬೆದರಿ ಓಡಿ ವಾಪಸ್ಸು ಬಂದಿವೆ. ಆನೆ ಬೆದರಿ ವಾಪಸ್ ಓಡಿದ ಹಿನ್ನೆಲೆ ಮೇಲಿದ್ದ ಅಂಬಾರಿ ಕೆಳಗೆ ಬಿದ್ದು ಜಖಂ ಆಗಿದೆ. ಆನೆ ಓಟದ ಭರದಲ್ಲಿ ಬರುವ ಮಾರ್ಗದಲ್ಲಿದ್ದ ಕಾರುಗಳು ಜಖಂ ಆಗಿವೆ. ಅಂಬಾರಿ ಹೊತ್ತ ಆನೆ ನಿಯಂತ್ರಿಸಲು ಹೋಗಿ ಮಾವುತ ಕೆಳಗೆ ಬಿದ್ದಿದ್ದಾನೆ. ಈ ವಿಚಾರ ಸಂಬಂಧ ಈಗಾಗಲೇ ಸಿಸಿಎಫ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದೇವೆ ಎಂದು ಹೇಳಿದರು.

ಘಟನೆಯಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಮುಂದಿನ ದಿನಗಳಲ್ಲಿ ಆನೆಗಳ ಬದಲಾವಣೆ ಅಥವಾ ಜವಾಬ್ದಾರಿ ಹಂಚಿಕೆ ಬಗ್ಗೆ ಕಾವಾಡಿಗರು, ಡಿಸಿಎಫ್ ಹಾಗೂ ಮಾವುತರ ತಂಡ ಒಟ್ಟಾಗಿ ಸೇರಿ ಅಂತಿಮ ತೀರ್ಮಾನ ಕೈಗೊಳ್ಳಿಲಿದೆ. ಧಾರ್ಮಿಕ ಭಾವನೆ ಹಾಗೂ ಪರಿಹಾರ ವಿಚಾರದಲ್ಲಿ ಕೆಲವರು ಮನವಿ ಸಲ್ಲಿಸಿದ್ದಾರೆ. ಎಲ್ಲಾ ಭಾವನೆಗಳನ್ನು ಧಾರ್ಮಿಕ ಪರಿಷತ್ ಗಮನಕ್ಕೆ ತರಲಾಗುವುದು. ವಿಶೇಷ ಪೂಜೆ ಹಾಗೂ ಪರಿಹಾರದ ಬಗ್ಗೆ ಚರ್ಚೆ ನಡೆಸಲಾಗುವುದು. ಲಿಖಿತ ಮನವಿಯನ್ನು ಉಸ್ತುವಾರಿ ಸಚಿವರ ಗಮನಕ್ಕೆ ತಂದು, ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಕವಳಿಕಟ್ಚಿ ಹೇಳಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES