SOCIAL MEDIA

Newsletter

PARTNER SITES
Select Language Select State

ದೀಪಾವಳಿಗೂ ಮುನ್ನ ರಾಜ್ಯ ರೈತರಿಗೆ ಸಿಹಿ ಸುದ್ದಿ..! ಹಾಲಿನ ದರದಲ್ಲಿ ಭಾರಿ ಏರಿಕೆ..

ಬರಗಾಲದ ಸಂಕಷ್ಟದಲ್ಲಿರುವ ರಾಜ್ಯದ ಅನ್ನದಾತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಎಲ್‌ನಿನೊ ಪರಿಣಾಮದಿಂದ ಕುಸಿದಿರುವ ಹಾಲು ಉತ್ಪಾದನೆ ಮತ್ತು ರೈತರ ಕಷ್ಟವನ್ನು ಮನಗಂಡು, ಪ್ರತಿ ಲೀಟರ್ ಹಾಲಿನ ದರವನ್ನು ಬರೋಬ್ಬರಿ 8 ರೂಪಾಯಿಗಳಷ್ಟು ಏರಿಕೆ ಮಾಡಲು ನಿರ್ಧರಿಸಿದೆ.. ಹಾಗಿದ್ರೆ ಇದರಲ್ಲಿ ರೈತರಿಗೆ ಸಿಗುವ ಹಣವೇಷ್ಟು.. ಯಾವಾಗಿನಿಂದ ಜಾರಿಗೆ ಬರಲಿದೆ...? ಸಂಪೂರ್ಣ ವಿವರ ಇಲ್ಲಿದೆ..

Written By Krishna NK
Published: Oct 29, 2026, 04:34 PM IST | Updated: Oct 29, 2026, 04:37 PM IST
Image Credit: Milk Price hike
Join

ಬೆಂಗಳೂರು: ರಾಜ್ಯದಲ್ಲಿ ಎಲ್‌ನಿನೊ ಪರಿಣಾಮದಿಂದ ತೀವ್ರ ಬರಗಾಲ ತಲೆದೋರಿದ್ದು, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದು ಮತ್ತು ರೈತರ ಬೇಡಿಕೆಯನ್ನು ಪರಿಗಣಿಸಿ, ಪ್ರತಿ ಲೀಟರ್ ಹಾಲಿನ ದರವನ್ನು 8 ರೂಪಾಯಿಗಳಷ್ಟು ಏರಿಕೆ ಮಾಡಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನವೆಂಬರ್ 1 ರಿಂದಲೇ ಈ ಹೊಸ ದರ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವರು, ರಾಜ್ಯದ 228 ತಾಲೂಕುಗಳಲ್ಲಿ ಬರ ಘೋಷಣೆಯಾಗಿದ್ದು, ಮಳೆಯಿಲ್ಲದೆ ಬೆಳೆಗಳು ನಾಶವಾಗಿವೆ. ಇದರಿಂದ ಕಂಗಾಲಾಗಿರುವ ರೈತರಿಗೆ ಹೈನುಗಾರಿಕೆಯೇ ಈಗ ಮುಖ್ಯ ಬದುಕಿನ ಆಸರೆಯಾಗಿದೆ. ಆದರೆ, ಅನಿಶ್ಚಿತ ಮಳೆ ಮತ್ತು ಬರದ ಕಾರಣದಿಂದಾಗಿ ರಾಜ್ಯದಲ್ಲಿ ನಿತ್ಯ ಹಾಲಿನ ಉತ್ಪಾದನೆ ಬರೋಬ್ಬರಿ 10 ಲಕ್ಷ ಲೀಟರ್‌ಗಳಷ್ಟು ಕುಸಿದಿದೆ. ಇದರಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಹಾಲಿನ ದರ ಪರಿಷ್ಕರಣೆಗೆ ತೀವ್ರ ಒತ್ತಡವಿತ್ತು ಎಂದು ಸ್ಪಷ್ಟಪಡಿಸಿದರು.

ದರ ಏರಿಕೆಯ ಸಂಪೂರ್ಣ ವಿವರ:
ಒಟ್ಟು ಏರಿಕೆ: ಪ್ರತಿ ಲೀಟರ್ ಹಾಲಿಗೆ 8 ರೂ.ಗಳಷ್ಟು ಏರಿಕೆ ಮಾಡಲಾಗಿದೆ.
ರೈತರಿಗೆ ನೇರ ಲಾಭ: ಇದರಲ್ಲಿ 7 ರೂ. ನೇರವಾಗಿ ರೈತರಿಗೆ ಸಿಗಲಿದೆ ಮತ್ತು 1 ರೂ. ಒಕ್ಕೂಟಕ್ಕೆ ಹೋಗಲಿದೆ.
ಹೊಸ ದರ ಪಟ್ಟಿ: ಈಗಾಗಲೇ ಪ್ರತಿ ಲೀಟರ್ ಹಾಲಿಗೆ 42 ರೂ. ದರ ಸಿಗಲಿದ್ದು, ಇದರೊಂದಿಗೆ ಸರ್ಕಾರದ ವತಿಯಿಂದ ಸಿಗುವ 5 ರೂ. ಪ್ರೋತ್ಸಾಹ ಧನವೂ ಸೇರಲಿದೆ. ಒಟ್ಟಾರೆಯಾಗಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ 47 ರೂ. ದೊರೆಯಲಿದೆ.
ರೈತರು ಆರಂಭದಲ್ಲಿ 10 ರೂ. ಏರಿಕೆಗೆ ಆಗ್ರಹಿಸಿದ್ದರು. ಆದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಹೈನುಗಾರರನ್ನು ಉಳಿಸುವ ದೃಷ್ಟಿಯಿಂದ ಮಧ್ಯಮ ಮಾರ್ಗವಾಗಿ 8 ರೂ. ಹೆಚ್ಚಿಸಲಾಗಿದೆ.

ಗುಜರಾತ್, ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಇನ್ನೂ ಕಡಿಮೆಯಿದೆ. ದೇಶದಲ್ಲಿ ಹಾಲಿನ ಸರಾಸರಿ ದರ ಪ್ರತಿ ಲೀಟರ್‌ಗೆ 57 ರೂ. ಇದೆ. ಬರದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ರೈತರನ್ನು ಉಳಿಸುವುದು ನಮ್ಮ ಕರ್ತವ್ಯ ಎಂದು ಸಚಿವರು ತಿಳಿಸಿದ್ದಾರೆ.

ಹಾಲಿನ ದರ ಏರಿಕೆಯ ಜತೆಗೆ ಮೊಸರು ಸೇರಿದಂತೆ ಇತರೆ ಉಪ ಉತ್ಪನ್ನಗಳ ದರವೂ ಏರಿಕೆಯಾಗಲಿದ್ದು, ಈ ಕುರಿತು ಮುಂದಿನ ದಿನ ತೀರ್ಮಾನವನ್ನು ಆಯಾ ಹಾಲು ಒಕ್ಕೂಟಗಳು ಕೈಗೊಳ್ಳಲಿವೆ ಎಂದು ತಿಳಿಸಲಾಗಿದೆ. ಒಟ್ಟಾರೇ ಬರದಿಂದ ತತ್ತರಿಸಿರುವ ನಾಡಿನ ಅನ್ನದಾತರಿಗೆ ಹಾಗೂ ಹೈನುಗಾರರಿಗೆ ಸರ್ಕಾರದ ಈ ನಿರ್ಧಾರವು ತುಸು ಸಮಾಧಾನ ತಂದಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES