ಬೈಕ್ ಟ್ಯಾಕ್ಸಿ vs ಆಟೋ: ಯಾವುದು ಅಗ್ಗ ಗೊತ್ತಾ? ಇಲ್ಲಿದೆ ಅಸಲಿ ಲೆಕ್ಕಾಚಾರ
ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಬೆನ್ನಲ್ಲೇ ಬೈಕ್ ಟ್ಯಾಕ್ಸಿ ಸೇವೆ ನಿರಾಳವಾಗಿದ್ದು, ಬೆಂಗಳೂರಿನಂತಹ ಟ್ರಾಫಿಕ್ ನಗರಗಳಲ್ಲಿ ಸಮಯ ಉಳಿಸಲು ಇದು ಬೆಸ್ಟ್ ಆಯ್ಕೆಯಾಗಿದೆ. ಹಾಗಾದ್ರೆ ಆಟೋಗಿಂತ ಬೈಕ್ ಟ್ಯಾಕ್ಸಿ ಕಡಿಮೆ ಹಣನಾ ಇವೆರಡರಲ್ಲಿ ಯಾವುದು ಬಜೆಟ್ ಫ್ರೆಂಡ್ಲಿ ಇಲ್ಲಿದೆ ಮಾಹಿತಿ
ಬೆಂಗಳೂರು: ನಗರ ಪ್ರದೇಶಗಳಲ್ಲಿ ದಿನನಿತ್ಯ ಆಫೀಸ್, ಕಾಲೇಜು ಅಥವಾ ಮೆಟ್ರೋ ಸ್ಟೇಷನ್‌ಗೆ ಹೋಗಿ ಬರೋರಿಗೆ ಈಗ ಒಂದೇ ಪ್ರಶ್ನೆ. ಬೈಕ್ ಟ್ಯಾಕ್ಸಿ ಬೆಸ್ಟಾ ಅಥವಾ ಆಟೋ ಬೆಸ್ಟಾ? ಇತ್ತೀಚೆಗಷ್ಟೇ (ನವೆಂಬರ್ 20ರಂದು) ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಓಲಾ, ಉಬರ್ ಮತ್ತು ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ವಿಚಾರಣೆ ವೇಳೆ ಸ್ವತಃ ನ್ಯಾಯಾಲಯವೇ ಬೈಕ್ ಟ್ಯಾಕ್ಸಿ ದರ ಆಟೋಗಿಂತ ಐದು ಪಟ್ಟು ಅಗ್ಗವಾಗಿದ್ದು, ಲಕ್ಷಾಂತರ ಸಾಮಾನ್ಯ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದೆ.
ಹಾಗಾದರೆ ನಿಜವಾಗಿಯೂ ಬೈಕ್ ಟ್ಯಾಕ್ಸಿ ಮತ್ತು ಆಟೋ ದರಗಳ ನಡುವೆ ಎಷ್ಟು ವ್ಯತ್ಯಾಸವಿದೆ? ದಿನನಿತ್ಯ ಓಡಾಡುವ ಒಬ್ಬ ಸಾಮಾನ್ಯ ಪ್ರಯಾಣಿಕನ ತಿಂಗಳ ಬಜೆಟ್ ಮೇಲೆ ಇದು ಹೇಗೆ ಪರಿಣಾಮ ಬೀರುತ್ತೆ? ಇಲ್ಲಿದೆ ನೋಡಿ ಪಕ್ಕಾ ಲೆಕ್ಕಾಚಾರ.
ಕಿಲೋಮೀಟರ್ ಲೆಕ್ಕಾಚಾರ
ಸರ್ಕಾರ ನಿಗದಿಪಡಿಸಿರುವ ಅಧಿಕೃತ ಮೀಟರ್ ದರದ ಪ್ರಕಾರ, ಬೆಂಗಳೂರಿನಲ್ಲಿ ಆಟೋ ಹತ್ತಿದ್ರೆ ಮೊದಲ 2 ಕಿ.ಮೀ.ಗೆ ಕನಿಷ್ಠ ₹36 ಮತ್ತು ನಂತರದ ಪ್ರತಿ ಕಿ.ಮೀ.ಗೆ ₹18 ಕೊಡಬೇಕು. ಆದರೆ ವಾಸ್ತವದಲ್ಲಿ ಆ್ಯಪ್‌ಗಳ ಮೂಲಕ ಬುಕ್ ಮಾಡಿದ್ರೆ ಅಥವಾ ಪೀಕ್ ಅವರ್‌ಗಳಲ್ಲಿ ಮಿನಿಮಮ್ ದರವೇ ₹50 ರಿಂದ ₹70 ದಾಟುತ್ತೆ. ಕೆಲವೊಮ್ಮೆ ಚಾಲಕರು ಆ್ಯಪ್ ದರಕ್ಕಿಂತ ₹20-₹30 ಹೆಚ್ಚುವರಿ ಕೇಳುವುದು ಸಾಮಾನ್ಯವಾಗಿದೆ.
ಇದಕ್ಕೆ ವಿರುದ್ಧವಾಗಿ, ಬೈಕ್ ಟ್ಯಾಕ್ಸಿಗಳಲ್ಲಿ ಕನಿಷ್ಠ ದರ ಕೇವಲ ₹15 ರಿಂದ ₹25 ರೊಳಗೆ ಶುರುವಾಗುತ್ತೆ.
