ಮಂಡ್ಯ : ಸಿಎಂ ಆದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್. ಬರೋಬ್ಬರಿ 2 ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಕೇಂದ್ರ ಸಚಿವ ಹೆಚ್ಡಿಕೆ ವಿರುದ್ಧ ವೇದಿಕೆಯಲ್ಲೇ ಅಬ್ಬರಿಸಿ ಮಾತು ಮಾತಿಗೂ ಕೌಂಟರ್ ಕೊಟ್ಟಿದ್ದಾರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಿಎಂ ಕುರ್ಚಿ ಅಲಂಕರಿಸಿದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿದ ಡಿಕೆ.ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ ಕೊಡಲಾಯಿತು. ಹೆಲಿಕಾಪ್ಟರ್ ಮೂಲಕ ಪಿಇಟಿ ಮೈದಾನಕ್ಕೆ ಆಗಮಿಸಿದ ಸಿಎಂಗೆ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸ್ವಾಗತ ಕೋರಿದ್ರು. ಇನ್ನು ಸಿಎಂ ಆಗಮನಕ್ಕೂ ಮುನ್ನವೇ ಮಂಡ್ಯದಲ್ಲಿ ಪ್ರತಿಭಟನೆಯ ಕಾವು ಜೋರಾಗಿತ್ತು. ಕಬ್ಬಿಗೆ ಸೂಕ್ತ ಬೆಲೆ, ಸಾಲಮನ್ನಾ, ಸರ್ಕಾರಿ ಶಾಲೆಗಳ ಉಳಿವು ಹಾಗೂ ಏಕರೂಪ ಶಿಕ್ಷಣಕ್ಕೆ ಆಗ್ರಹಿಸಿ ರೈತ ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ವು. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು.
ಇದೆಲ್ಲದರ ನಡುವೆ ಮಂಡ್ಯಕ್ಕೆ ಆಗಮಿಸಿದ ಸಿಎಂ, ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ್ರು. ಬಳಿಕ ರೈತರು, ಹೋರಾಟಗಾರರಿಂದ ಮನವಿ ಸ್ವೀಕರಿಸಿ ಅಹವಾಲು ಆಲಿಸಿದ್ರು. ಇನ್ನು ಮಂಡ್ಯ ಅಂದ್ರೆ ಕಾವೇರಿ. ಮಂಡ್ಯ ಜನರ ಬದುಕು, ಅನ್ನದ ತಟ್ಟೆಯೇ ಕಾವೇರಿ ಅಂತ ಹೇಳಿದ ಡಿಕೆಶಿ, ಮೇಕೆದಾಟು ಯೋಜನೆ ಬಗ್ಗೆ ಮಹತ್ವದ ಮಾತುಗಳನ್ನಾಡಿದ್ರು. ಮೇಕೆದಾಟು ಯೋಜನೆಯಿಂದ ಕರ್ನಾಟಕ ಮಾತ್ರವಲ್ಲ, ತಮಿಳುನಾಡಿಗೂ ಅನುಕೂಲವಾಗಲಿದೆ. ಕಷ್ಟದ ಸಮಯದಲ್ಲಿ ನೀರು ಸಂಗ್ರಹಿಸಲು ಯೋಜನೆ ಸಹಕಾರಿಯಾಗಲಿದೆ. ಈ ವಿಚಾರದಲ್ಲಿ ಸರ್ವಪಕ್ಷಗಳ ನಿಯೋಗ ಕೇಂದ್ರದ ಬಳಿಗೆ ತೆರಳಬೇಕು ಅಂತ ಮನವಿ ಮಾಡಿದ್ರು.
ಇನ್ನು ಮಂಡ್ಯದಲ್ಲಿ ಎಆರ್‌ಎಐ ಘಟಕ ಸ್ಥಾಪನೆಗೆ ಜಾಗ ನೀಡಲು ರಾಜ್ಯ ಸರ್ಕಾರ ವಿಳಂಬ ಮಾಡ್ತಿದೆ ಅನ್ನೋ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೂ ಡಿಕೆಶಿ ತಿರುಗೇಟು ಕೊಟ್ರು. ಈಗಾಗಲೇ 100 ಎಕರೆ ಜಾಗ ನೀಡಿದ್ದೇವೆ. ಇನ್ನೂ 500 ಎಕರೆ ಕೇಳ್ತಿದ್ದಾರೆ. ಅಗತ್ಯವಿರುವಷ್ಟು ಜಮೀನು ನೀಡಲು ಸರ್ಕಾರ ಸಿದ್ಧವಿದೆ. ಅವರು ಯಾವ ಜಾಗ ಕೇಳ್ತಾರೋ ಅದನ್ನೇ ಒದಗಿಸುತ್ತೇವೆ ಅಂತ ಸ್ಪಷ್ಟಪಡಿಸಿದ್ರು.
ಇನ್ನು ಮಂಡ್ಯ ವಿವಿ ಆವರಣದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಿಎಂ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ರು. ಫಲಾನುಭವಿಗಳಿಗೆ ಸವಲತ್ತು ವಿತರಿಸಿದ್ರು. ಬಳಿಕ ಮಾತನಾಡಿದ ಡಿಕೆಶಿ, ಟೀಕೆ, ಅಸೂಯೆಯಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಬಲಿಷ್ಠ ವಿರೋಧ ಪಕ್ಷ ಇರಬೇಕು. ಬರೀ ಟೀಕೆ ಮಾಡದೆ ಅಭಿವೃದ್ಧಿ ವಿಚಾರವಾಗಿ ಸಲಹೆ ನೀಡಿ ಅಂತ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ರು. ಹಾಲಿನ ದರ ಹೆಚ್ಚಿಸಿ ರೈತರಿಗೆ 7 ರೂಪಾಯಿ ಹೆಚ್ಚುವರಿ ನೀಡುತ್ತಿದ್ದೇವೆ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಬೆಳಗಾವಿಯಲ್ಲಿ ಎರಡು ದಿನ ಕುಳಿತಿದ್ದೇನೆ. ಕೇಂದ್ರ ಸರ್ಕಾರ ಸಕ್ಕರೆ ಬೆಲೆಯನ್ನು 50 ರೂಪಾಯಿಗೆ ಏರಿಸಲಿ ಅಂತ ಆಗ್ರಹಿಸಿದ್ರು. ಜೊತೆಗೆ ಕೇಂದ್ರ ಸಚಿವ ಹೆಚ್ಡಿಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ಕೂಡ ಮಾತನಲ್ಲಿ ಕುಟುಕಿದರು.
ಒಟ್ಟಾರೆ, ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಸಾವಿರಾರು ಕೋಟಿಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹೆಚ್ಡಿಕೆಗೆ ಕೌಂಟರ್ ಕೊಟ್ಟಿದ್ದಾರೆ. ಇದು ಕೇವಲ ಕಾರ್ಯಕ್ರಮವಾದ್ರು ರಾಜಕೀಯ ಕಿತ್ತಾಟಕ್ಕೆ ಸಾಕ್ಷಿಯಾಗಿತ್ತು. ಅದ್ರೆ ಇದಕ್ಕೆ ಸಾಕ್ಷಿ ಎಂಬಂತೆ ಹೆಚ್ಡಿಕೆ ಯಾವ ರೀತಿ ಕೌಂಟರ್ ಕೊಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.