ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಗೆಳೆಯರೊಂದಿಗೆ ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಕೊಪ್ಪಳ ತಾಲೂಕಿನ ಬಸಾಪುರ ಸಮೀಪ ನಡೆದಿದೆ. ಬಸಾಪುರ ಗ್ರಾಮದ ಟಿ. ಕಿರಣ್ ಗೌಡ (17) ನಾಪತ್ತೆಯಾದ ದುರ್ದೈವಿ ಯುವಕಿ. ಯುವಕ ನಾಪತ್ತೆಯಾದ ಬೆನ್ನಲ್ಲೇ ಕಾಲುವೆಯಲ್ಲಿ ಬೃಹತ್ ಗಾತ್ರದ ಮೊಸಳೆಗಳು ಕಾಣಿಸಿಕೊಂಡಿರುವುದು ಗ್ರಾಮಸ್ಥರು ಹಾಗೂ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಮಂಗಳವಾರ ಮಧ್ಯಾಹ್ನ ಕಿರಣ್ ಗೌಡ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಈಜಲು ತೆರಳಿದ್ದರು. ಈಜುತ್ತಾ ದಡ ಮುಟ್ಟುವ ಸಂದರ್ಭದಲ್ಲಿ ಇಬ್ಬರು ಸ್ನೇಹಿತರು ಹೇಗೋ ಮಾಡಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ಆದರೆ, ಕಿರಣ್ ಗೌಡ ನೀರಿನ ಪ್ರವಾಹಕ್ಕೆ ಸಿಲುಕಿ ಅಥವಾ ಈಜಲು ಆಗದೆ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.
ಸ್ನೇಹಿತರು ಗಾಬಗೊಂಡು ತಕ್ಷಣವೇ ಗ್ರಾಮಸ್ಥರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.ಬಳಿಕ ಮುನಿರಾಬಾದ್ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಲಾಗಿದ್ದು, ಪಿ.ಎಸ್.ಐ. ಅಮರೇಗೌಡ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ದಿನಗಳಿಂದ ಮುಂದುವರೆದ ಶೋಧ ಕಾರ್ಯ:
ಯುವಕ ನಾಪತ್ತೆಯಾದ ವಿಷಯ ತಿಳಿದ ತಕ್ಷಣವೇ ಸ್ಥಳೀಯ ಈಜುಗಾರರ ನೆರವಿನೊಂದಿಗೆ ಶೋಧ ಕಾರ್ಯ ಆರಂಭಿಸಲಾಗಿದೆ. ನಿನ್ನೆ ಹಾಗೂ ಇಂದು ಹೀಗೆ ಕಳೆದ ಎರಡು ದಿನಗಳಿಂದ ಎಡದಂಡೆ ಕಾಲುವೆ ಸೇರಿದಂತೆ ಸಣಾಪುರ ಕೆರೆ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಲಾಗುತ್ತಿದ್ದರೂ, ಇದುವರೆಗೆ ಕಿರಣ್ ಅವರ ಮೃತದೇಹ ಅಥವಾ ಸುಳಿವು ಪತ್ತೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೊಸಳೆಗಳ ಹಾವಳಿಯಿಂದ ಆತಂಕ:
ಘಟನೆ ನಡೆದ ಸ್ಥಳದ ಬಳಿಯೇ ಬೃಹತ್ ಗಾತ್ರದ ಮೊಸಳೆಗಳು ಪ್ರತ್ಯಕ್ಷಗೊಂಡಿರುವುದು ಶೋಧ ಕಾರ್ಯದಲ್ಲೂ ತೊಡಕುಂಟು ಮಾಡಿದೆ. ಅಲ್ಲದೆ, ಸುತ್ತಮುತ್ತಲಿನ ರೈತರು ಮತ್ತು ಗ್ರಾಮಸ್ಥರು ಕಾಲುವೆ ಬಳಿಗೆ ತೆರಳಲು ಭಯಪಡುವಂತಾಗಿದ್ದು, ಕೂಡಲೇ ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯವನ್ನು ಚುರುಕುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.