ಮಾಧ್ಯಮದ ಹೆಸರಲ್ಲಿ ವಸೂಲಿ: ಸಲೂನ್ ಮೇಲೆ ದಾಳಿ ಮಾಡಿ ಸಿಕ್ಕಿಬಿದ್ದ ಐನಾತಿ ಲೇಡಿ ಗ್ಯಾಂಗ್!
ಮಾಧ್ಯಮದವರಂತೆ ನಟಿಸಿ ಸಲೂನ್ಗೆ ನುಗ್ಗಿ, ಅಕ್ರಮ ಚಟುವಟಿಕೆ ನಡೆಯುತ್ತಿದೆಯೆಂದು ಬೆದರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಐನಾತಿ ಲೇಡಿ ಗ್ಯಾಂಗ್ವೊಂದನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದು, ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ ನೋಡಿ..
ಬೆಂಗಳೂರು : ಅದು ಐನಾತಿ ಲೇಡಿ ಗ್ಯಾಂಗ್. ವಸೂಲಿ ಮಾಡೋದೆ ಅವರ ಕೆಲಸ. ಮಾಧ್ಯಮದವರ ಹೆಸರು ಹೇಳಿಕೊಂಡು ಬೆದರಿಕೆ ಹಾಕಿ ಹಣ ದೋಚುತ್ತಿದ್ದರು. ಹೀಗೆ ಸ್ಪಾಗೆ ನುಗ್ಗಿದವರು ದೊಡ್ಡ ಹೈಡ್ರಾಮಾ ಮಾಡಿ ಹಣ ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು.. ಯಾರು ಲಾಕ್ ಯಾರು..? ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
ಯೆಸ್, ಈ ಸಿಸಿಟಿವಿ ದೃಶ್ಯಗಳನ್ನು ನೋಡಿ ಬಿಡಿ. ಯಾವ ಮಟ್ಟಕ್ಕೆ ಹವಾಳಿ ಇಟ್ಟಿದ್ದಾರೆ ಅಂತಾ.ಹೌದು ಅವತ್ತು ರಾತ್ರಿ ಏಕಾಏಕಿ ಸಲೂನ್ಗೆ ನುಗ್ಗಿದ್ದ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ತಾವು ಮಾಧ್ಯಮದವರು ಎಂದು ಹೇಳಿಕೊಂಡು ಐಡಿ ಕಾರ್ಡ್ ಮತ್ತು ಕ್ಯಾಮೆರಾ ತೋರಿಸಿದ್ದರು. ಸಾಮ್ರಾಟ್ ಹಾಗೂ ನ್ಯೂಸ್ 24 ಹೆಸರಿನ ಯೂಟ್ಯೂಬ್ ಚಾನೆಲ್ಗಳ ಐಡಿ ಕಾರ್ಡ್ಗಳನ್ನು ಹೊಂದಿದ್ದ ಆರೋಪಿಗಳು, ಸಲೂನ್ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಗಲಾಟೆ ಮಾಡಿದ್ದರು.
ಸಲೂನ್ನಲ್ಲಿನ ದೃಶ್ಯಗಳನ್ನು ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಬಳಿಕ ಐದು ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು.. ಈ ಪೈಕಿ ಒಂದು ಲಕ್ಷ ರೂಪಾಯಿಯನ್ನು ಸ್ಥಳದಲ್ಲೇ ಪಡೆದಿದ್ದು, ಉಳಿದ ನಾಲ್ಕು ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದರು. ಘಟನೆಯಿಂದ ಆತಂಕಗೊಂಡ ಸಲೂನ್ನವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು..
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರ ಪೊಲೀಸರು, ಲಕ್ಷ್ಮಿ, ಮಮತ, ಪ್ರಿಯಾ, ಸಗಾಯ್ ಮೇರಿ, ಯೋಗಬಾಲು ಹಾಗೂ ಆಸೀಫ್ ಎಂಬ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 80 ಸಾವಿರ ರೂಪಾಯಿ ನಗದು, ಒಂದು ಕಾರು, ಒಂದು ಬೈಕ್, ಏಳು ಮೊಬೈಲ್ ಫೋನ್ಗಳು ಹಾಗೂ ಕೆಲವು ಐಡಿ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಮಾಧ್ಯಮದ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ಆರೋಪದಡಿ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಅದೆನೇ ಹೇಳಿ. ಮಾಧ್ಯಮದ ಹೆಸರು ಹೇಳಿಕೊಂಡು ಸುಲಿಗೆಗೆ ಯತ್ನಿಸುವವರು ಕಂಬಿ ಎಣಿಸುವ ಬಂದಿದೆ. ಮುಂದೆ ಈ ರೀತಿ ಕೃತ್ಯ ಎಸುಗುವವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.