ಎಲ್‌ಪಿಜಿ ಒಂದು ಅತ್ಯಗತ್ಯ ಗೃಹಬಳಕೆಯ ಇಂಧನವಾಗಿದೆ; ವಿಶೇಷವಾಗಿ ಗ್ರಾಮೀಣ, ಅರೆ-ನಗರ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ, ಸ್ವಚ್ಛ, ಸುರಕ್ಷಿತ ಮತ್ತು ಪರಿಣಾಮಕಾರಿ ಅಡುಗೆ ಇಂಧನವನ್ನು ಒದಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಇದೀಗ ರಾಜ್ಯದಲ್ಲಿ ಹೊಸ ಎಲ್‌ಪಿಜಿ ಸಂಪರ್ಕ ಪಡೆಯಲು ಸಾಧ್ಯವಾಗದೇ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಂತೆ ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.
Wrote to the Hon’ble Union Minister for Petroleum and Natural Gas, Shri @HardeepSPuri requesting the Union Government to facilitate the issuance of new domestic LPG connections to eligible households across Karnataka. The request underscores the importance of ensuring timely access to essential cooking fuel and enabling eligible families to benefit from domestic LPG connectivity. We look forward to the Union Government’s positive consideration and necessary action in the interest of the people of Karnataka. #Karnataka #LPGConnections #PublicWelfare #LPG @KarnatakaVarthe @CMofKarnataka
— Rizwan Arshad (@ArshadRizwan) October 16, 2026
ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಸಚಿವ ರಿಜ್ವಾನ್ ಅರ್ಷದ್ ಪತ್ರ:
ಹೊಸ ಎಲ್‌ಪಿಜಿ ಸಂಪರ್ಕ ಪಡೆಯಲು ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.
ಸಚಿವ ರಿಜ್ವಾನ್ ಅರ್ಷದ್ ಬರೆದ ಪತ್ರದಲ್ಲಿ ಏನಿದೆ?
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕವು ಗಮನಾರ್ಹ ಜನಸಂಖ್ಯೆ ಬೆಳವಣಿಗೆ, ನಗರೀಕರಣ ಮತ್ತು ವಸತಿ ಪ್ರದೇಶಗಳ ವಿಸ್ತರಣೆಯನ್ನು ಕಂಡಿದೆ. ಇದರ ಪರಿಣಾಮವಾಗಿ, ಅರ್ಹ ಕುಟುಂಬಗಳಿಂದ ಹೊಸ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿಗೆ ನಿರಂತರ ಬೇಡಿಕೆ ಇದೆ. ಹೊಸದಾಗಿ ರೂಪುಗೊಂಡ ಕುಟುಂಬಗಳು, ಆರ್ಥಿಕವಾಗಿ ದುರ್ಬಲ ವರ್ಗದವರು, ವಲಸಿಗರು, ಕಡಿಮೆ ಆದಾಯದ ಕುಟುಂಬಗಳು ಹಾಗೂ ಹೊಸದಾಗಿ ಅಭಿವೃದ್ಧಿಗೊಂಡ ವಸತಿ ಪ್ರದೇಶಗಳಲ್ಲಿ ವಾಸಿಸುವ ಅನೇಕ ಕುಟುಂಬಗಳಿಗೆ ಇನ್ನೂ ಎಲ್‌ಪಿಜಿ ಸಂಪರ್ಕಗಳು ಸಿಕ್ಕಿಲ್ಲ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಮನವಿ ಮಾಡಿಕೊಳ್ಳುವುದೇನೆಂದರೆ, ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ (OMCs) ಸಮಾಲೋಚಿಸಿ, ಕರ್ನಾಟಕದಲ್ಲಿ ಅರ್ಹ ಕುಟುಂಬಗಳಿಗೆ ಹೊಸ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲು ಅನುವು ಮಾಡಿಕೊಡಬೇಕು ಎಂದು ಸಚಿವ ಸಚಿವ ರಿಜ್ವಾನ್ ಅರ್ಷದ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಶ್ಚಿಮ ಏಷ್ಯಾದ ಯುದ್ಧದ ಎಫೆಕ್ಟ್:
ಪಶ್ಚಿಮ ಏಷ್ಯಾದಲ್ಲಿ ನಡೆದ ಯುದ್ಧದ ಪರಿಣಾಮ ಇಂಧನ ಪೂರೈಕೆಯ ಮೇಲೆ ಒತ್ತಡ ಉಂಟಾಗಿ ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಎದುರಾಗಿತ್ತು. ಆದರೆ, ಸಂಘರ್ಷದ ತೀವ್ರತೆ ಕಡಿಮೆಯಾದ ಬಳಿಕವೂ ಹೊಸ ಗೃಹಬಳಕೆ ಎಲ್‌ಪಿಜಿ ಸಂಪರ್ಕಕ್ಕಾಗಿ ಕಾಯುತ್ತಿರುವ ಗ್ರಾಹಕರ ಸಮಸ್ಯೆ ಮುಂದುವರಿದಿದೆ.
