Vande Bharat Sleeper Train: ಕರ್ನಾಟಕದ ರೈಲ್ವೆ ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಘೋಷಣೆಗಳನ್ನ ಮಾಡಿದೆ. ಬೆಂಗಳೂರು ಮತ್ತು ಮುಂಬೈ ನಡುವೆ ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ದೊರೆತಿದ್ದು, ರಾಜ್ಯದ ಪ್ರಯಾಣಿಕರಿಗೆ ಹೊಸ ರೈಲು ಸಂಪರ್ಕದ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ಬೆಂಗಳೂರು-ಚೆನ್ನೈ ನಡುವೆ ಬುಲೆಟ್ ರೈಲು ಯೋಜನೆ, ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಸಂಚಾರ ಸೇರಿದಂತೆ ಹಲವು ಮಹತ್ವದ ರೈಲ್ವೆ ಯೋಜನೆಗಳ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ದಿನ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಪ್ರಹ್ಲಾದ್ ಜೋಶಿ ಅವರು ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು
ಐಟಿ ನಗರಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ರೈಲ್ವೆ ಸಂಪರ್ಕವನ್ನ ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ವಂದೇ ಭಾರತ್ ಸ್ಲೀಪರ್ ರೈಲು ಯೋಜನೆಯನ್ನ ಘೋಷಿಸಲಾಗಿದೆ. ಈ ರೈಲು ಬೆಂಗಳೂರಿನಿಂದ ಹೊರಟು ಆಂಧ್ರಪ್ರದೇಶದ ಅನಂತಪುರ, ಕರ್ನಾಟಕದ ರಾಯಚೂರು ಮತ್ತು ಕಲಬುರಗಿ ಮಾರ್ಗವಾಗಿ ಮುಂಬೈ ತಲುಪಲಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಇದೇ ವೇಳೆ ಬೆಂಗಳೂರು-ಹುಬ್ಬಳ್ಳಿ ಮಾರ್ಗವಾಗಿ ಪುಣೆ ಮತ್ತು ಮುಂಬೈಗೆ ತೆರಳುವ ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲಿನ ಬಗ್ಗೆಯೂ ಸಚಿವರು ಮಾಹಿತಿ ನೀಡಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಮತ್ತೊಂದು ಸ್ಲೀಪರ್ ರೈಲು ಸೌಲಭ್ಯ ದೊರೆಯಲಿದೆ. ಈ ಯೋಜನೆಯಿಂದ ಕರ್ನಾಟಕದ ವಿವಿಧ ಭಾಗಗಳ ಪ್ರಯಾಣಿಕರಿಗೆ ಮುಂಬೈ ಸಂಪರ್ಕ ಸುಲಭವಾಗಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ರೈಲು ಸಂಪರ್ಕಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದೀಗ ಅವರ ಬೇಡಿಕೆ ಈಡೇರಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಬೆಂಗಳೂರು-ಚೆನ್ನೈಗೆ ಬುಲೆಟ್ ರೈಲು: 73 ನಿಮಿಷದಲ್ಲಿ ಪ್ರಯಾಣ!
ಬೆಂಗಳೂರು ಮತ್ತು ಚೆನ್ನೈ ನಡುವೆ ಬುಲೆಟ್ ರೈಲು ಸಂಚಾರದ ಬಗ್ಗೆಯೂ ಕೇಂದ್ರ ರೈಲ್ವೆ ಸಚಿವರು ಮಹತ್ವದ ಮಾಹಿತಿ ನೀಡಿದ್ದಾರೆ. ಬುಲೆಟ್ ರೈಲು ಯೋಜನೆ ಪೂರ್ಣಗೊಂಡಿದ್ದು, ಈ ಹೈಸ್ಪೀಡ್ ರೈಲಿನ ಮೂಲಕ ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣವನ್ನ ಕೇವಲ 73 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಪ್ರಯಾಣವನ್ನು 2 ಗಂಟೆ 10 ನಿಮಿಷಗಳಲ್ಲಿ ತಲುಪುವಂತೆ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸುವ ಯೋಜನೆಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಬೆಂಗಳೂರು ದೊಡ್ಡ ನಗರವಾಗಿರುವ ಹಿನ್ನೆಲೆಯಲ್ಲಿ ಹೈಸ್ಪೀಡ್ ರೈಲು ಸಂಪರ್ಕವನ್ನ ಹುಬ್ಬಳ್ಳಿ ಭಾಗಗಳಿಗೂ ವಿಸ್ತರಿಸುವ ಕುರಿತು ತಿಳಿಸಿದ್ದಾರೆ.
ಬೆಂಗಳೂರು-ಮಂಗಳೂರು ವಂದೇ ಭಾರತ್ ಸಂಚಾರಕ್ಕೆ ಸಿದ್ಧತೆ
ಕರ್ನಾಟಕದ ಕರಾವಳಿ ಭಾಗಕ್ಕೂ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು-ಮಂಗಳೂರು ಮಾರ್ಗದ ಕೆಲಸಗಳು ಅಂತಿಮ ಹಂತ ತಲುಪಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಅಗತ್ಯವಿರುವ ವಿದ್ಯುತ್ ಸಂಬಂಧಿತ ಕಾಮಗಾರಿಗಳು ಕೊನೆಯ ಹಂತದಲ್ಲಿವೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇನ್ನೂ ನಾಲ್ಕು ವಾರಗಳಲ್ಲಿ ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದರಿಂದ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಗರ ಮಂಗಳೂರು ನಡುವೆ ವೇಗದ ರೈಲು ಪ್ರಯಾಣದ ಸೌಲಭ್ಯ ದೊರೆಯುವ ನಿರೀಕ್ಷೆಯಿದೆ.
ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಸಚಿವರು
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮೊದಲಿಗೆ ಕರ್ನಾಟಕದ ಜನತೆಗೆ ಕನ್ನಡದಲ್ಲಿಯೇ ರಾಜ್ಯೋತ್ಸವದ ಶುಭಾಶಯಗಳನ್ನ ತಿಳಿಸಿದರು. ಇದೇ ಸಂದರ್ಭದಲ್ಲಿ ತಾವು ಕನ್ನಡ ಭಾಷೆಯನ್ನ ಕಲಿಯಬೇಕೆಂಬ ಆಸೆಯನ್ನೂ ವ್ಯಕ್ತಪಡಿಸಿದರು. ಭಾರತವನ್ನ ಜಗತ್ತು ವಿಶ್ವಾಸ ಮತ್ತು ಸತ್ಯದ ದೃಷ್ಟಿಯಿಂದ ನೋಡುತ್ತಿದೆ. ಮಿಲಿಟರಿ ಹಾಗೂ ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶ ಅಭಿವೃದ್ಧಿ ಸಾಧಿಸುತ್ತಿದೆ. ಈ ಬೆಳವಣಿಗೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಕಾರಣವೆಂದು ಸಚಿವರು ಹೇಳಿದರು.
ಒಟ್ನಲ್ಲಿ ರಾಜ್ಯೋತ್ಸವದ ದಿನ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲು ಘೋಷಣೆ, ಬೆಂಗಳೂರು-ಮುಂಬೈ ರೈಲು ಸಂಪರ್ಕ, ಬೆಂಗಳೂರು-ಚೆನ್ನೈ ಬುಲೆಟ್ ರೈಲು ಯೋಜನೆ ಹಾಗೂ ಬೆಂಗಳೂರು-ಮಂಗಳೂರು ವಂದೇ ಭಾರತ್ ಸಂಚಾರದ ಕುರಿತು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.