ಸೇವಾ ಅವಧಿ ಕಡಿಮೆ ಮಾಡಿ, ಕುಟುಂಬಕ್ಕೊಂದು ಸರ್ಕಾರಿ ನೌಕರಿ : ಹೆಚ್ಡಿಕೆ ಹೊಸ ಪ್ರಸ್ತಾವನೆ
ಕೆಪಿಸಿಸಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಪ್ರಸ್ತುತ ಇರುವ ಸರ್ಕಾರಿ ಉದ್ಯೋಗದ ಸೇವಾ ಅವಧಿಯನ್ನು ಕಡಿಮೆ ಮಾಡಬೇಕು, ಪ್ರತಿ ಒಂದು ಕುಟುಂಬಕ್ಕೆ ಕನಿಷ್ಠ ಒಂದು ಸರ್ಕಾರಿ ನೌಕರಿ ಸಿಗುವಂತೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
ಬೆಂಗಳೂರು : ನಗರದಲ್ಲಿ ನಡೆದ ಕೆಪಿಎಸ್ಸಿ ವಿದ್ಯಾರ್ಥಿಗಳ ಸಂವಾದದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಯುವ ಸಮೂಹದ ಅಳಲನ್ನು ಆಲಿಸಿದರು. ನಿರುದ್ಯೋಗ ನಿವಾರಣೆಗಾಗಿ ಪ್ರತಿ ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ ಎಂಬ ವಿನೂತನ ಚಿಂತನೆಯನ್ನು ತೆರೆದಿಟ್ಟಿರುವ ಅವರು, ದಸರಾ ಬಳಿಕ ಕೆಪಿಎಸ್ಸಿ ಹಗರಣದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ರು.
ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ
ಸಂವಾದದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಸ್ತುತ ಇರುವ ಸರ್ಕಾರಿ ಉದ್ಯೋಗಗಳ ಸೇವಾವಧಿಯ ಬಗ್ಗೆ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಪ್ರತಿ ಕುಟುಂಬಕ್ಕೂ ಕನಿಷ್ಠ ಒಂದು ಸರ್ಕಾರಿ ಉದ್ಯೋಗ ಸಿಗುವಂತಾಗಲು, 35 ವರ್ಷಗಳ ಸೇವಾವಧಿಯನ್ನು 10 ರಿಂದ 15 ಅಥವಾ 20 ವರ್ಷಗಳಿಗೆ ಇಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಸಿಗುವುದರ ಜೊತೆಗೆ, ಉದ್ಯೋಗ ಸಿಗದೇ ಇರುವ ಇತರರಿಗೂ ಅವಕಾಶ ದೊರೆಯುತ್ತದೆ ಎಂದು ತಿಳಿಸಿದರು. ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಮಾತನಾಡಿದ ಅವರು, ಕೇವಲ ಚರ್ಚೆಯಿಂದ ವಿರಮಿಸುವುದು ಬೇಡ. ದಸರಾ ಹಬ್ಬದ ಬಳಿಕ ಯುವಕರ ಪರವಾಗಿ ಬಹುದೊಡ್ಡ ಹೋರಾಟವನ್ನು ಸಂಘಟಿಸೋಣ, ನಾನು ನಿಮ್ಮ ಜೊತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ಕೆಪಿಎಸ್ಸಿ ಭ್ರಷ್ಟಾಚಾರದ ಬಗ್ಗೆ ಯುವಕರ ಅಳಲು
ಸಂವಾದದ ವೇಳೆ ರಾಜ್ಯದ ವಿವಿಧಡೆಯಿಂದ ಆಗಮಿಸಿದ್ದ ನೂರಾರು ಯುವ ಅಭ್ಯರ್ಥಿಗಳು ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ತಿದ್ದುಪಡಿ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವಿಳಂಬದಿಂದ ತಾವು ಅನುಭವಿಸುತ್ತಿರುವ ಮಾನಸಿಕ ಯಾತನೆಯನ್ನು ಅಭ್ಯರ್ಥಿಗಳು ಸಚಿವರ ಮುಂದೆ ತೋಡಿಕೊಂಡರು.
ಉತ್ತರ ಕರ್ನಾಟಕ ಭಾಗದಿಂದ ಬಂದು ಬೆಂಗಳೂರಿನಲ್ಲಿ ಕಷ್ಟಪಟ್ಟು ಓದುತ್ತಿದ್ದರೂ, ಕೆಪಿಎಸ್ಸಿಯ ಗೊಂದಲಮಯ ನಡವಳಿಕೆಯಿಂದ ಯುವಕರ ಭವಿಷ್ಯ ಅಯೋಮಯವಾಗಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಅರ್ಹ ಯುವಕರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಎಚ್.ಡಿ. ಕುಮಾರಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಪ್ರಿಯಾಂಕ್ ಖರ್ಗೆ ಅವರ ನಡವಳಿಕೆಯನ್ನು ನೋಡಿದರೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಗಬೇಕಿದ್ದ ಅವಕಾಶ ತಪ್ಪಿಸಲು ಸಿದ್ದರಾಮಯ್ಯ ಕಾರಣ. ಅದಕ್ಕಾಗಿ ಮತ್ತು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಒಳಸಂಚು ನಡೆದಿರುವಂತೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಪೊಲೀಸರ ವಿಚಾರ ಹಾಗೂ ವೈಯಕ್ತಿಕ ಟೀಕೆಗಳಿಗೂ ತಿರುಗೇಟು ನೀಡಿದ ಅವರು, ತಮ್ಮ ಅಧಿಕಾರಾವಧಿ ಕೊನೆ ಹಂತಕ್ಕೆ ಬಂದಿದೆ ಎಂದು ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದರು.