SOCIAL MEDIA

Newsletter

PARTNER SITES
Select Language Select State

ನಾಡದ್ರೋಹಿ MES ಗೆ ಶಾಕ್ : ಕನ್ನಡ ರಾಜ್ಯೋತ್ಸವ ಪ್ರಯುಕ್ತ "ಕರಾಳ ದಿನ"ಕ್ಕೆ ಇಲ್ಲ ಅನುಮತಿ

ರಾಜ್ಯೋತ್ಸವದ ದಿನದಂದೇ 'ಕರಾಳ ದಿನ' ಆಚರಿಸಲು ಮುಂದಾಗಿದ್ದ ಎಂಇಎಸ್ (MES) ಸಂಘಟನೆಯ ಯತ್ನಕ್ಕೆ ತಡೆ ನೀಡಿರುವ ಜಿಲ್ಲಾಡಳಿತ, ಮಹಾರಾಷ್ಟ್ರದ ಪ್ರಮುಖ ನಾಯಕರು ಬೆಳಗಾವಿ ಪ್ರವೇಶಿಸದಂತೆ ನಿಷೇಧ ಹೇರಿ ಕಡಕ್ ಆದೇಶ ಹೊರಡಿಸಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 31, 2026, 03:56 PM IST | Updated: Oct 31, 2026, 04:03 PM IST
Image Credit: Karnataka Rajyotsava 2026
Join

ಬೆಳಗಾವಿ: ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಸಜ್ಜಾಗಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾರಾಷ್ಟ್ರದ ನಾಯಕರಿಗೆ ಹಾಗೂ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಪುಂಡರಿಗೆ ಜಿಲ್ಲಾಡಳಿತ ಕಠಿಣ ಶಾಕ್ ನೀಡಿದೆ. ನವೆಂಬರ್ 1 ರಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮಹಾರಾಷ್ಟ್ರದ ಪ್ರಮುಖ ನಾಯಕರ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಹೌದು.. ಪ್ರತಿವರ್ಷದಂತೆ ಈ ಬಾರಿಯೂ ನವೆಂಬರ್ 1 ರಂದು ರಾಜ್ಯೋತ್ಸವದ ವಿರುದ್ಧವಾಗಿ ಎಂಇಎಸ್ ಸಂಘಟನೆಯು 'ಕರಾಳ ದಿನ' ಆಚರಿಸಲು ಮುಂದಾಗಿತ್ತು. ಈ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದಿಂದ ಉದ್ಧವ ಠಾಕ್ರೆ ಬಣದ ಮುಖಂಡ ವಿಜಯ ದೇವಣೆ ಸೇರಿದಂತೆ ಒಟ್ಟು 8 ಜನ ಶಿವಸೇನೆ ಹಾಗೂ ಎಂಇಎಸ್ ಮುಖಂಡರು ಬೆಳಗಾವಿಗೆ ಆಗಮಿಸಲು ಸಿದ್ಧತೆ ನಡೆಸಿದ್ದರು. ಆದರೆ, ಶಾಂತಿಭಂಗ ಉಂಟಾಗುವುದನ್ನು ತಡೆಯಲು ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಹಾರಾಷ್ಟ್ರ ನಾಯಕರ ಪ್ರವೇಶವನ್ನು ನಿರ್ಬಂಧಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. 2023ರ ಬಿಎನ್ಎಸ್ ಕಾಯ್ದೆಯ ಕಲಂ 163ರ ಅಡಿ ಈ ನಿರ್ಬಂಧ ವಿಧಿಸಲಾಗಿದೆ.

ಅನುಮತಿ ನಿರಾಕರಿಸಿದರೂ MES ಕೀಟಲೆ
ಕನ್ನಡ ರಾಜ್ಯೋತ್ಸವದ ದಿನದಂದೇ ಕರಾಳ ದಿನಾಚರಣೆ ನಡೆಸಲು ಮತ್ತು ಮೆರವಣಿಗೆ ಮಾಡಲು ಎಂಇಎಸ್ ಮುಖಂಡರು ಜಿಲ್ಲಾಡಳಿತಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ನಾಡಿನ ಭಾವನೆಗಳಿಗೆ ಧಕ್ಕೆ ತರುವ ಮತ್ತು ಸೌಹಾರ್ದತೆಗೆ ಭಂಗ ತರುವ ಇಂತಹ ಕೃತ್ಯಗಳಿಗೆ ಅವಕಾಶ ನೀಡದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಸ್ಪಷ್ಟವಾಗಿ ಅನುಮತಿಯನ್ನು ನಿರಾಕರಿಸಿದೆ.

ಆಡಳಿತದಿಂದ ಅಧಿಕೃತ ಅನುಮತಿ ಸಿಗದಿದ್ದರೂ ಸಹ, ಎಂಇಎಸ್ ಪುಂಡರು ಮಾತ್ರ ತಮ್ಮ ಚಾಳಿಯನ್ನು ಬಿಡದೆ ಕರಾಳ ದಿನಾಚರಣೆ ನಡೆಸಲು ಪಟ್ಟು ಹಿಡಿದಿದ್ದಾರೆ. ನಗರದ ಸಂಭಾಜಿ ಉದ್ಯಾನ ಮೈದಾನದಿಂದ ಮರಾಠ ಮಂದಿರದ ವರೆಗೆ ಮೆರವಣಿಗೆ ನಡೆಸಲು ಅವರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಬಿಗಿ ಪೊಲೀಸ್ ಭದ್ರತೆ ಮತ್ತು ಎಚ್ಚರಿಕೆ
ಪ್ರತಿವರ್ಷ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಯತ್ನಿಸುವ ಎಂಇಎಸ್ ಸಂಘಟನೆಯ ಈ ಧೋರಣೆಗೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅನುಮತಿ ಇಲ್ಲದೆಯೂ ಕಾನೂನು ಉಲ್ಲಂಘಿಸಿ ಪುಂಡಾಟಿಕೆ ನಡೆಸಲು ಹೊರಟಿರುವವರ ಮೇಲೆ ಪೊಲೀಸ್ ಇಲಾಖೆ ತೀವ್ರ ಕಣ್ಣಿಟ್ಟಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಳಗಾವಿ ನಗರಾದ್ಯಂತ ಹದ್ದಿನ ಕಣ್ಣು ಇಡಲಾಗಿದ್ದು, ನೂರಾರು ಪೊಲೀಸರನ್ನು ನಿಯೋಜಿಸಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಾಡದ್ರೋಹಿ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಕಡಕ್ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ, ನಾಳೆ ಬೆಳಗಾವಿಯಲ್ಲಿ ಎಲ್ಲೆಡೆ ಕನ್ನಡಮಯ ವಾತಾವರಣವಿದ್ದು, ಕನ್ನಡಿಗರು ಒಗ್ಗಟ್ಟಿನಿಂದ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲು ಮುನ್ನುಡಿ ಬರೆದಿದ್ದಾರೆ. ಮತ್ತೊಂದೆಡೆ, ಜಿಲ್ಲಾಡಳಿತದ ನಿಷೇದಾಜ್ಞೆ ಹಾಗೂ ಕಾವಲು ಕಾಯುತ್ತಿರುವ ಪೊಲೀಸರ ನಡುವೆಯೂ ಎಂಇಎಸ್ ಪುಂಡರ ಹಠಮಾರಿತನ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES