SOCIAL MEDIA

Newsletter

PARTNER SITES
Select Language Select State

ಸರ್ಚ್ ನೆಪದಲ್ಲಿ ದೌರ್ಜನ್ಯ ಎಸಗುವ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಬರೆದಿಟ್ಟುಕೊಳ್ಳಿ! : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಯಾರ ಒತ್ತಡಕ್ಕೆ ಮಣಿದು ಮನಸೋ ಇಚ್ಚೆ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಕಾರ್ಯಕರ್ತರು ಅಧೀರರಾಗಬೇಕಿಲ್ಲ. ಅಬ್ಬಾ.. ಎಂದರೆ ಇನ್ನೊಂದು ವರ್ಷ.

Reported By Manjunath Naragund Written By Manjunath Naragund
Published: Oct 28, 2026, 03:30 PM IST | Updated: Oct 28, 2026, 03:33 PM IST
Image Credit: HD Kumaraswamy
Join

ನವದೆಹಲಿ: ಜೆಡಿಎಸ್ ಕಾರ್ಯಕರ್ತರು ಹೆದರಬೇಕಾಗಿಲ್ಲ. ನಿಮಗೆ ಕಿರುಕುಳ ನೀಡುತ್ತಿರುವ ಪೊಲೀಸ್ ಅಧಿಕಾರಿಗಳನ್ನು ನೋಡಿ ಭಯಪಡಬೇಡಿ. ರಾಜಕೀಯ ಒತ್ತಡಕ್ಕೆ ಮಣಿದು ನಿಮ್ಮ ಮನೆಗೆ ಕಾನೂನುಬಾಹಿರವಾಗಿ ವರ್ತಿಸುತ್ತಿರುವ ಅಧಿಕಾರಿಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಅವರಿಗೆ ಕಾಲವೇ ಉತ್ತರಿಸುತ್ತದೆ ಎಂದು ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.

ನವದೆಹಲಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಯಾರ ಒತ್ತಡಕ್ಕೆ ಮಣಿದು ಮನಸೋ ಇಚ್ಚೆ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಕಾರ್ಯಕರ್ತರು ಅಧೀರರಾಗಬೇಕಿಲ್ಲ. ಅಬ್ಬಾ.. ಎಂದರೆ ಇನ್ನೊಂದು ವರ್ಷ. ಆಮೇಲೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಲೆಕ್ಕ ಚುಕ್ತಾ ಮಾಡೋಣ. ಆದರೆ ಕಾನೂನು ಮೀರದೆ ಜನರ ಪರವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಗೌರವ ಕೊಡಿ ಎಂದು ಹೇಳಿದರು.

ಹಾಲಿ ಮುಖ್ಯಮಂತ್ರಿ ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಎಂದು ಪದೇಪದೇ ಹೇಳುತ್ತಿದ್ದಾರೆ. ನಮಗೂ ಒಂದು ಕಾಲ ಬಂದೇ ಬರುತ್ತದೆ. ಆ ಕಾಲವೇ ಇಂತಹ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಉತ್ತರ ನೀಡುತ್ತದೆ. ಕಾನೂನು ಮೀರಿ ವರ್ತಿಸುವ ಪ್ರತಿಯೊಬ್ಬ ಅಧಿಕಾರಿಯೂ ಮುಂದೆ ತಕ್ಕ ಶಾಸ್ತಿ ಕಾದಿದೆ. ಅವರು ಸೇವೆಯಲ್ಲಿರಲಿ ಅಥವಾ ನಿವೃತ್ತಿಯಾಗಿ ಮನೆಯಲ್ಲೇ ಇರಲಿ, ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಸಚಿವರು ನೇರ ಎಚ್ಚರಿಕೆ ನೀಡಿದರು.

