ಸಿದ್ದರಾಮಯ್ಯ ಪದಚ್ಯುತಿಗೆ ಆ ನೀಲಿಕಣ್ಣಿನ ಮಂತ್ರಿಯೇ ಕಾರಣ, ಆತ ಬಲಿತ ದಲಿತ : ಹೆಚ್ಡಿಕೆ ಆರೋಪ
ಸಿಂಗ್ ಆಪರೇಷನ್ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ, ಕೇಂದ್ರ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದು, ನೀಲಿಕಣ್ಣಿನ ಮಂತ್ರಿ ಅಂತ ಕಿಡಿಕಾರಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ...
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಗೃಹ ಸಚಿವ ಪ್ರಿಯಾಂಕ ಖರ್ಗೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿರುವ ಹೆಚ್.ಡಿ. ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ನೀಲಿಕಣ್ಣಿನ ಮಂತ್ರಿ ಪ್ರಿಯಾಂಕ ಖರ್ಗೆ ಕಾರಣರಾಗಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನಟ್ಟುತ್ತಿರುವ ಪ್ರಿಯಾಂಕ ಖರ್ಗೆ ಗೃಹಮಂತ್ರಿ ಹುದ್ದೆಗೆ ನಾಲಾಯಕ್ ಎಂದು ಟೀಕಿಸಿದ್ದಾರೆ.
ದಲಿತರ ಹೆಸರಿನಲ್ಲಿ ಲೂಟಿ ಮಾಡುತ್ತಿರುವ 'ಬಲಿತ ದಲಿತ' ಎಂದು ಹರಿಹಾಯ್ದಿರುವ ಅವರು, ಧಮ್ ಇದ್ದರೆ ತಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದುಬರಲಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ಕೆಪಿಎಸ್ಸಿ ಮತ್ತು ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ಓಡಾಟ ನಡೆಸಿದ್ದೀರಿ ಎಂಬುದು ತಮಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸ್ಟಿಂಗ್ ಪಿನ್ ಬಂಧಿಸಲು ಯೋಗ್ಯತೆ ಇಲ್ಲ
ತಮ್ಮ ಪಕ್ಷದ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್ ಪಿನ್ ಅನ್ನು ಬಂಧಿಸಲು ಗೃಹ ಇಲಾಖೆಗೆ ಯೋಗ್ಯತೆ ಇಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ಬಂದು ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿವೃತ್ತ ಐಪಿಎಸ್ ಅಧಿಕಾರಿಗೆ ಕೊಲೆ ಬೆದರಿಕೆ ಹಾಕುತ್ತಾನೆ ಮತ್ತು ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡುತ್ತಾನೆ ಎಂದು ಆರೋಪಿಸಿದ್ದಾರೆ.
ಅಂಥವನನ್ನು ಹಿಡಿದು ಸೆದೆಬಡಿಯುವುದನ್ನು ಬಿಟ್ಟು ಪುಂಗಿ ಬಿಡುತ್ತಿದ್ದಾರೆ ಎಂದು ಟೀಕಿಸಿರುವ ಅವರು, ಈ ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ನಲ್ಲಿ ಗೃಹ ಸಚಿವರೂ ಒಬ್ಬರು ಎಂಬುದು ತಮಗೆ ಗ್ಯಾರೆಂಟಿ ಆಗಿದೆ ಎಂದಿದ್ದಾರೆ. ಈ ನಡುವೆ, ಡಿ.ಕೆ. ಶಿವಕುಮಾರ್ ಅವರನ್ನು ಕರ್ನಾಟಕದ "ಸ್ಟಿಂಗ್ ಸಾಮ್ರಾಟ" ಎಂದು ಕರೆದಿರುವ ಹೆಚ್.ಡಿ. ಕುಮಾರಸ್ವಾಮಿ, ರಾಕೇಶ್ ಶೆಟ್ಟಿ ಅವರನ್ನು ಕರ್ನಾಟಕದ "ಸ್ಟಿಂಗ್ ಪಿನ್" ಎಂದು ಬಣ್ಣಿಸಿದ್ದಾರೆ.