ಎಸ್‌ಐಆರ್ ಮುಂದಿಟ್ಟುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಶಾಸಕ ಸುನೀಲ್ ಕುಮಾರ್ ಗಂಭೀರ ಆರೋಪ.
ಚುನಾವಣಾ ಆಯೋಗವು ಎಸ್‌ಐಆರ್ ಕುರಿತು ಹಲವು ಬಾರಿ ಸ್ಪಷ್ಟನೆ ನೀಡಿದ್ದರೂ, ಕಾಂಗ್ರೆಸ್ ನಾಯಕರು ಮಾತ್ರ ದೇಶಾದ್ಯಂತ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು, ಎಸ್‌ಐಆರ್ (SIR) ಪ್ರಕ್ರಿಯೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ದೇಶದಲ್ಲಿ ವ್ಯವಸ್ಥಿತವಾಗಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ ಎಂದು ತೀವ್ರವಾಗಿ ಕಿಡಿಕಾರಿದರು.
ಚುನಾವಣಾ ಆಯೋಗವು ಎಸ್‌ಐಆರ್ ಕುರಿತು ಹಲವು ಬಾರಿ ಸ್ಪಷ್ಟನೆ ನೀಡಿದ್ದರೂ, ಕಾಂಗ್ರೆಸ್ ನಾಯಕರು ಮಾತ್ರ ದೇಶಾದ್ಯಂತ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯಾನಂತರ ಇದುವರೆಗೆ ಒಟ್ಟು 12 ಬಾರಿ ಎಸ್‌ಐಆರ್ ಪ್ರಕ್ರಿಯೆ ಜರುಗಿದ್ದು, ಇದರಲ್ಲಿ 10 ಬಾರಿ ಕಾಂಗ್ರೆಸ್ ಸರ್ಕಾರಗಳೇ ಅಧಿಕಾರದಲ್ಲಿದ್ದವು. ರಾಜ್ಯ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಕುರಿತು ಸಮಗ್ರ ಮಾಹಿತಿ ನೀಡಿದಾಗ ಯಾವುದೇ ಚಕಾರ ಎತ್ತದ ಕಾಂಗ್ರೆಸ್, ಈಗ ರಾಜಕೀಯ ಲಾಭಕ್ಕಾಗಿ ವಿವಾದ ಸೃಷ್ಟಿಸುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.ಮೂರು ಬಾರಿ ಸತತವಾಗಿ ಜನರಿಂದ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಅರಾಜಕತೆ ಸೃಷ್ಟಿಸಲು ಹೊರಟಿರುವ ಕಾಂಗ್ರೆಸ್, ಇಂದು ದೇಶದ ಜನರ ದೃಷ್ಟಿಯಲ್ಲಿ ಸಂಪೂರ್ಣ 'ರಿಜೆಕ್ಟ್ ಆದ ಪಾರ್ಟಿ'ಯಾಗಿದೆ ಎಂದರು.
ತಾನು ಗೆದ್ದರೆ ಅದು ಪ್ರಜಾಪ್ರಭುತ್ವದ ಗೆಲುವು, ಸೋತರೆ ಇವಿಎಂ ದೋಷ ಅಥವಾ ವೋಟ್ ಚೋರಿ ಎನ್ನುವುದು ಕಾಂಗ್ರೆಸ್‌ನ ನಿಲುವಾಗಿದ್ದು, ಇದು ಆ ಪಕ್ಷದ ಮಾನಸಿಕ ಅಸ್ವಸ್ಥತೆಯನ್ನು ತೋರುತ್ತದೆ ಎಂದು ವ್ಯಂಗ್ಯವಾಡಿದರು. ಇನ್ನು ಎರಡು ಚುನಾವಣೆಗಳಲ್ಲಿ ಸೋತರೆ ಮುಂದೊಂದು ದಿನ ಮತದಾರರೇ ಸರಿ ಇಲ್ಲ ಎಂದು ಹೇಳಿದರೂ ಆಶ್ಚರ್ಯವಿಲ್ಲ ಎಂದರು. ಕಾಂಗ್ರೆಸ್‌ನ ಈ ದುರಾಡಳಿತ ಮತ್ತು ಅಪಪ್ರಚಾರದ ಮುವಾಡವನ್ನು ಕಳಚಲು ಮತ್ತು ಜನಜಾಗೃತಿ ಮೂಡಿಸಲು ಬಿಜೆಪಿಯಿಂದ ನವೆಂಬರ್ 1 ರಿಂದ 30ರವರೆಗೆ ಒಂದು ತಿಂಗಳ ಕಾಲ 'ಅರಾಜಕತೆ ಹಠಾವೋ ಅಭಿಯಾನ' ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪಾದಯಾತ್ರೆಗಳು, ವಿಚಾರವಂತರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಹೆಸರಿನಲ್ಲಿ ಕಳೆದ 7-8 ತಿಂಗಳಿಂದ ಯೋಜನೆಗಳನ್ನು ಸ್ಥಗಿತಗೊಳಿಸಿರುವ ಸರ್ಕಾರಕ್ಕೆ, ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದನ್ನು ಪ್ರಶ್ನಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಶಾಸಕ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.