ಸೋತ ಕ್ಷೇತ್ರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಬೇಕು, ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು: ಬಿ.ಕೆ. ಹರಿಪ್ರಸಾದ್ ಕರೆ
ಬೆಂಗಳೂರು ಶಿಕ್ಷಕರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕೇವಲ ಅಭ್ಯರ್ಥಿಯ ಜವಾಬ್ದಾರಿ ಮಾತ್ರವಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಬೆಂಗಳೂರು ಶಿಕ್ಷಕರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸೋತ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದರ ಜೊತೆಗೆ ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಂಕಲ್ಪದೊಂದಿಗೆ ಪ್ರತಿಯೊಬ್ಬ ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣಾ ಕಣಕ್ಕಿಳಿಯಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕರೆ ನೀಡಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕೇವಲ ಅಭ್ಯರ್ಥಿಯ ಜವಾಬ್ದಾರಿ ಅಲ್ಲ:
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಶಿಕ್ಷಕರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಭ್ಯರ್ಥಿಗಳ ಜವಾಬ್ದಾರಿ ಮಾತ್ರವಲ್ಲ. ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಪಕ್ಷದ ಪ್ರತಿಯೊಂದು ಹಂತದ ಮುಖಂಡರಿಗೂ ಸಮಾನ ಜವಾಬ್ದಾರಿ ಮತ್ತು ಹೊಣೆಗಾರಿಕೆ ಇದೆ ಎಂದು ಸ್ಪಷ್ಟಪಡಿಸಿದರು.
ಪ್ರತಿಯೊಬ್ಬ ಮತದಾರರನ್ನೂ ವೈಯಕ್ತಿಕವಾಗಿ ಸಂಪರ್ಕಿಸಿ:
ಚುನಾವಣೆಯನ್ನು ಕೇವಲ ಅಭ್ಯರ್ಥಿಗಳ ನಡುವಿನ ಸ್ಪರ್ಧೆಯಾಗಿ ನೋಡಬಾರದು. ಇದು ಪಕ್ಷದ ಸಂಘಟನಾ ಸಾಮರ್ಥ್ಯ, ಕಾರ್ಯಕರ್ತರ ಬದ್ಧತೆ ಹಾಗೂ ಜನರ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತುಪಡಿಸುವ ಅವಕಾಶವಾಗಿದೆ. ಪ್ರತಿಯೊಬ್ಬ ಮತದಾರರನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಕಾಂಗ್ರೆಸ್ ಪಕ್ಷದ ನಿಲುವುಗಳು ಹಾಗೂ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡಬೇಕು. ಮತದಾರರನ್ನು ತಲುಪುವಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪುಟ್ಟಣ್ಣ ಅವರು ಶಿಕ್ಷಕರ ಧ್ವನಿಯಾಗಿ ವಿಧಾನ ಪರಿಷತ್ತಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಶಿಕ್ಷಕರ ಸಮಸ್ಯೆಗಳು, ಬೇಡಿಕೆಗಳು ಹಾಗೂ ಹಕ್ಕುಗಳ ಪರವಾಗಿ ನಿರಂತರವಾಗಿ ಸ್ಪಂದಿಸಿದ್ದಾರೆ. ಅವರ ಕಾರ್ಯವೈಖರಿಯೇ ನಮ್ಮ ಗೆಲುವಿಗೆ ಪ್ರಮುಖ ಶಕ್ತಿಯಾಗಬೇಕು. ಅದೇ ರೀತಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಹೊಸ ರಾಜಕೀಯ ಇತಿಹಾಸ ಬರೆಯುವ ಗುರಿಯೊಂದಿಗೆ ಸಂಘಟಿತ ಹೋರಾಟ ನಡೆಸಬೇಕು ಎಂದು ಹೇಳಿದರು.
ಈ ಎರಡೂ ಕ್ಷೇತ್ರಗಳ ಚುನಾವಣೆಯನ್ನು ಪಕ್ಷದ ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಬೇಕು. ಎನ್ಡಿಎ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ನ ಎಲ್ಲ ಹಂತದ ನಾಯಕರು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಶ್ರಮಿಸಬೇಕು. ಚುನಾವಣೆಯ ಸಂದರ್ಭದಲ್ಲಿ ಕೇವಲ ಸಭೆಗಳನ್ನು ನಡೆಸುವುದರಿಂದ ಫಲಿತಾಂಶ ಬರುವುದಿಲ್ಲ. ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿ, ಪ್ರತಿಯೊಬ್ಬ ಮತದಾರರನ್ನು ತಲುಪುವ ವ್ಯವಸ್ಥಿತ ಕಾರ್ಯಯೋಜನೆ ರೂಪಿಸಬೇಕು ಎಂದು ನಿರ್ದೇಶಿಸಿದರು.
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಎದುರಾಗಲಿವೆ. ಹೀಗಾಗಿ ಇದು ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಮಹತ್ವದ ಚುನಾವಣಾ ವರ್ಷವಾಗಿದೆ. ಪ್ರತಿಯೊಂದು ಚುನಾವಣೆ ಪಕ್ಷಕ್ಕೆ ಹೊಸ ಅನುಭವ ಮತ್ತು ಪಾಠ ಕಲಿಸುತ್ತದೆ. ಗೆಲುವು ಸಂಘಟನೆಯನ್ನು ಬಲಪಡಿಸಿದರೆ, ಸೋಲು ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುತ್ತದೆ. ಹಿಂದಿನ ಚುನಾವಣೆಗಳ ಅನುಭವದಿಂದ ಪಾಠ ಕಲಿತು ಮುಂದಿನ ಎಲ್ಲ ಚುನಾವಣೆಗಳಿಗೂ ಈಗಿನಿಂದಲೇ ಸಿದ್ಧತೆ ನಡೆಸಬೇಕು ಎಂದು ಸಲಹೆ ನೀಡಿದರು.
ಯಾವುದೇ ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು: ಗೋಪಿನಾಥನ್ ಪಳನಿಯಪ್ಪನ್
ಸಭೆಯಲ್ಲಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಗೋಪಿನಾಥನ್ ಪಳನಿಯಪ್ಪನ್ ಅವರು, ಯಾವುದೇ ಚುನಾವಣೆಯನ್ನು ಸಣ್ಣದು ಅಥವಾ ದೊಡ್ಡದು ಎಂದು ಪರಿಗಣಿಸಬಾರದು. ಪ್ರತಿಯೊಂದು ಚುನಾವಣೆಯೂ ಪಕ್ಷದ ಸಂಘಟನಾ ಶಕ್ತಿಗೆ ಪರೀಕ್ಷೆಯಾಗಿರುತ್ತದೆ. ವಿಶೇಷವಾಗಿ ಬ್ಲಾಕ್ ಮಟ್ಟದ ಸಂಘಟನೆ ಬಲಿಷ್ಠವಾಗಿದ್ದರೆ ಮಾತ್ರ ಚುನಾವಣೆಯಲ್ಲಿ ಪರಿಣಾಮಕಾರಿ ಫಲಿತಾಂಶ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಈ ಚುನಾವಣೆ ವಿಶೇಷ ಜವಾಬ್ದಾರಿಯಾಗಿದೆ. ಪ್ರತಿಯೊಂದು ಬ್ಲಾಕ್ನಲ್ಲಿಯೂ ಕಾರ್ಯಕರ್ತರನ್ನು ಸಕ್ರಿಯಗೊಳಿಸಬೇಕು. ಮತದಾರರೊಂದಿಗೆ ನಿರಂತರ ಸಂಪರ್ಕ ಸಾಧಿಸಬೇಕು. ಚುನಾವಣಾ ಪ್ರಚಾರವನ್ನು ತಳಮಟ್ಟಕ್ಕೆ ಕೊಂಡೊಯ್ಯಬೇಕು. ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ತಿಳಿಸಿದರು.
ಚುನಾವಣಾ ಸಿದ್ಧತೆ ಕೇವಲ ಪ್ರಚಾರಕ್ಕೆ ಸೀಮಿತವಾಗಬಾರದು. ಮತದಾರರ ಸಂಪರ್ಕ, ಕಾರ್ಯಕರ್ತರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಸ್ಥಳೀಯ ನಾಯಕತ್ವದ ಸಮನ್ವಯಕ್ಕೆ ಆದ್ಯತೆ ನೀಡಬೇಕು. ಪಕ್ಷದ ಎಲ್ಲ ಘಟಕಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯಸಭೆ ಸದಸ್ಯರಾದ ಮನ್ಸೂರ್ ಅಲಿಖಾನ್, ಶಾಸಕರಗಳಾದ ಕೊತ್ತೂರು ಮಂಜುನಾಥ್, ಕುಣಿಗಲ್ ರಂಗನಾಥ್, ಸಮರ್ಥ್ ಶಾಮನೂರು, ವಿಧಾನ ಪರಿಷತ್ ಸದಸ್ಯರಾದ ಸೀತಾರಾಮ್, ರಾಮೋಜಿ ಗೌಡ, ಶ್ರೀನಿವಾಸ್, ಪಕ್ಷದ ಹಿರಿಯ ನಾಯಕರು, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಕಾಂಗ್ರೆಸ್ ಅಧ್ಯಕ್ಷರು ಸೇರಿ ಹಲವರು ಹಾಜರಿದ್ದರು.