SOCIAL MEDIA

Newsletter

PARTNER SITES
Select Language Select State

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ..! KPSC ಅಧಿಕೃತ ವೆಬ್‌ಸೈಟ್ ವಿಳಾಸ ಬದಲಾವಣೆ.. ಇಲ್ಲಿದೆ ಮಾಹಿತಿ

ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣದ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ, ಆಯೋಗದ ಅಧಿಕೃತ ವೆಬ್‌ಸೈಟ್ ವಿಳಾಸವನ್ನು ಬದಲಾಯಿಸಲಾಗಿದೆ. ಇದರೊಂದಿಗೆ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಒಂದೊಂದೇ ಕರಾಳ ಸತ್ಯಗಳು ಹೊರಬರುತ್ತಿದ್ದು, ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 20, 2026, 07:03 AM IST | Updated: Oct 20, 2026, 07:12 AM IST
Image Credit: KPSC new website link
Join

KPSC New Website Link : ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣದ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಮತ್ತು ಉದ್ಯೋಗಾಕಾಂಕ್ಷಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಾಜಿ ಅಧ್ಯಕ್ಷರಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೂ ಈ ಬೃಹತ್ ಹಗರಣದಲ್ಲಿ ಕೈಜೋಡಿಸಿರುವುದು ಬೆಳಕಿಗೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಮಧ್ಯೆ KPSC ಅಧಿಕೃತ ವೆಬ್‌ಸೈಟ್‌ನ ವಿಳಾಸ ಬದಲಾವಣೆ ಆಗಿದ್ದು ಗಮನಾರ್ಹ.. ಹೆಚ್ಚಿನ ಮಾಹಿತಿ ಇಲ್ಲಿದೆ..

ಕೆಪಿಎಸ್​ಸಿ ಅಧಿಕೃತ ವೆಬ್‌ಸೈಟ್ ವಿಳಾಸ ಬದಲಾವಣೆ
ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಕರ್ನಾಟಕ ಲೋಕಸೇವಾ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್ ವಿಳಾಸವನ್ನು ಬದಲಾವಣೆ ಮಾಡಿದೆ. ಈ ಹಿಂದೆ ಬಳಕೆಯಲ್ಲಿದ್ದ ವೆಬ್‌ಸೈಟ್ ವಿಳಾಸವನ್ನು ಸಂಪೂರ್ಣವಾಗಿ ಬದಲಾಯಿಸಿ, ಈಗ ಹೊಸದಾಗಿ ನೂತನ ವೆಬ್‌ಸೈಟ್ ಪೋರ್ಟಲ್ ಅನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಈ ಹಿಂದೆ kpsc.kar.nic.in ಬಳಕೆಯಲ್ಲಿತ್ತು, ಇದೀಗ ಇದನ್ನು https://kpsc.karnataka.gov.in ಎಂದು ಮಾಡಲಾಗಿದೆ.

ಇನ್ನುಮುಂದೆ ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಯಾವುದೇ ರೀತಿಯ ಅಧಿಕೃತ ಅಧಿಸೂಚನೆಗಳು, ಪರೀಕ್ಷಾ ವೇಳಾಪಟ್ಟಿಗಳು ಹಾಗೂ ನೇಮಕಾತಿಗೆ ಸಂಬಂಧಿಸಿದ ಇತರೆ ಮಾಹಿತಿಗಳನ್ನು ಪಡೆಯಲು ನೂತನ ವೆಬ್‌ಸೈಟ್ ವಿಳಾಸವನ್ನು ಮಾತ್ರ ವೀಕ್ಷಿಸಬೇಕು ಎಂದು ಆಯೋಗದ ಕಾರ್ಯದರ್ಶಿಯವರಾದ ಜ್ಯೋತಿ ಕೆ. ಅವರು ಸ್ಪಷ್ಟಪಡಿಸಿದ್ದಾರೆ. ಹಳೆಯ ವೆಬ್‌ಸೈಟ್ ವಿಳಾಸದ ಬದಲಿಗೆ ಹೊಸ ಪೋರ್ಟಲ್ ಅನ್ನು ಕಡ್ಡಾಯಗೊಳಿಸಲಾಗಿದೆ.

5 ಸ್ಟಾರ್‌ ಹೋಟೆಲ್‌ನಲ್ಲಿ ರಹಸ್ಯ ಪರೀಕ್ಷೆ ಮತ್ತು ಹಲವು ಅಕ್ರಮಗಳ ಬಯಲು
ಕೆಪಿಎಸ್​ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ತನಿಖೆಯಲ್ಲಿ ಅತ್ಯಂತ ರೋಚಕ ಸಂಗತಿಗಳು ಹೊರಬಂದಿವೆ. ವಿಶೇಷವಾಗಿ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಗೋಲ್‌ಮಾಲ್ ನಡೆದಿರುವುದು ಕಂಡುಬಂದಿದೆ. ಖುದ್ದು ಕೆಲ ಪ್ರಭಾವಿ ಸದಸ್ಯರ ಸಮ್ಮುಖದಲ್ಲೇ ಐಷರಾಮಿ ಫೈವ್‌ ಸ್ಟಾರ್ ಹೋಟೆಲ್‌ನಲ್ಲಿ ಅಭ್ಯರ್ಥಿಗಳಿಗೆ ರಹಸ್ಯವಾಗಿ ಪರೀಕ್ಷೆ ನಡೆಸಿ, ಅಕ್ರಮವಾಗಿ ಆಯ್ಕೆ ಮಾಡಿರುವ ಆಘಾತಕಾರಿ ವಿಚಾರ ತನಿಖೆಯಿಂದ ಬಹಿರಂಗಗೊಂಡಿದೆ.

ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಇಡಿ ಅಧಿಕಾರಿಗಳು ಈಗಾಗಲೇ ಈ ಅಕ್ರಮ ಜಾಲದ ಕಿಂಗ್‌ಪಿನ್‌ಗಳನ್ನು ಬಂಧಿಸಿದ್ದಾರೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಪ್ರಮುಖ ಕಿಂಗ್‌ಪಿನ್ ಬಸವರಾಜ್ ಕಿನ್ನಾಳೆ ಅವರನ್ನು ಬಂಧಿಸಿ ಕಠಿಣ ವಿಚಾರಣೆ ನಡೆಸಲಾಗುತ್ತಿದ್ದು, ಇವರಿಂದ ಪ್ರಮುಖ ದಾಖಲೆಗಳು ಹಾಗೂ ಅಕ್ರಮದ ಸಂಪೂರ್ಣ ಜಾಲದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

ಕೆಪಿಎಸ್​ಸಿ ರದ್ದುಗೊಳಿಸುವ ಬಗ್ಗೆ ಸರ್ಕಾರದ ಗಂಭೀರ ಚಿಂತನೆ
ಇದರ ನಡುವೆ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕೆಪಿಎಸ್​ಸಿ ಅಕ್ರಮ ನೇಮಕಾತಿ ಹಗರಣವು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಾಮಾಣಿಕವಾಗಿ ಕಷ್ಟಪಟ್ಟು ಓದುವ ಬಡ ಹಾಗೂ ಪ್ರತಿಭಾವಂತ ಗ್ರಾಮೀಣ ಯುವಕರಿಗೆ ಈ ಹಗರಣದಿಂದ ತೀವ್ರ ಅನ್ಯಾಯವಾಗುತ್ತಿದ್ದು, ಉದ್ಯೋಗಾಕಾಂಕ್ಷಿಗಳಲ್ಲಿ ಅಪಾರ ನಿರಾಶೆ ಮೂಡಿಸಿದೆ. ಅಲ್ಲದೆ, ಅಕ್ರಮ ಮಾರ್ಗದ ಮೂಲಕ ಹುದ್ದೆ ಪಡೆದವರ ವಿರುದ್ಧ ಕಠಿಣ ಕ್ರಮ ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳ ಮೇಲೆ ಸಾರ್ವಜನಿಕರಿಗೆ ನಂಬಿಕೆ ಉಳಿಸುವ ಉದ್ದೇಶದಿಂದ, ಇಡೀ ಕೆಪಿಎಸ್​ಸಿಯನ್ನೇ ಸಂಪೂರ್ಣವಾಗಿ ರದ್ದುಗೊಳಿಸುವ ಬಗ್ಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ಹೊರಬಿಳುವ ಸಾಧ್ಯತೆ ಇದೆ.

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆಸಲಾಗುವ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಹಣದ ವಹಿವಾಟು ನಡೆದದ್ದು ಇದೀಗ ಜಗಜ್ಜಾಹಿರವಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಸಿಗಬೇಕಿದ್ದ ಹುದ್ದೆಗಳು ಹಣವಿದ್ದವರಿಗೆ ಮಾರಾಟ ಮಾಡುವ ವ್ಯವಸ್ಥಿತ ಹಗರಣವೇ ಕೆಪಿಎಸ್​ಸಿ ಹಗರಣ. ಪರೀಕ್ಷೆಗಳು ಆರಂಭವಾಗುವ ಮುನ್ನವೇ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವುದು, ಉತ್ತರಗಳನ್ನು ಸಿದ್ಧಪಡಿಸಿ ಅಭ್ಯರ್ಥಿಗಳಿಗೆ ನೀಡಿ, ಅವರಿಂದ ನಗದು ಹಣ ಇಲ್ಲವೇ ಖಾಲಿ ಚೆಕ್‌ಗಳನ್ನು ಪಡೆದುಕೊಂಡು ಅಕ್ರಮ ಎಸಗುತ್ತಿದ್ದರು.

ಒಟ್ಟಾರೆಯಾಗಿ.. ಆಯೋಗದ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಐಎಎಸ್ ಅಧಿಕಾರಿಗಳೇ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಂದಿಸಿದೆ. ಮುಂಬರುವ ದಿನಗಳಲ್ಲಿ ಇಂತಹ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಿ, ಪಾರದರ್ಶಕ ನೇಮಕಾತಿ ವ್ಯವಸ್ಥೆಯನ್ನು ಜಾರಿಗೆ ತರಲು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಒತ್ತಡ ಸರ್ಕಾರದ ಮೇಲಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES