SOCIAL MEDIA

Newsletter

PARTNER SITES
Select Language Select State

ಕಾರು ಮಕ್ಕಳ ಆಟಿಕೆಯಲ್ಲ, ರಸ್ತೆ ಆಟದ ಮೈದಾನವಲ್ಲ! ಕರ್ನಾಟಕ ಹೈಕೋರ್ಟ್

ಮೈಸೂರಿನಲ್ಲಿ ಅಪ್ರಾಪ್ತ ಬಾಲಕ ಕಾರು ಚಲಾಯಿಸಿ ಮೂವರ ಸಾವಿಗೆ ಕಾರಣವಾದ ಪ್ರಕರಣದಲ್ಲಿ, ತಂದೆಯ ವಿರುದ್ಧದ ಆರೋಪಗಳ ವಿಚಾರಣೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. “ಕಾರು ಮಕ್ಕಳ ಆಟಿಕೆಯಲ್ಲ, ರಸ್ತೆ ಆಟದ ಮೈದಾನವಲ್ಲ” ಎಂದು ಎಚ್ಚರಿಸಿರುವ ನ್ಯಾಯಾಲಯ, ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

Written By Puttaraj K Alur
Published: Oct 20, 2026, 03:33 PM IST | Updated: Oct 20, 2026, 03:41 PM IST
Image Credit: Karnataka High Court
Join

Karnataka High Court: ಮಕ್ಕಳ ಕೈಗೆ ವಾಹನಗಳ ಕೀಲಿ ನೀಡುವ ಪೋಷಕರಿಗೆ ಕರ್ನಾಟಕ ಹೈಕೋರ್ಟ್ ಕಠಿಣ ಸಂದೇಶ ರವಾನಿಸಿದೆ. “ಮೋಟಾರು ವಾಹನಗಳು ಮಕ್ಕಳ ಆಟಿಕೆಯಲ್ಲ, ಸಾರ್ವಜನಿಕ ರಸ್ತೆಗಳು ಆಟದ ಮೈದಾನಗಳಲ್ಲ” ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಲಯ, ಅಪ್ರಾಪ್ತ ಮಗ ಕಾರು ಚಲಾಯಿಸಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯ ಅರ್ಜಿಯನ್ನ ವಜಾಗೊಳಿಸಿದೆ. ತಂದೆಯ ವಿರುದ್ಧದ ಉದ್ದೇಶಪೂರ್ವಕವಲ್ಲದ ನರಹ*ತ್ಯೆ ಆರೋಪದ ವಿಚಾರಣೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡುವ ಪೋಷಕರು ಅದರ ಪರಿಣಾಮಗಳ ಬಗ್ಗೆಯೂ ಜವಾಬ್ದಾರಿ ಹೊರಬೇಕಾಗುತ್ತದೆ ಎಂಬ ಸಂದೇಶವನ್ನ ಈ ಆದೇಶ ನೀಡಿದೆ. ಸಂಕಷ್ಟ ಎದುರಾದಾಗ ಮಗ ಅಪ್ರಾಪ್ತ ಎಂಬ ಕಾರಣ ಮುಂದಿಟ್ಟು ಪೋಷಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲವೆಂಬ ಅಭಿಪ್ರಾಯವನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.

ಮೂವರ ಜೀವ ಬಲಿಪಡೆದ ಭೀಕರ ಅಪಘಾತ

ಈ ಪ್ರಕರಣ 2020ರ ಡಿಸೆಂಬರ್‌ನಲ್ಲಿ ಹಳೆಯ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತಕ್ಕೆ ಸಂಬಂಧಿಸಿದೆ. ಆಗ 14 ವರ್ಷದ ಬಾಲಕನೊಬ್ಬ ವೋಕ್ಸ್‌ವ್ಯಾಗನ್ ವೆಂಟೋ ಕಾರು ಚಲಾಯಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ದಂಪತಿ ಹಾಗೂ ಅವರ ಐದು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಬಾಲಕನ ತಂದೆ ನದೀಮ್-ಉರ್-ರೆಹಮಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನ್ನ ಮಗ ತನಗೆ ತಿಳಿಯದಂತೆ ಕಾರು ತೆಗೆದುಕೊಂಡು ಹೋಗಿದ್ದಾನೆಂದು ಅವರು ವಾದಿಸಿದ್ದರು. ತಮ್ಮ ವಿರುದ್ಧ ದಾಖಲಿಸಲಾಗಿರುವ ಉದ್ದೇಶಪೂರ್ವಕವಲ್ಲದ ನರಹ*ತ್ಯೆ ಆರೋಪಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿಯನ್ನ ರದ್ದುಪಡಿಸಬೇಕೆಂದು ಕೋರಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಂದೆಯ ವಾದವನ್ನ ತಳ್ಳಿಹಾಕಿದ ನ್ಯಾಯಾಲಯ

ಅರ್ಜಿದಾರರ ಪರ ವಕೀಲರು, ಮಗನಿಗೆ ತಿಳಿಯದಂತೆ ಕಾರನ್ನ ತೆಗೆದುಕೊಂಡು ಹೋಗಿದ್ದಾನೆ ಎಂಬ ವಾದವನ್ನ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ತಂದೆಯ ವಿರುದ್ಧದ ಆರೋಪಗಳನ್ನ ಮುಂದುವರಿಸುವುದು ಸೂಕ್ತವಲ್ಲ ಎಂದು ವಾದಿಸಿದ್ದರು. ಆದರೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ವಾದವನ್ನ ಒಪ್ಪಲಿಲ್ಲ. ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳ ಪ್ರಕಾರ, ತಂದೆಯೇ ಮಗನಿಗೆ ಕಾರಿನ ಕೀಲಿ ನೀಡಿದ್ದರು ಎಂಬ ಆರೋಪವಿದೆ. ಅಪ್ರಾಪ್ತರಿಗೆ ಸ್ವಯಂಪ್ರೇರಿತವಾಗಿ ವಾಹನದ ಕೀಲಿ ನೀಡಿದ ಸಂದರ್ಭದಲ್ಲಿ ಸಂಭವಿಸುವ ದುರಂತಗಳಿಗೆ ಸಂಬಂಧಿಸಿದಂತೆ ಪೋಷಕರ ಜವಾಬ್ದಾರಿಯನ್ನ ನಿರ್ಲಕ್ಷಿಸಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಇದು ಕೇವಲ ನಿರ್ಲಕ್ಷ್ಯದ ಪ್ರಕರಣವೇ ಅಥವಾ ಉದ್ದೇಶಪೂರ್ವಕವಲ್ಲದ ನರಹ*ತ್ಯೆಯ ಆರೋಪಕ್ಕೆ ಸಾಕಷ್ಟು ಆಧಾರಗಳಿವೆಯೇ ಎಂಬುದನ್ನ ವಿಚಾರಣೆಯ ಸಂದರ್ಭದಲ್ಲಿ ನಿರ್ಧರಿಸಬೇಕಾಗಿದೆ. ಆದ್ದರಿಂದ ಈ ಹಂತದಲ್ಲಿ ಆರೋಪಗಳನ್ನ ರದ್ದುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಅಪ್ರಾಪ್ತರಿಂದ 751 ಅಪಘಾತಗಳು!