3 ಕಿ.ಮೀ ಪ್ರಯಾಣಕ್ಕೆ (ಉದಾ: ಮನೆಯಿಂದ ಮೆಟ್ರೋ ಸ್ಟೇಷನ್): ಆಟೋದಲ್ಲಿ ₹60 ರಿಂದ ₹80 ಖರ್ಚಾದ್ರೆ, ಬೈಕ್ ಟ್ಯಾಕ್ಸಿಯಲ್ಲಿ ಕೇವಲ ₹25 ರಿಂದ ₹35 ರೊಳಗೆ ಮುಗಿಯುತ್ತೆ. 6 ಕಿ.ಮೀ ಪ್ರಯಾಣಕ್ಕೆ: ಆಟೋದಲ್ಲಿ ₹110 ರಿಂದ ₹140 ತಗುಲಿದರೆ, ಬೈಕ್ ಟ್ಯಾಕ್ಸಿಯಲ್ಲಿ ₹50 ರಿಂದ ₹65 ಮಾತ್ರ ಆಗುತ್ತೆ.
ತಿಂಗಳ ಬಜೆಟ್ ಲೆಕ್ಕ: ತಿಂಗಳಿಗೆ ₹3,000 ಉಳಿತಾಯ!
ಒಬ್ಬ ಉದ್ಯೋಗಿ ಅಥವಾ ವಿದ್ಯಾರ್ಥಿ ದಿನಕ್ಕೆ ಹೋಗಿ ಬರಲು ಒಟ್ಟು 10 ಕಿ.ಮೀ. ಪ್ರಯಾಣಿಸುತ್ತಾರೆ ಅಂದುಕೊಳ್ಳೋಣ:
ಆಟೋದಲ್ಲಿ ಓಡಾಡಿದ್ರೆ ದಿನಕ್ಕೆ ಕನಿಷ್ಠ ₹180 ರಿಂದ ₹200 ಖರ್ಚಾಗುತ್ತೆ. ತಿಂಗಳಿಗೆ 22 ದಿನ ಅಂದ್ರೆ ಬರೋಬ್ಬರಿ ₹4,000 ದಿಂದ ₹4,400 ಬರೀ ಪ್ರಯಾಣಕ್ಕೇ ಹೋಗುತ್ತೆ.
ಬೈಕ್ ಟ್ಯಾಕ್ಸಿಯಲ್ಲಿ ಓಡಾಡಿದ್ರೆ ದಿನಕ್ಕೆ ₹80 ರಿಂದ ₹100 ರೊಳಗೆ ಮುಗಿಯುತ್ತೆ. ತಿಂಗಳಿಗೆ ಹೆಚ್ಚೆಂದರೆ ₹1,800 ರಿಂದ ₹2,200 ಖರ್ಚಾಗುತ್ತೆ. ಅಂದರೆ ಒಬ್ಬ ಸಾಮಾನ್ಯ ಪ್ರಯಾಣಿಕನಿಗೆ ತಿಂಗಳಿಗೆ ಕನಿಷ್ಠ ₹2,000 ದಿಂದ ₹3,000 ಉಳಿತಾಯವಾಗುತ್ತೆ! ಜೊತೆಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕದೆ ಸಮಯವೂ ಉಳಿಯುತ್ತೆ.
ಮುಂದೆ ಬೈಕ್ ಟ್ಯಾಕ್ಸಿ ದರ ಏರಿಕೆಯಾಗುತ್ತಾ?
ಸುಪ್ರೀಂ ಕೋರ್ಟ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದ ಬೆನ್ನಲ್ಲೇ, ರಾಜ್ಯ ಸಾರಿಗೆ ಇಲಾಖೆ ಈಗ ಹೊಸ ನಿಯಮಗಳನ್ನು ತರಲು ಸಿದ್ಧತೆ ನಡೆಸಿದೆ. ವೈಟ್ ಬೋರ್ಡ್ (ಖಾಸಗಿ) ಬೈಕ್‌ಗಳ ಬದಲು ಕಮರ್ಷಿಯಲ್ ಹಳದಿ ಬೋರ್ಡ್, ಪ್ರಯಾಣಿಕರ ವಿಮೆ ಮತ್ತು ಜಿಪಿಎಸ್ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಈ ನಿಯಮಗಳು ಜಾರಿಯಾದ್ರೆ, ಬೈಕ್ ಸವಾರರಿಗೆ ಪರವಾನಿಗೆ ಮತ್ತು ವಿಮೆ ಖರ್ಚು ಹೆಚ್ಚಾಗುವುದರಿಂದ ಬೈಕ್ ಟ್ಯಾಕ್ಸಿ ದರವೂ ಸ್ವಲ್ಪ ಮಟ್ಟಿಗೆ ಏರಿಕೆಯಾಗುವ ಸಾಧ್ಯತೆಯಿದೆ.
ನೀವು ಒಬ್ಬರೇ ಆಫೀಸ್ ಅಥವಾ ಕಾಲೇಜಿಗೆ ಹೋಗುತ್ತಿದ್ದರೆ, ಲಗೇಜ್ ಇಲ್ಲದಿದ್ದರೆ ಮತ್ತು ಹಣ ಹಾಗೂ ಸಮಯ ಉಳಿಸಬೇಕೆಂದರೆ ಬೈಕ್ ಟ್ಯಾಕ್ಸಿ ಅತ್ಯುತ್ತಮ ಆಯ್ಕೆ. ಆದರೆ ನಿಮ್ಮ ಜೊತೆ ಇಬ್ಬರು-ಮೂವರು ಇದ್ದರೆ, ಮಳೆ ಬರುತ್ತಿದ್ದರೆ, ವಯಸ್ಸಾದವರು ಅಥವಾ ಲಗೇಜ್ ಇದ್ದರೆ ಆಟೋ ಸುರಕ್ಷಿತ ಮತ್ತು ಆರಾಮದಾಯಕ.