ದೇವನಹಳ್ಳಿ: ರಾಜ್ಯ ಸರ್ಕಾರದ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ವಿರುದ್ಧ ದೇವನಹಳ್ಳಿಯ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಕಾರ್ಯವೈಖರಿ ಹಾಗೂ ದಲಿತ ಸಮುದಾಯದ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮುನಿಯಪ್ಪ ಅವರ ವಿರುದ್ಧ ದಾಖಲೆ ಸಮೇತ ಮಾತನಾಡುವುದಾಗಿ ಸವಾಲು ಹಾಕಿದ್ದಾರೆ.
ದೇವನಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಸರ್ಗ ನಾರಾಯಣಸ್ವಾಮಿ, "ಕೆ.ಎಚ್. ಮುನಿಯಪ್ಪ ಅವರ ಮನೆಗೆ ಹೋದರೆ ಕನಿಷ್ಠ ಒಂದು ಲೋಟ ನೀರು ಕೂಡ ಕೊಡುವುದಿಲ್ಲ, ಅಷ್ಟೇ ಅಲ್ಲದೆ ಬಂದವರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ. ಭಿಕ್ಷುಕರು ಕೂಡ ದಾನಿ ಮನೆಗೆ ಹೋಗುತ್ತಾರೆ, ಆದರೆ ಈ ಹಿರಿಯ ನಾಯಕರ ಬಳಿ ಹೋದರೆ ನಿರಾಶೆಯಷ್ಟೇ ಸಿಗುತ್ತದೆ" ಎಂದು ತೀವ್ರವಾಗಿ ಹರಿಹಾಯ್ದಿದ್ದಾರೆ.
ಕೆ.ಎಚ್. ಮುನಿಯಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಹಿರಿಯ ರಾಜಕಾರಣಿಗಳಾಗಿದ್ದಾರೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ದಲಿತ ಸಮುದಾಯದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಯಾರನ್ನು ಭೇಟಿ ಮಾಡಬೇಕು ಎಂಬುದನ್ನೇ ಮರೆತುಹೋಗಿದ್ದಾರೆ. ಅಷ್ಟರ ಮಟ್ಟಿಗೆ ಮುನಿಯಪ್ಪನವರು ಜನರಿಂದ ದೂರ ಉಳಿದು, ಜನರಿಗೆ ಯಾವುದೇ ಸಹಾಯ ಮಾಡಿಲ್ಲ ಎಂದು ದೂರಿದರು.
ದೇವನಹಳ್ಳಿ ಕ್ಷೇತ್ರದಲ್ಲಿ ಮುನಿಯಪ್ಪನವರ ಅಭಿವೃದ್ಧಿ ಎಂದರೆ ಅದು ಕೇವಲ ಇದ್ದ ರೇಷನ್ ಕಾರ್ಡ್‌ಗಳನ್ನು ಕ್ಯಾನ್ಸಲ್ ಮಾಡುವುದಷ್ಟೇ ಆಗಿದೆ ಎಂದು ವ್ಯಂಗ್ಯವಾಡಿದ ಅವರು, ಈ ಎಲ್ಲ ವಿಚಾರಗಳನ್ನೂ ತಾನು ದಾಖಲೆ ಸಮೇತ ಬಿಡುಗಡೆ ಮಾಡುವುದಾಗಿ ತಿಳಿಸಿದರು. ರಾಜ್ಯದಲ್ಲಿ ಮತ್ತೊಮ್ಮೆ ಉನ್ನತ ಸ್ಥಾನಮಾನ ನೀಡಲಾಗಿದೆ, ಆದರೆ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ 30 ರಿಂದ 40 ಸಾವಿರ ಕೋಟಿ ರೂಪಾಯಿಗಳಷ್ಟು ಹಣ ದುರ್ಬಳಕೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇಷ್ಟೊಂದು ಅಕ್ರಮಗಳು ನಡೆಯುತ್ತಿದ್ದರೂ ಅದರ ಬಗ್ಗೆ ಧ್ವನಿ ಎತ್ತುವ ಯೋಗ್ಯತೆ ಇಲ್ಲದ ಅಂತಹ ಸಚಿವ ಸ್ಥಾನ ನಿಜಕ್ಕೂ ಬೇಕಿತ್ತೇ? ಮುನಿಯಪ್ಪನವರು ನಿಜಕ್ಕೂ ನಿಷ್ಠಾವಂತರು ಮತ್ತು ಪ್ರಾಮಾಣಿಕರಾಗಿದ್ದರೆ, ಈ ಸಚಿವ ಸ್ಥಾನ ಬೇಡ ಎಂದು ರಾಜೀನಾಮೆ ನೀಡಿ ಹೊರಬರಬೇಕಿತ್ತು ಎಂದು ನಿಸರ್ಗ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ. ಹಿರಿಯ ನಾಯಕರೊಬ್ಬರ ವಿರುದ್ಧ ಪಕ್ಷದ ಮುಖಂಡರಲ್ಲೇ ಬಹಿರಂಗವಾಗಿ ಕೇಳಿಬಂದಿರುವ ಈ ತೀವ್ರ ಟೀಕೆಯು ದೇವನಹಳ್ಳಿ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.