ಸರ್ಕಾರದ ಈ ಅನ್ಯಾಯದ ಮತ್ತು ಪೂರ್ವಯೋಜಿತ ತನಿಖೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲವೆಂದು ತನಿಖಾ ತಂಡದಲ್ಲಿದ್ದ ಇಬ್ಬರು-ಮೂವರು ಪ್ರಾಮಾಣಿಕ ಅಧಿಕಾರಿಗಳು ಈಗಾಗಲೇ ಹೊರ ಬಂದಿದ್ದಾರೆ. ಕೇವಲ ತಮ್ಮ ಮಾತು ಕೇಳುವ ಒಂದು ನಿರ್ದಿಷ್ಟ ವರ್ಗದ ಅಧಿಕಾರಿಗಳನ್ನು ಇಟ್ಟುಕೊಂಡು ತನಿಖೆಯ ನಾಟಕವಾಡಲಾಗುತ್ತಿದೆ. ಆ ಅಧಿಕಾರಿಗಳನ್ನು ಇವರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ವಿಧಾನ ಪರಿಷತ್ ಚುನಾವಣೆಯ ನಾಲ್ಕು ಕ್ಷೇತ್ರಗಳ ಕಾಂಗ್ರೆಸ್ ಸೋಲು ಈ ಗೃಹ ಸಚಿವರ ದುರಾಡಳಿತ ಹಾಗೂ ಅಧಿಕಾರ ದುರುಪಯೋಗಕ್ಕೆ ಸಿಕ್ಕ ಉತ್ತರವಾಗಿದೆ. ಪೊಲೀಸ್ ಇಲಾಖೆಯನ್ನು ಕೈಗೊಂಬೆ ಮಾಡಿಕೊಂಡು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ಅವರು ಕಿಡಿಕಾರಿದರು.

ನನ್ನ ಎಡ-ಬಲದಲ್ಲಿದ್ದವರು, ಮುಂಭಾಗದಲ್ಲಿದ್ದವರು ಯಾರೂ ಎಲ್ಲಿಗೂ ಓಡಿಹೋಗಿಲ್ಲ, ಎಲ್ಲರೂ ಇಲ್ಲೇ ಇದ್ದಾರೆ. ಜೆಡಿಎಸ್ ಕಾರ್ಯಕರ್ತ ಚಂದನ್ ಎಂಬ ಯುವಕನಿಗೆ ನಿನ್ನೆಯಷ್ಟೇ (ಮಂಗಳವಾರ) ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಮೊದಲೇ ಆತನನ್ನು ಪೊಲೀಸರು ಅಕ್ರಮವಾಗಿ ಹುಡುಕಾಡುತ್ತಿದ್ದರು ಎಂದು ಸಚಿವರು ಆಕ್ಷೇಪಿಸಿದರು.

ನಾನು ದೆಹಲಿಗೆ ಬರುವುದಕ್ಕೆ ಮೊದಲೇ ಹೇಳಿದಂತೆ ಐದು ದಿನಗಳ ನಂತರ ವಾಪಸ್ ಬಂದು ನಿಮ್ಮ ವಿರುದ್ಧ ದನಿ ಎತ್ತುವುದಾಗಿ ಗೃಹ ಸಚಿವರಿಗೆ ಹೇಳಿದ್ದೆ. ಯಾಕೋ ಅವರು (ಕುಮಾರಸ್ವಾಮಿ) ಮೂರು ದಿನಗಳಿಂದ ಮಾತನಾಡುತ್ತಿಲ್ಲ ಅಂತ ಬೇರೆ ಅವರು ಹೇಳುತ್ತಿದ್ದರು. ಅವರಿಗೆ ಮಾಡುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ ಎಂದು ಭಾವಿಸಿದ್ದೇನೆ ಎಂದರು.

ಸ್ಟಿಂಗ್ ಆಪರೇಷನ್ ಹಿಂದಿನ ಕಾಂಗ್ರೆಸ್ ಮಹಿಳಾ ಸೂತ್ರಧಾರಿ ಹಾಗೂ ಪಾತ್ರಧಾರಿ ಎಲ್ಲಿ?:

ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನೇರವಾಗಿ ಪ್ರಶ್ನಿಸಿದ ಸಚಿವರು; ಈ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

2015ರ ಜೂನ್‌ನಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗೆ ಅಧ್ಯಕ್ಷೆಯನ್ನಾಗಿ ನೇಮಿಸಲಾಗಿದ್ದ ಕಾಂಗ್ರೆಸ್‌ನ ಮಹಿಳಾ ನಾಯಕಿಯೇ ಈ ಇಡೀ ಷಡ್ಯಂತ್ರದ ಮುಖ್ಯ ಸೂತ್ರಧಾರಿ ಎಂದು ಸಚಿವರು ಆರೋಪಿಸಿದರು.