ವಾಸ್ತವವಾಗಿ, ಜಾಗತಿಕ ಎಲ್‌ಪಿಜಿ ಬಿಕ್ಕಟ್ಟಿನ ನಂತರ, ಹೊಸ ಸಂಪರ್ಕಗಳನ್ನು ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಹೊಸ ಎಲ್‌ಪಿಜಿ ಸಂಪರ್ಕಕ್ಕಾಗಿ ಸಲ್ಲಿಸಲಾದ ಅರ್ಜಿಗಳು ಬಾಕಿ ಉಳಿದಿವೆ.
ಹೊಸ ಎಲ್‌ಪಿಜಿ ಕನೆಕ್ಷನ್ ಪಡೆಯುವಲ್ಲಿ ತೊಂದರೆ- ಇದರಿಂದ ಉಂಟಾಗಬಹುದಾದ ಸಮಸ್ಯೆಗಳು:
ಕರ್ನಾಟಕದಲ್ಲಿ ಎಲ್‌ಪಿಜಿ ಸಂಪರ್ಕಕ್ಕೆ ಬೇಡಿಕೆ ಹೆಚ್ಚಿದ್ದು, ಹೊಸ ಎಲ್‌ಪಿಜಿ ಕನೆಕ್ಷನ್ ಪಡೆಯಲು ಜನರು ಪರದಾಡುತ್ತಿದ್ದಾರೆ. ಇದರಿಂದ ಉಂಟಾಗುತ್ತಿರುವ ಸಮಸ್ಯೆಗಳು ಈ ಕೆಳಗಿನಂತಿವೆ:-
* ಅಡುಗೆಗೆ ಪರಿಸರ ಸ್ನೇಹಿಯಲ್ಲದ ಇಂಧನಗಳ ಬಳಕೆ:
ಎಲ್‌ಪಿಜಿ ಸಂಪರ್ಕವಿಲ್ಲದ ಗ್ರಾಹಕರು, ಅಡುಗೆಗಾಗಿ ಕಟ್ಟಿಗೆ, ಇದ್ದಿಲು, ಸೀಮೆಎಣ್ಣೆ ಅಥವಾ ಇತರ ಸಾಂಪ್ರದಾಯಿಕ ಮತ್ತು ಪರಿಸರ ಸ್ನೇಹಿಯಲ್ಲದ ಇಂಧನಗಳನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಬಹುದು.
* ಮಹಿಳೆಯರ ಕೆಲಸದ ಹೊರೆ ಹೆಚ್ಚಳ:
ಅನೇಕ ಕುಟುಂಬಗಳಲ್ಲಿ, ಅಡುಗೆಗೆ ಬೇಕಾದ ಇಂಧನವನ್ನು ಒದಗಿಸುವ ಜವಾಬ್ದಾರಿ ಹೆಚ್ಚಾಗಿ ಮಹಿಳೆಯರ ಮೇಲಿರುತ್ತದೆ. ಎಲ್‌ಪಿಜಿ ಲಭ್ಯವಿಲ್ಲದಿರುವುದು ಅವರ ಕೆಲಸದ ಹೊರೆಯನ್ನು ಹೆಚ್ಚಿಸುವುದಲ್ಲದೆ, ಕಟ್ಟಿಗೆ ಅಥವಾ ಪರ್ಯಾಯ ಇಂಧನಗಳನ್ನು ಸಂಗ್ರಹಿಸಲು ಅವರು ಹೆಚ್ಚು ಸಮಯ ವ್ಯಯಿಸಬೇಕಾಗುತ್ತದೆ.
* ಮನೆಯೊಳಗೆ ವಾಯು ಮಾಲಿನ್ಯಕ್ಕೆ ಕಾರಣ:
ಕಟ್ಟಿಗೆ ಮತ್ತು ಇತರ ಘನ ಇಂಧನಗಳ ನಿರಂತರ ಬಳಕೆಯು ಮನೆಯೊಳಗೆ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದು ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
* ಗೃಹಬಳಕೆ ಅಪಘಾತಗಳ ಅಪಾಯ:
ನಿಯಂತ್ರಣವಿಲ್ಲದ ಅಥವಾ ಅಸುರಕ್ಷಿತ ಪರ್ಯಾಯ ಇಂಧನಗಳ ಬಳಕೆ ಹಾಗೂ ಅಡುಗೆಗಾಗಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು, ಬೆಂಕಿ ಅವಘಡಗಳು ಮತ್ತು ಇತರ ಗೃಹಬಳಕೆ ಅಪಘಾತಗಳ ಅಪಾಯವನ್ನು ಹೆಚ್ಚಿಸಬಹುದು.
* ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿನ ನಿವಾಸಿಗಳು, ವಿಶೇಷವಾಗಿ ಬೆಂಗಳೂರಿನಂತಹ ನಗರಗಳಲ್ಲಿನ ಐಟಿ-ಬಿಟಿ (IT-BT) ಉದ್ಯೋಗಿಗಳು ಸೇರಿದಂತೆ ಅನೇಕರು ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಪಡೆಯುವಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
* ಕಾನೂನುಬಾಹಿರ ಚಟುವಟಿಕೆ:
ಹೊಸ ಮನೆಬಳಕೆಯ ಎಲ್‌ಪಿಜಿ ಸಂಪರ್ಕಗಳು ಲಭ್ಯವಿಲ್ಲದಿರುವುದು ಕಾನೂನುಬಾಹಿರ ಚಟುವಟಿಕೆಗಳಿಗೆ ಎಡೆಮಾಡಿಕೊಡಬಹುದು.
* ಸಾಮಾನ್ಯ ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್ ಮತ್ತು 5 ಕೆಜಿ ಸಾಮರ್ಥ್ಯದ ಸಿಲಿಂಡರ್‌ನ ಬೆಲೆಯಲ್ಲಿ ಗಮನಾರ್ಹ ವ್ಯತ್ಯಾಸವಿದೆ. ನಮ್ಮ ರಾಜ್ಯದ ಜನಸಂಖ್ಯೆಯಲ್ಲಿ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ, ಅವರಿಗೂ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೂ 5 ಕೆಜಿ ಸಿಲಿಂಡರ್‌ಗಳನ್ನು ಖರೀದಿಸುವುದು ಕಷ್ಟಕರವಾಗುತ್ತದೆ.
* ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಬಾಕಿ ಇರುವ ಸಾವಿರಾರು ಅರ್ಜಿಗಳು:
ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಳ, ನಗರೀಕರಣ, ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಹೊಸ ವಸತಿ ಪ್ರದೇಶಗಳು ನಿರ್ಮಾಣವಾಗುತ್ತಿರುವುದರಿಂದ ಎಲ್‌ಪಿಜಿ ಸಂಪರ್ಕದ ಬೇಡಿಕೆ ಹೆಚ್ಚಾಗಿದೆ. ಆಗಸ್ಟ್ 2026 ರ ಹೊತ್ತಿಗೆ, ಹೊಸ ಮನೆಬಳಕೆಯ ಎಲ್‌ಪಿಜಿ ಸಂಪರ್ಕಕ್ಕಾಗಿ ಸುಮಾರು 36,000 ಅರ್ಜಿಗಳು ಬಾಕಿ ಉಳಿದಿದ್ದವು. ಬೆಂಗಳೂರಿನಲ್ಲೇ 11 ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿಯಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್, ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದ ಅಗತ್ಯವನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕೆಂದು ನಾನು ನಿಮ್ಮ ಕಚೇರಿಯಲ್ಲಿ ವಿನಂತಿಸುತ್ತೇನೆ. ಅಲ್ಲದೆ, ಅನ್ವಯವಾಗುವ ಮಾರ್ಗಸೂಚಿಗಳು ಮತ್ತು ಪರಿಶೀಲನಾ ಪ್ರಕ್ರಿಯೆಗಳಿಗೆ ಒಳಪಟ್ಟು, ರಾಜ್ಯದ ಅರ್ಹ ಕುಟುಂಬಗಳಿಗೆ ಅಗತ್ಯ ಸಂಖ್ಯೆಯ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವಂತೆ ಸಂಬಂಧಪಟ್ಟ ತೈಲ ಮಾರುಕಟ್ಟೆ ಕಂಪನಿಗಳಿಗೆ (Oil Marketing Companies) ನಿರ್ದೇಶನ ನೀಡಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.