ಕರ್ನಾಟಕದಲ್ಲಿ ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಸಂಭವಿಸುತ್ತಿರುವ ಅಪಘಾತಗಳ ಕುರಿತು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. 2025-26ರ ಅವಧಿಯಲ್ಲಿ ರಾಜ್ಯದಲ್ಲಿ ಅಪ್ರಾಪ್ತರಿಂದ 751 ಅಪಘಾತಗಳು ಸಂಭವಿಸಿವೆ ಎಂಬ ಅಂಕಿ-ಅಂಶವನ್ನ ಉಲ್ಲೇಖಿಸಲಾಗಿದೆ. ಈ ಅಂಕಿ-ಅಂಶವು ಅಪ್ರಾಪ್ತರಿಗೆ ವಾಹನ ನೀಡುವ ವಿಷಯದಲ್ಲಿ ಪೋಷಕರು ಎಷ್ಟು ಎಚ್ಚರಿಕೆಯಿಂದಿರಬೇಕು ಎಂಬುದನ್ನ ತೋರಿಸುತ್ತದೆ. ವಾಹನ ಚಲಾಯಿಸಲು ಅಗತ್ಯವಾದ ಕಾನೂನುಬದ್ಧ ಅರ್ಹತೆ ಇಲ್ಲದ ಮಕ್ಕಳ ಕೈಗೆ ಕಾರು ಅಥವಾ ಬೈಕ್‌ಗಳ ಕೀಲಿ ನೀಡುವುದು ಅವರ ಜೀವಕ್ಕೆ ಮಾತ್ರವಲ್ಲ, ರಸ್ತೆಯಲ್ಲಿ ಸಂಚರಿಸುವ ಇತರರ ಜೀವಕ್ಕೂ ಅಪಾಯವನ್ನುಂಟುಮಾಡಬಹುದು.

ವಾಹನ ಚಲಾಯಿಸುವುದು ಆಟವಲ್ಲ. ರಸ್ತೆಯಲ್ಲಿ ಚಾಲಕನ ಒಂದು ತಪ್ಪು ನಿರ್ಧಾರ ಹಲವು ಕುಟುಂಬಗಳ ಬದುಕನ್ನೇ ಬದಲಾಯಿಸಬಹುದು. ಹೀಗಾಗಿ ಮಕ್ಕಳಿಗೆ ವಾಹನದ ಕೀಲಿ ನೀಡುವ ಮೊದಲು ಪೋಷಕರು ಕಾನೂನು, ಸುರಕ್ಷತೆ ಮತ್ತು ತಮ್ಮ ಜವಾಬ್ದಾರಿಯನ್ನ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಪೋಷಕರಿಗೆ ಹೈಕೋರ್ಟ್‌ನಿಂದ ಎಚ್ಚರಿಕೆಯ ಸಂದೇಶ

ಹೈಕೋರ್ಟ್‌ನ ಈ ಆದೇಶವು ಪೋಷಕರಿಗೆ ಸ್ಪಷ್ಟ ಎಚ್ಚರಿಕೆಯಾಗಿದೆ. ಮಕ್ಕಳ ಮೇಲಿನ ಪ್ರೀತಿ ಅಥವಾ ಅವರ ಹಠಕ್ಕೆ ಮಣಿದು ವಾಹನ ಚಲಾಯಿಸಲು ಅವಕಾಶ ನೀಡುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಅಪ್ರಾಪ್ತರಿಗೆ ವಾಹನದ ಕೀಲಿ ನೀಡುವ ಮೊದಲು ಕಾನೂನುಬದ್ಧ ವಯಸ್ಸು, ಚಾಲನಾ ಪರವಾನಗಿ ಮತ್ತು ರಸ್ತೆ ಸುರಕ್ಷತೆಯ ನಿಯಮಗಳನ್ನ ಪಾಲಿಸುವುದು ಅತ್ಯಗತ್ಯ. ಒಟ್ನಲ್ಲಿ ಕಾರು ಮಕ್ಕಳ ಆಟಿಕೆಯಲ್ಲ, ಸಾರ್ವಜನಿಕ ರಸ್ತೆಗಳು ಆಟದ ಮೈದಾನವಲ್ಲ ಎಂಬ ಹೈಕೋರ್ಟ್‌ನ ಸಂದೇಶವು ರಸ್ತೆ ಸುರಕ್ಷತೆ ಮತ್ತು ಪೋಷಕರ ಜವಾಬ್ದಾರಿಯ ಮಹತ್ವವನ್ನ ಮತ್ತೊಮ್ಮೆ ನೆನಪಿಸಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES