ಕರ್ನಾಟಕದ ಬರ ಪರಿಹಾರಕ್ಕೆ 20,585.73 ಕೋಟಿ ಬಿಡುಗಡೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಡಿಸಿಎಂ ಪತ್ರ
ರಾಜ್ಯದಲ್ಲಿ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸಲು ಶೀಘ್ರವೇ ಅಗತ್ಯ ಪರಿಹಾರವನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯದ ತೀವ್ರ ಬರ ಪರಿಸ್ಥಿತಿ ಎದುರಿಸಲು 20,585.73 ಕೋಟಿ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ, ಡಿಸಿಎಂ ಡಾ. ಜಿ. ಪರಮೇಶ್ವರ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿಯಲ್ಲಿ ತುರ್ತಾಗಿ ಪರಿಹಾರ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
2026ರ ನೈಋತ್ಯ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.35ರಷ್ಟು ಮಳೆ ಕೊರತೆ ಉಂಟಾಗಿದೆ. ರಾಜ್ಯದಲ್ಲಿ ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿತ್ತು; ಆದರೆ ದಾಖಲಾಗಿರುವುದು ಕೇವಲ 551 ಮಿ.ಮೀ. ಮಳೆ ಆಗಿದೆ. 1956ರಿಂದೀಚೆಗೆ ದಾಖಲಾದ ಎರಡನೇ ಅತ್ಯಂತ ಕಡಿಮೆ ಹಾಗೂ 1901ರಿಂದೀಚೆಗೆ ಏಳನೇ ಅತ್ಯಂತ ಕಡಿಮೆ ಮುಂಗಾರು ಮಳೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಡಿಸಿಎಂ ಡಾ. ಜಿ. ಪರಮೇಶ್ವರ, ರಾಜ್ಯ ಸರ್ಕಾರದಿಂದ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. 53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿ ಆಗಿದೆ. ಕೃಷಿ ವೆಚ್ಚದ ಆಧಾರದ ಮೇಲೆ ಲೆಕ್ಕ ಹಾಕಿರುವ ಒಟ್ಟು ಆರ್ಥಿಕ ನಷ್ಟ ₹62,481.88 ಕೋಟಿ ಎಂದು ಮಾಹಿತಿ ನೀಡಿದ್ದಾರೆ.
ಬರ ಪರಿಹಾರಕ್ಕೆ ಯಾವ ಉದ್ದೇಶಕ್ಕೆ ಎಷ್ಟು ನೆರವು?
ಬೆಳೆ ಹಾನಿ ಪರಿಹಾರ ಸಹಾಯಧನಕ್ಕಾಗಿ ₹6,128.70 ಕೋಟಿ ನೆರವು ಕೋರಿರುವ ಡಿಸಿಎಂ ಡಾ. ಜಿ. ಪರಮೇಶ್ವರ್, 61.91 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯ ಪರಿಹಾರಕ್ಕಾಗಿ ₹12,146.99 ಕೋಟಿ ಬೇಡಿಕೆ ಇಟ್ಟಿದ್ದಾರೆ. ಇದೇ ವೇಳೆ, ಕುಡಿಯುವ ನೀರಿನ ಪೂರೈಕೆಗಾಗಿ ₹1,727 ಕೋಟಿ ನೆರವು, ಪಶುಸಂಗೋಪನೆ ಮತ್ತು ಜಾನುವಾರುಗಳ ಸಂರಕ್ಷಣೆಗಾಗಿ ₹583.04 ಕೋಟಿ ನೆರವಿಗೆ ಮನವಿ ಮಾಡಿದ್ದಾರೆ.
ಬರದಿಂದ ಜೀವನೋಪಾಯ ಕಳೆದುಕೊಳ್ಳುತ್ತಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಕ್ಷಣ ಆರ್ಥಿಕ ನೆರವು ಒದಗಿಸುವಂತೆ ಒತ್ತಾಯಿಸಿರುವ ಅವರು, ರೈತರಿಗೆ ದಿನಕ್ಕೆ ₹327ರಂತೆ 60 ದಿನಗಳ ಅವಧಿಗೆ ಜೀವನೋಪಾಯ ಪರಿಹಾರ ಲೆಕ್ಕಾಚಾರ ಮಾಡಿ ನೀಡಬೇಕು. ಜಾನುವಾರುಗಳ ರಕ್ಷಣೆಗಾಗಿ 476 ಗೋಶಾಲೆ ಹಾಗೂ 583 ಮೇವು ಬ್ಯಾಂಕ್‌ಗಳ ಸ್ಥಾಪನೆಗೆ ಕೇಂದ್ರದ ನೆರವಿಗಾಗಿ ಕೋರಿದ್ದಾರೆ.
ಪರಿಹಾರ ಲೆಕ್ಕಾಚಾರಕ್ಕೆ ‘ಫ್ರೂಟ್ಸ್’ ದತ್ತಾಂಶ ಬಳಸಲು ಮನವಿ:
ಬೆಳೆ ಹಾನಿ ಪರಿಹಾರ ನಿರ್ಧರಿಸಲು 2015–16ರ ಹಳೆಯ ಕೃಷಿ ಗಣತಿಯ ಅಂಕಿಅಂಶಗಳನ್ನು ಬಳಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಡಾ. ಪರಮೇಶ್ವರ, ಹಳೆಯ ದತ್ತಾಂಶ ಆಧರಿಸಿ ಪರಿಹಾರ ಲೆಕ್ಕ ಹಾಕುವುದರಿಂದ ರಾಜ್ಯಕ್ಕೆ ಸುಮಾರು ₹1,669.50 ಕೋಟಿ ನೆರವಿನ ಕೊರತೆಯಾಗುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ, ರೈತರನ್ನು ನಿಖರವಾಗಿ ಗುರುತಿಸಲು ಕರ್ನಾಟಕ ಸರ್ಕಾರದ ನವೀಕೃತ ‘ಫ್ರೂಟ್ಸ್’ (FRUITS) ದತ್ತಾಂಶ ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ರೈತರ ಪರಿಹಾರದ ಅಗತ್ಯವನ್ನು ಸಮರ್ಪಕವಾಗಿ ಅಂದಾಜಿಸಲು ನವೀಕೃತ ದತ್ತಾಂಶ ಬಳಸುವಂತೆ ಒತ್ತಾಯಿಸಿರುವ ಅವರು, ಹೆಚ್ಚುತ್ತಿರುವ ಕೃಷಿ ಉತ್ಪಾದನಾ ವೆಚ್ಚ ಹಾಗೂ 16ನೇ ಹಣಕಾಸು ಆಯೋಗದ ಅವಧಿಯನ್ನು ಪರಿಗಣಿಸಿ ಬೆಳೆ ಹಾನಿ ಪರಿಹಾರದ ಮಾನದಂಡಗಳನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
ಶಾಲಾ ಮಕ್ಕಳ ಪೌಷ್ಟಿಕ ಆಹಾರಕ್ಕೂ ಹೆಚ್ಚುವರಿ ನೆರವು:
ಬರಪೀಡಿತ ತಾಲೂಕುಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲಿಯೂ ಪೌಷ್ಟಿಕ ಆಹಾರ ಒದಗಿಸಲು ಪಿಎಂ ಪೋಷಣ್ ಯೋಜನೆಯಡಿ ಹೆಚ್ಚುವರಿಯಾಗಿ ₹427.20 ಕೋಟಿ ನೆರವು ನೀಡುವಂತೆ ಮನವಿ ಮಾಡಿರುವ ಡಾ. ಪರಮೇಶ್ವರ, ದುರ್ಬಲ ವರ್ಗದ ಫಲಾನುಭವಿಗಳ ಪೌಷ್ಟಿಕಾಂಶದ ಅಗತ್ಯ ಪೂರೈಸಲು ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದಡಿ ₹70.96 ಕೋಟಿ ನೆರವಿಗೆ ಮನವಿ ಮಾಡಿದ್ದಾರೆ.
ಕೇಂದ್ರ ಅಧ್ಯಯನ ತಂಡದ ಪರಿಶೀಲನೆ ಬಳಿಕ ಪರಿಹಾರ ಬಿಡುಗಡೆಗೆ ಒತ್ತಾಯ:
ಕೇಂದ್ರ ಅಂತರ ಸಚಿವಾಲಯಗಳ ಅಧ್ಯಯನ ತಂಡ (IMCT) ಅಕ್ಟೋಬರ್ 3ರಿಂದ 6ರವರೆಗೆ ಕರ್ನಾಟಕಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿರುವ ಡಾ. ಜಿ. ಪರಮೇಶ್ವರ, ರಾಜ್ಯ ಸಲ್ಲಿಸಿರುವ ಸಮಗ್ರ ಬರ ಪರಿಹಾರ ಮನವಿ ಪತ್ರದ ಪರಿಶೀಲನೆ ತ್ವರಿತಗೊಳಿಸಲು ಒತ್ತಾಯಿಸಿದ್ದಾರೆ. ಕೇಂದ್ರ ಅಧ್ಯಯನ ತಂಡದ ಶಿಫಾರಸುಗಳನ್ನು ಉನ್ನತ ಮಟ್ಟದ ಸಮಿತಿಗೆ ಶೀಘ್ರವೇ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಗತ್ಯ ಆರ್ಥಿಕ ನೆರವನ್ನು ವಿಳಂಬವಿಲ್ಲದೆ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರೈತರ ಕಲ್ಯಾಣ ರಾಜಕೀಯ ಮತ್ತು ಆಡಳಿತಾತ್ಮಕ ಗಡಿಗಳನ್ನು ಮೀರಿದ ವಿಚಾರ ಎಂದು ಪತ್ರದಲ್ಲಿ ಪ್ರತಿಪಾದನೆ ಮಾಡಿರುವ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎನ್ನುವ ಸಹಕಾರಿ ಒಕ್ಕೂಟ ವ್ಯವಸ್ಥೆಯ ಆಶಯವನ್ನು ಒತ್ತಿ ಹೇಳಿದ್ದು, ಕೃಷಿ ಆಧಾರಿತ ಜೀವನೋಪಾಯವನ್ನು ರಕ್ಷಿಸಲು ಹಾಗೂ ಬರ ಸಂಕಷ್ಟದಿಂದ ರೈತರನ್ನು ಕಾಪಾಡಲು ಸಕಾಲದಲ್ಲಿ ಆರ್ಥಿಕ ನೆರವು ಒದಗಿಸುವುದು ಅತ್ಯಗತ್ಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.