ಬೆಂಗಳೂರು : ಪಾದಯಾತ್ರೆ ಬಳಿಕ ಬಿಜೆಪಿಯಲ್ಲಿ ಹೊಸ ಚೈತನ್ಯ ಮೂಡಿದ್ದು, ಸಂಘಟನೆಗೆ ಚುರುಕು ಮುಟ್ಟಿಸಲು ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ನೂತನ ಉಸ್ತುವಾರಿ ಕಾಸಂ ವೆಂಕಟೇಶ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮುಂಬರುವ ಚುನಾವಣೆಗಳ ರಣತಂತ್ರದ ಬಗ್ಗೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಪಾದಯಾತ್ರೆ ಬಳಿಕ ಬಿಜೆಪಿ ಸಂಘಟನೆಗೆ ವೇಗ ಸಿಕ್ಕಿದ್ದು, ಇದೇ ಜೋರನ್ನು ಚುನಾವಣೆವರೆಗೂ ಮುಂದುವರಿಸಲು ಹೈಕಮಾಂಡ್ ಸೂಚಿಸಿದೆ. ನೂತನ ಉಸ್ತುವಾರಿ ಕಾಸಂ ವೆಂಕಟೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಪ್ರಮುಖರು ಭಾಗಿಯಾಗಿದ್ದರು.
ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ಅಹಿಂದ ಮತಗಳನ್ನು ತೆಗೆದುಹಾಕುವ ಯತ್ನ ನಡೆಯುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದು, ಇದಕ್ಕೆ ತಿರುಗೇಟು ನೀಡಲು ಜನಜಾಗೃತಿ ಮೂಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಚುನಾವಣಾ ಆಯೋಗದ ನಿಯಮಾನುಸಾರ ಫಾರ್ಮ್-7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿ, ಸರ್ಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದರ ವಿರುದ್ಧ ಎಸ್ಪಿ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ವಿಜಯೇಂದ್ರ ಎಚ್ಚರಿಸಿದ್ದಾರೆ. ಅಲ್ಲದೆ, ಪಿಡಿಒ ಹಾಗೂ ಮುನ್ಸಿಪಲ್ ಕಮಿಷನರ್‌ಗಳಿಗೆ ಪಿಆರ್‌ಸಿ ನೀಡುವ ಅಧಿಕಾರ ನೀಡಿರುವುದನ್ನು ಸಭೆ ಖಂಡಿಸಿದೆ.
ಹಾಲಿನ ದರ ಏರಿಕೆ ಪ್ರಸ್ತಾವನೆ ಬಗ್ಗೆಯೂ ಚರ್ಚೆ ನಡೆದಿದ್ದು, ದರ ಹೆಚ್ಚಾದರೆ ಆ ಪೂರ್ಣ ಹಣ ನೇರವಾಗಿ ರೈತರಿಗೆ ತಲುಪಬೇಕು, ಕೆಎಂಎಫ್‌ಗೆ ಪಾಲು ಹೋದರೆ ದೊಡ್ಡ ಹೋರಾಟ ರೂಪಿಸುವುದಾಗಿ ಎಚ್ಚರಿಸಲಾಗಿದೆ. ಇದರೊಂದಿಗೆ, ಹಿರೂರು ಉಪಚುನಾವಣೆಯನ್ನು ಜೆಡಿಎಸ್ ಜತೆಗೆ ಮೈತ್ರಿ ಸಮನ್ವಯದೊಂದಿಗೆ ಎದುರಿಸಲು ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಿಗೆ ಈಗಿನಿಂದಲೇ ಪ್ರತಿ ಜಿಲ್ಲೆಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ರಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.