ಗದಗ ಜಿಲ್ಲೆಯಲ್ಲಿ ಕಡಲೆ ಮಾರಾಟದ ಹಣಕ್ಕಾಗಿ ಸ್ನೇಹಿತನಿಂದಲೇ ಭೀಕರ ಕೊಲೆ: ಕಿರಾತಕ ಅರೆಸ್ಟ್
ಒಂದು ವೇಳೆ ತಾನು ಕಡಲೆ ಮಾರಾಟ ಮಾಡಿರುವ ವಿಚಾರ ದ್ಯಾಮಪ್ಪನಿಗೆ ತಿಳಿದರೆ ಹಣ ಕೇಳುತ್ತಾನೆ ಮತ್ತು ತನು ಸಿಕ್ಕಿಬೀಳುತ್ತೇನೆ ಎಂಬ ಭೀತಿಯಿಂದ ಶರಣಪ್ಪ ಕ್ರಿಮಿನಲ್ ಕೃತ್ಯಕ್ಕೆ ಸಂಚು ರೂಪಿಸಿದ್ದಾನೆ.
ಗದಗ: ಕಡಲೆ ಮಾರಾಟದ ವಿಚಾರವಾಗಿ ಸ್ನೇಹಿತನಿಗೆ ವಂಚಿಸಿ, ಆತನನ್ನೇ ಭೀಕರವಾಗಿ ಕೊಲೆ ಮಾಡಿದ್ದ ಕರಾಳ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ. 62 ವರ್ಷದ ದ್ಯಾಮಪ್ಪ ಗೊಜನೂರು ಕೊಲೆಯಾದ ದುರ್ದೈವಿ. ಶರಣಪ್ಪ ನರಗುಂದ ಎಂಬಾತನೇ ಈ ಕೃತ್ಯ ಎಸಗಿದ ಕಿರಾತಕನಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕೊಲೆಯಾದ ದ್ಯಾಮಪ್ಪ ಅವರು ತಮ್ಮ ಬಳಿಯಿದ್ದ 45 ಕ್ವಿಂಟಾಲ್ ಕಡಲೆಯನ್ನು ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವ ಉದ್ದೇಶದಿಂದ ಸ್ನೇಹಿತ ಶರಣಪ್ಪನ ಹೆಸರಿನಲ್ಲಿ ಗೋಡೌನ್ ಒಂದರಲ್ಲಿ ಸಂಗ್ರಹಿಸಿಟ್ಟಿದ್ದರು. ಆದರೆ, ದ್ಯಾಮಪ್ಪನಿಗೆ ಯಾವುದೇ ಸುಳಿವಿಲ್ಲದೆ ಶರಣಪ್ಪ ಆ ಕಡಲೆಯನ್ನು ಬೇರೆಡೆ ಮಾರಾಟ ಮಾಡಿದ್ದನು. ಅಲ್ಲದೆ, ಬಂದಿದ್ದ 2 ಲಕ್ಷ 80 ಸಾವಿರ ರೂಪಾಯಿ ಹಣವನ್ನು ತನ್ನ ಸ್ವಂತ ಖರ್ಚಿಗಾಗಿ ಬಳಸಿಕೊಂಡಿದ್ದನು.
ಒಂದು ವೇಳೆ ತಾನು ಕಡಲೆ ಮಾರಾಟ ಮಾಡಿರುವ ವಿಚಾರ ದ್ಯಾಮಪ್ಪನಿಗೆ ತಿಳಿದರೆ ಹಣ ಕೇಳುತ್ತಾನೆ ಮತ್ತು ತನು ಸಿಕ್ಕಿಬೀಳುತ್ತೇನೆ ಎಂಬ ಭೀತಿಯಿಂದ ಶರಣಪ್ಪ ಕ್ರಿಮಿನಲ್ ಕೃತ್ಯಕ್ಕೆ ಸಂಚು ರೂಪಿಸಿದ್ದಾನೆ.
11 ದಿನಗಳ ನಂತರ ಬಯಲಾದ ರಹಸ್ಯ:
ಅಕ್ಟೋಬರ್ 8ರಂದು ನರಗುಂದಕ್ಕೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ದ್ಯಾಮಪ್ಪ, ವಾಪಸ್ ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ಅಕ್ಟೋಬರ್ 10ರಂದು ನರಗುಂದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ, ಕೊನೆಯದಾಗಿ ದ್ಯಾಮಪ್ಪ ಅವರು ಶರಣಪ್ಪನ ಜೊತೆ ಬೈಕ್‌ನಲ್ಲಿ ತೆರಳಿರುವ ಮಾಹಿತಿ ಲಭ್ಯವಾಯಿತು.
ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿ ಶರಣಪ್ಪ ಸತ್ಯ ಬಾಯಿಗೆ ಬಿಟ್ಟಿದ್ದಾನೆ. ಅಕ್ಟೋಬರ್ 8ರಂದು ಹೊಲಕ್ಕೆ ಹೋಗಿ ಬರೋಣ ಎಂದು ದ್ಯಾಮಪ್ಪನನ್ನು ಕರೆದುಕೊಂಡು ಹೋಗಿದ್ದ ಶರಣಪ್ಪ, ಭೈರನಹಟ್ಟಿ ಗ್ರಾಮದ ಬಳಿ ಕೊಡಲಿಯಿಂದ ತಲೆ ಹಾಗೂ ಕುತ್ತಿಗೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಅದೇ ದಿನ ರಾತ್ರಿ ಸೋಮಾಪುರದ ಸಬ್ ಕೆನಾಲ್ ಪೈಪ್ ಬಳಿ ಶವವನ್ನು ತೆಗೆದುಕೊಂಡು ಹೋಗಿ ಮುಚ್ಚಿಹಾಕಿ ಪರಾರಿಯಾಗಿದ್ದನು. ಕೊನೆಗೆ ಕಾಲುವೆಯಲ್ಲಿ ಶವ ಪತ್ತೆಯಾಗಿದ್ದು, ಗದಗ ಎಸ್ಪಿ ಮಿಥುನ್ ಎಚ್.ಎನ್. ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.