2023ರಲ್ಲಿ ಒಬ್ಬ ಯುವತಿಯನ್ನು ಬಳಸಿಕೊಂಡು ಮತ್ತೊಬ್ಬ ಯುವತಿಯನ್ನು ಕೂರಿಸಿ ಖಾಸಗಿ ಚಾನೆಲ್‌ನ ವ್ಯಕ್ತಿಯನ್ನು ಟ್ರ್ಯಾಪ್ ಮಾಡಲು ಪ್ರಚೋದನೆ ನೀಡಿ ವಿಡಿಯೋ ರೆಕಾರ್ಡ್ ಮಾಡಿಸಿದವರ ಬಗ್ಗೆ ತನಿಖೆ ಏಕೆ ನಡೆಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ನಾನೇ ಮಾಡಿದ್ದು ಎಂದು ತಪ್ಪು ಒಪ್ಪಿಕೊಂಡಿದ್ದರೂ ಆತನನ್ನು ಮುಕ್ತವಾಗಿ ಓಡಾಡಲು ಬಿಟ್ಟು, ಅಕ್ರಮ ಚಾನೆಲ್ ಮೂಲಕ ಸುಳ್ಳು ಸುದ್ದಿ ಹರಡಲು ಸರ್ಕಾರವೇ ರಕ್ಷಣೆ ನೀಡುತ್ತಿದೆ ಎಂದು ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡರು.

ಬ್ರಾಸ್ ಲೈಟ್ ಕಳವು ಕತೆ ಕಟ್ಟಿದ ಪೊಲೀಸರು:

ಪೊಲೀಸರು ಹದ್ದು ಮೀರಿ ವರ್ತಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಸಚಿವ ಕುಮಾರಸ್ವಾಮಿ ಅವರು; ಜೆಡಿಎಸ್ ವಾರ್ ರೂಮ್‌ನಲ್ಲಿ ಕೆಲಸ ಮಾಡುವ ಮೋಹನ್‌ ಗೌಡ ಎಂಬ ಕಾರ್ಯಕರ್ತನ ಮನೆಗೆ ಆತ ಇಲ್ಲದ ವೇಳೆಯಲ್ಲಿ ಸರ್ಚ್ ವಾರಂಟ್ ನೆಪದಲ್ಲಿ ಪೊಲೀಸರು ನುಗ್ಗಿದ್ದಾರೆ. ಆತನ ಪತ್ನಿಯ ಮೇಲೆ ಅಮಾನವೀಯ ಹಲ್ಲೆ ನಡೆಸಿ, ತಳ್ಳಾಡಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಆಕೆ ವಕೀಲರ ಸಲಹೆ ಪಡೆದು ಮೊಬೈಲ್ ಕೊಡುತ್ತೇನೆ ಎಂದರೂ ಬಲವಂತದಿಂದ ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲಿ ಏನೇನು ನಡೆಯಿತು ಎಂಬ ದೃಶ್ಯಗಳನ್ನು ನಾನು ಕೂಡ ನೋಡಿದ್ದೇನೆ ಎಂದು ಸಚಿವರು ಹೇಳಿದರು.

ಪೊಲೀಸರ ತಳ್ಳಾಟದಲ್ಲೇ ಬಿದ್ದ ಸರವನ್ನು ಮುಂದಿಟ್ಟುಕೊಂಡು ಆ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯ ಚೈನ್ ಕಳ್ಳತನ ಮಾಡಿದ್ದಾಳೆ ಎಂದು ರಾತ್ರೋರಾತ್ರಿ ಸುಳ್ಳು FIR ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು; ಮನೆಯಲ್ಲಿ ಬಿದ್ದಿದ್ದ ಆ ಸರವನ್ನು ನಮ್ಮ ಕಾರ್ಯಕರ್ತರೇ ತೆಗೆದುಕೊಂಡು ಹೋಗಿ ಮರುದಿನ ಬೆಳಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಪ್ರಾಮಾಣಿಕವಾಗಿ ಒಪ್ಪಿಸಿದ್ದಾರೆ; ಆದರೂ ಪತ್ರಿಕೆಗಳಲ್ಲಿ 'ಮಹಿಳೆಯರಿಂದ ಚೈನ್ ಕಳ್ಳತನ' ಎಂದು ಸುದ್ದಿ ಬರೆಸಿ, ಟೀವಿಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿಮರ್ಯಾದಸ್ಥ ಕುಟುಂಬದವರ ತೇಜೋವಧೆ ಮಾಡಲಾಗಿದೆ. ಇದಕ್ಕೆ ಆ ಮಹಿಳಾ ಅಧಿಕಾರಿ ಪ್ರಾಯಶ್ಚಿತ್ತ ಅನುಭವಿಸಬೇಕಾದ ದಿನಗಳು ಬಂದೇ ಬರುತ್ತವೆ ಎಂದು ಎಚ್ಚರಿಕೆ ನೀಡಿದರು.

ವಿಕ್ಕಿ ಸಾವು ಮುಚ್ಚಿ ಹಾಕಲು ಪೊಲೀಸರ ಶಾಮಿಯಲು ಗೊತ್ತಿದೆ:

ಪೊಲೀಸ್ ಕಚೇರಿಯಲ್ಲೇ ಮಹಿಳೆಯರೊಂದಿಗೆ ನಡೆದ ಅಸಭ್ಯ ವರ್ತನೆಯ ವಿಡಿಯೋಗಳು ಬೀದಿ ಬೀದಿಯಲ್ಲಿ ಪ್ರಚಾರವಾದಾಗ ಈ ಸರ್ಕಾರ ಯಾವ ಶಿಸ್ತುಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ ಸಚಿವರು; ಇಂತಹ ಅಕ್ರಮ ಚಾನೆಲ್ ಮಾಲೀಕರಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ. ಇದೇ ವೇಳೆ 1 ವರ್ಷ 3 ತಿಂಗಳ ಹಿಂದೆ ಚಾನೆಲ್ ನ ನಾಲ್ಕನೇ ಮಹಡಿಯಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ ಯುವಕ ವಿಕಿ (ವಿಕಾಸ್) ಮರಣದ ಪ್ರಕರಣವನ್ನು ಹೇಗೆಲ್ಲಾ ಮುಚ್ಚಿ ಹಾಕಿದ್ದಾರೆ
ಅದರಲ್ಲಿ ಪೊಲೀಸರು ವಹಿಸಿದ ಪಾತ್ರವೇನು ಎಂಬ ಮಾಹಿತಿ ನನಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದರು.

ನಾಲ್ಕನೇ ಮಹಡಿಯಿಂದ ವಿಕ್ಕಿ ತಾನಾಗಿಯೇ ಲಿಫ್ಟಿನ ಬಾವಿಯೊಳಗೆ ಬಿದ್ದನೇ ಅಥವಾ ತಳ್ಳಲಾಯಿತೇ? ಆತನ ಜತೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಏನೂ ಆಗದೆ ಈತ ಮಾತ್ರ ಹೇಗೆ ಕೆಳಕ್ಕೆ ಬಿದ್ದ? ಚಾನಲ್ ನಲ್ಲಿ ಎಲ್ಲಾ ಕಟ್ಟುಕಥೆಗಳನ್ನು ಪ್ರಸಾರ ಮಾಡಿ, ಲಿಫ್ಟಿನ ಬಾವಿಯೊಳಗೆ ಬೀಳುವ ದೃಶ್ಯವನ್ನು ಎಡಿಟ್ ಮಾಡಲಾಗಿದೆ. ದೃಶ್ಯವನ್ನು ಹಾಗೆಯೇ ಯಥಾವತ್ತಾಗಿ ಪ್ರಸಾರ ಮಾಡಬೇಕಾಗಿತ್ತು ಅಲ್ಲವೇ ಎಂದು ಪ್ರಶ್ನಿಸಿದ ಸಚಿವರು, ಈ ಅಸಹಜ ಸಾವಿನ ನಿಷ್ಪಕ್ಷಪಾತ ತನಿಖೆ ಆಗಬೇಕು. ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ತರಲು ಖರ್ಗೆ ಕುಟುಂಬದ ಷಡ್ಯಂತ್ರ:

ಸ್ಟಿಂಗ್ ಬಗ್ಗೆ ನಿದ್ದೆ ಮಾಡುತ್ತಿರುವ ಸಿಸಿಬಿ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿಗಳ ಬಳಿ ತೆರಳಿ ವಿವರಣೆ ನೀಡಲು ಹೋದಾಗ ಅವರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶಗೊಂಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ನೀವೆಲ್ಲಾ ಯಾವ ದಿಕ್ಕಿನಲ್ಲಿ ತನಿಖೆ ಮಾಡುತ್ತಿದ್ದೀರಿ? ಎಂಬುದು ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡರೆಂದೂ ವರದಿಗಳು ಹೇಳುತ್ತಿವೆ. ಸಿದ್ದರಾಮಯ್ಯ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರು ಪುತ್ರ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈಗ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಆರೋಪಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅಸಲಿ ಉದ್ದೇಶ ಕುಮಾರಸ್ವಾಮಿಯನ್ನು ಮುಗಿಸುವುದಲ್ಲ, ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಹಾಳು ಮಾಡುವುದೇ ಆಗಿದೆ ಎಂದು ಅವರು ಎಂದು ಗಂಭೀರ ಆರೋಪ ಮಾಡಿದರು.

ಈ ಹಿಂದೆ ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಲು ಸಿದ್ದರಾಮಯ್ಯನವರೇ ಕಾರಣ ಎಂಬ ಕುಟುಂಬದ ಹಳೆಯ ವೈಷಮ್ಯವನ್ನು ತೀರಿಸಿಕೊಳ್ಳಲು, ಕುಮಾರಸ್ವಾಮಿ ಹೆಸರಿನಲ್ಲಿ ಈ ಪ್ರಕರಣವನ್ನು ಹೆಣೆದು ಅಂತಿಮವಾಗಿ ಸಿದ್ದರಾಮಯ್ಯನವರನ್ನೇ ಸಿಲುಕಿಸುವ ಒಳಸಂಚು ಖರ್ಗೆ ಕುಟುಂಬ, ಹಾಲಿ ಸಿಎಂ ಸೇರಿ ಹೂಡಿದ್ದಾರೆ ಎಂದು ಸಚಿವರು ದೂರಿದರು.

ನನ್ನ ದನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ:

ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿರುವವರು ನೀವು. ರಾಜ್ಯದ ಸಾರ್ವಜನಿಕ ವ್ಯವಸ್ಥೆಯನ್ನು ಕುಲಗೆಡಿಸಿರುವುದನ್ನು ತೊಳೆಯಲು ಮತ್ತು ಸತ್ಯದ ಉಳಿವಿಗಾಗಿ ನಾನು ಹೋರಾಡುತ್ತಿದ್ದೇನೆ. ಸತ್ಯ ಮತ್ತು ಧರ್ಮವನ್ನು ಕಾಪಾಡುವ ಅದೃಶ್ಯ ದೈವಿಕ ಶಕ್ತಿ ನಮ್ಮ ಬೆನ್ನಿಗಿದೆ..ಕುಮಾರಸ್ವಾಮಿಯ ದನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಎದುರಾಳಿಗಳ ಬಾಯಿ ಶಾಶ್ವತವಾಗಿ ಮುಚ್ಚುವ ಕಾಲ ಸದ್ಯದಲ್ಲೇ ಬರುತ್ತದೆ ಎಂದು ಎಚ್ಚರಿಸಿದರು ಕೇಂದ್ರ ಸಚಿವರು.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES