SOCIAL MEDIA

Newsletter

PARTNER SITES
Select Language Select State

ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಸಿಹಿ ಸುದ್ದಿ: ವಿದ್ಯುತ್ ದರ ಇಳಿಕೆ!

ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಗೃಹ ಬಳಕೆ ವಿದ್ಯುತ್ ದರ ಇಳಿಕೆಯಾಗುವ ನಿರೀಕ್ಷೆಯಿದೆ. ಉಳಿತಾಯದ ಲಾಭವನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ಪ್ರತಿ ಯೂನಿಟ್‌ಗೆ ಸರಾಸರಿ 16 ಪೈಸೆ ದರ ಕಡಿತಗೊಳಿಸಲು ಸಿದ್ಧತೆ ನಡೆದಿದೆ.

Written By Yashaswini V
Published: Nov 27, 2026, 09:24 IST | Updated: Nov 27, 2026, 09:27 IST
Join

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತು ಇಂಧನ ಇಲಾಖೆ ಕಡೆಯಿಂದ ಸಿಹಿ ಸುದ್ದಿಯೊಂದು ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಮುಂಬರುವ ದಿನಗಳಲ್ಲಿ ಗೃಹ ಬಳಕೆಯ ವಿದ್ಯುತ್ ದರದಲ್ಲಿ ಇಳಿಕೆಯಾಗುವ ಸಾಧ್ಯತೆಯಿದ್ದು, ಸಾಮಾನ್ಯ ಗ್ರಾಹಕರ ಜೇಬಿಗೆ ಕೊಂಚ ನಿರಾಳತೆ ಸಿಗುವ ನಿರೀಕ್ಷೆಯಿದೆ.

ಎಸ್ಕಾಂ ಕಂಪನಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆ:
ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳಾದ ಎಸ್ಕಾಂಗಳು - ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಹಾಗೂ ಚೆಸ್ಕಾಂ ಆರ್ಥಿಕ ಪರಿಸ್ಥಿತಿ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಸುಧಾರಿಸುತ್ತಿದೆ. ಪ್ರಮುಖವಾಗಿ ಹೊರಗಿನಿಂದ ವಿದ್ಯುತ್ ಖರೀದಿಸುವ ಪ್ರಕ್ರಿಯೆಯಲ್ಲಿ ಎಸ್ಕಾಂಗಳಿಗೆ ಹೆಚ್ಚಿನ ಹಣ ಉಳಿತಾಯವಾಗಿದೆ. ವಿದ್ಯುತ್ ಖರೀದಿಗೆ ಈ ಬಾರಿ ನಿರೀಕ್ಷೆಗಿಂತ ಕಡಿಮೆ ವೆಚ್ಚ ತಗುಲಿರುವುದರಿಂದ ಕಂಪನಿಗಳು ಲಾಭದ ಹಾದಿಗೆ ಮರಳುತ್ತಿವೆ. ಈ ಉಳಿತಾಯದ ಲಾಭವನ್ನು ನೇರವಾಗಿ ರಾಜ್ಯದ ವಿದ್ಯುತ್ ಗ್ರಾಹಕರಿಗೆ ವರ್ಗಾಯಿಸಲು ಇಂಧನ ಇಲಾಖೆ ಹಾಗೂ ಎಸ್ಕಾಂಗಳು ಚಿಂತನೆ ನಡೆಸಿವೆ ಎನ್ನಲಾಗಿದೆ.

ಪ್ರತಿ ಯೂನಿಟ್‌ಗೆ ಎಷ್ಟು ದರ ಇಳಿಕೆಯಾಗಬಹುದು?
ಲಭ್ಯವಿರುವ ಮಾಹಿತಿಗಳ ಪ್ರಕಾರ, ವಿದ್ಯುತ್ ಖರೀದಿಯಲ್ಲಿ ಉಳಿತಾಯವಾಗಿರುವ ಮೊತ್ತದ ಭಾಗವಾಗಿ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಮಾಡಲು ಎಸ್ಕಾಂ ಕಂಪನಿಗಳು ಯೋಜಿಸಿವೆ ಎನ್ನಲಾಗಿದೆ. ಸದ್ಯದ ಅಂದಾಜಿನಂತೆ ಪ್ರತಿ ಯೂನಿಟ್‌ಗೆ ಸರಾಸರಿ 16 ಪೈಸೆಯಷ್ಟು ದರ ಕಡಿಮೆಯಾಗುವ ನಿರೀಕ್ಷೆ ಇದೆ. ಮೇಲ್ನೋಟಕ್ಕೆ ಇದು ಸಣ್ಣ ಮೊತ್ತದಂತೆ ಕಂಡರೂ, ತಿಂಗಳಿಗೆ ನೂರಾರು ಯೂನಿಟ್ ವಿದ್ಯುತ್ ಬಳಸುವ ಮಧ್ಯಮ ವರ್ಗದ ಕುಟುಂಬಗಳು ಮತ್ತು ಸಾಮಾನ್ಯ ಗ್ರಾಹಕರಿಗೆ ವಾರ್ಷಿಕವಾಗಿ ಒಂದಷ್ಟು ಹಣ ಉಳಿತಾಯವಾಗಲಿದೆ.

2027ರ ಏಪ್ರಿಲ್‌ನಿಂದ ಜಾರಿ ಸಾಧ್ಯತೆ!
ಈ ವಿದ್ಯುತ್‌ ದರ ಇಳಿಕೆಯ ಪ್ರಸ್ತಾವನೆಯು ಸದ್ಯ ಪ್ರಾಥಮಿಕ ಹಂತದಲ್ಲಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಈ ಬಗ್ಗೆ ನಿರ್ಧರಿಸಬೇಕಿದೆ. ನಿಯಮಾವಳಿಗಳ ಪ್ರಕಾರ, ಪ್ರತಿ ವರ್ಷ ಎಸ್ಕಾಂಗಳು ತಮ್ಮ ಆದಾಯ ಮತ್ತು ವೆಚ್ಚದ ವಿವರಗಳನ್ನು ಕೆಇಆರ್‌ಸಿಗೆ ಸಲ್ಲಿಸುತ್ತವೆ. ಆಯೋಗವು ಎಸ್ಕಾಂಗಳ ಆರ್ಥಿಕ ಸ್ಥಿತಿಗತಿ, ವಿದ್ಯುತ್ ಖರೀದಿ ವೆಚ್ಚ ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ಅಂತಿಮ ದರ ಪರಿಷ್ಕರಣೆ ಆದೇಶವನ್ನು ಹೊರಡಿಸುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2027ರ ಏಪ್ರಿಲ್ ತಿಂಗಳಿನಿಂದ ಈ ಪರಿಷ್ಕೃತ ಹಾಗೂ ಕಡಿಮೆ ದರಗಳು ಜಾರಿಗೆ ಬರುವ ಬಲವಾದ ಸಾಧ್ಯತೆಯಿದೆ.

ಕಳೆದ ಕೆಲವು ತಿಂಗಳುಗಳಿಂದ ತರಕಾರಿ, ದಿನಸಿ ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿತ್ತು. ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಇಳಿಕೆಯ ಸುದ್ದಿ ಗ್ರಾಹಕರಿಗೆ ತುಸು ನೆಮ್ಮದಿ ತಂದಿದೆ. ಗೃಹ ಜ್ಯೋತಿ ಯೋಜನೆಯ ವ್ಯಾಪ್ತಿಗೆ ಬಾರದ ಹಾಗೂ ನಿಗದಿತ ಮಿತಿಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಈ ದರ ಇಳಿಕೆಯಿಂದ ನೇರ ಪ್ರಯೋಜನವಾಗಲಿದೆ. ಕೆಇಆರ್‌ಸಿ ಈ ಕುರಿತು ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES