ಪೋಷಕರೇ ಜಾಗ್ರತೆ..! ಬೆಸ್ಕಾಂ ಹಾಗೂ ಮನೆ ಮಾಲೀಕರ ನಿರ್ಲಕ್ಷ್ಯಕ್ಕೆ ಬಾಲಕಿ ಕೈ ಕಟ್.. ಆಗಿದ್ದೇನು ಗೊತ್ತೆ?
ಆಟವಾಡುವ ವಯಸ್ಸಿನಲ್ಲಿ ಕಂದಮ್ಮಗಳ ಬಾಳಿಗೆ ಬೆಸ್ಕಾಂ ಮತ್ತು ಮನೆ ಮಾಲೀಕರ ನಿರ್ಲಕ್ಷ್ಯ ಕತ್ತಲು ತುಂಬಿದೆ. ವಿದ್ಯುತ್ ಶಾಕ್ ಹೊಡೆದು 13 ವರ್ಷದ ಬಾಲಕಿಯ ಕೈ ಕಟ್ ಆಗಿದ್ದು, ಮತ್ತೊಂದು ಪುಟ್ಟ ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಾನುಕುಂಟೆ ಬಳಿ ನಡೆದಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಬೆಂಗಳೂರು : ಗ್ರಾಮಾಂತರ ಜಿಲ್ಲೆಯ ರಾಜಾನುಕುಂಟೆ ಸಮೀಪದ ಅದ್ದೇವಿಶ್ವನಾಥಪುರ ಗ್ರಾಮದಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆ ಪೋಷಕರ ಆಘಾತಕ್ಕೆ ಕಾರಣವಾಗಿದೆ. ಆಟವಾಡಿ ನಕ್ಕು ನಲಿಯಬೇಕಿದ್ದ ಕಂದಮ್ಮಗಳ ಬದುಕು ಬೆಸ್ಕಾಂ ಮತ್ತು ಮನೆ ಮಾಲೀಕರ ನಿರ್ಲಕ್ಷ್ಯಕ್ಕೆ ಕಮರಿಹೋಗಿದೆ.. ಅಷ್ಟೇ ಅಲ್ಲ ಇದು ಇದು ಜನರಿಗೂ ಒಂದು ಪಾಠವಾಗಿದೆ..
ಹೌದು.. ಕೊಟ್ರೇಶಿ ಮತ್ತು ಸುಧಾ ದಂಪತಿಯ ಮಕ್ಕಳಾದ 13 ವರ್ಷದ ಸಾನ್ವಿ ಹಾಗೂ 5 ವರ್ಷದ ಅಯಾನ್ ಆಸ್ಪತ್ರೆಯ ಹಾಸಿಗೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸೆಪ್ಟೆಂಬರ್ 20 ರಂದು ತಾಯಿ ಸುಧಾ ಅವರು ತರಕಾರಿ ತರಲು ಮನೆಯಿಂದ ಹೊರಗೆ ಹೋಗಿದ್ದ ವೇಳೆ ಘೋರ ದುರಂತವೊಂದು ಸಂಭವಿಸಿದೆ. ಮನೆಯಲ್ಲಿ ಅಕ್ಕ ಮತ್ತು ತಮ್ಮ ಇಬ್ಬರೇ ಇದ್ದರು. ಐದು ವರ್ಷದ ಮಗು ಅಯಾನ್ ಮೆಜರ್ಮೆಂಟ್ ಟೇಪ್ ಹಿಡಿದುಕೊಂಡು ಆಟವಾಡುತ್ತಾ ಮನೆಯ ಹೊರಗೆ ಬಂದಿದ್ದ. ಮನೆಯ ಪಕ್ಕದಲ್ಲೇ ಹಾದುಹೋಗಿದ್ದ 11 ಕೆವಿ ವಿದ್ಯುತ್ ಕಂಬದ ವೈರ್ಗೆ ಆ ಟೇಪ್ ತಗುಲಿದೆ. ತಕ್ಷಣವೇ ಹರಿದುಬಂದ ವಿದ್ಯುತ್ ಪ್ರವಾಹಕ್ಕೆ ಮಕ್ಕಳಿಬ್ಬರೂ ಭೀಕರವಾಗಿ ಸುಟ್ಟಿದ್ದಾರೆ..
ಈ ಘಟನೆಯಲ್ಲಿ 13 ವರ್ಷದ ಸಾನ್ವಿಯ ದೇಹದ ಶೇ. 80ರಷ್ಟು ಭಾಗ ಸುಟ್ಟುಹೋಗಿದ್ದು, ಬಲಗೈಯನ್ನು ಸಂಪೂರ್ಣವಾಗಿ ಕತ್ತರಿಸಲಾಗಿದೆ. ಅಷ್ಟೇ ಅಲ್ಲದೆ, ಆಕೆಯ ಕಾಲಿನ ಸ್ವಾಧೀನವೂ ಕಳೆದುಹೋಗಿದೆ. ಇತ್ತ ಐದು ವರ್ಷದ ಪುಟ್ಟ ಮಗು ಅಯಾನ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಇಬ್ಬರೂ ಮಕ್ಕಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. "ಅಮ್ಮಾ ನಮಗೇನೂ ಆಗಲ್ಲ ಅಲ್ವಾ?" ಎಂದು ಆ ಕಂದಮ್ಮಗಳು ನೋವಿನಿಂದ ಕೇಳುವ ಮಾತುಗಳು ಆ ತಾಯಿಯ ಹೃದಯವನ್ನು ಅಕ್ಷರಶಃ ಹಿಂಡುತ್ತಿವೆ. ಮಗಳ ಕೈಯಲ್ಲಿ ಪುಸ್ತಕ ಮತ್ತು ಪೆನ್ ಇರಬೇಕಾದ ಜಾಗದಲ್ಲಿ ಇಂದು ಬ್ಯಾಂಡೇಜ್ಗಳು ಕಾಣುತ್ತಿವೆ.
ಈ ದುರ್ಘಟನೆಗೆ ಸ್ಥಳೀಯ ಮನೆ ಮಾಲೀಕ ಸೋಮಶೇಖರ್ ಹಾಗೂ ಬೆಸ್ಕಾಂ (BESCOM) ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯ ಮೇಲ್ಭಾಗ ಅಥವಾ ಹತ್ತಿರದಲ್ಲೇ ಅಪಾಯಕಾರಿ ರೀತಿಯಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗಳ ಬಗ್ಗೆ ಮುಂಚಿತವಾಗಿ ಮನೆ ಮಾಲೀಕರಿಗೆ ದೂರು ನೀಡಿದ್ದರೂ, ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಇಷ್ಟೊಂದು ದೊಡ್ಡ ಅವಘಡ ನಡೆದು ಮಕ್ಕಳ ಸ್ಥಿತಿ ಗಂಭೀರವಾಗಿದ್ದರೂ, ಬೆಸ್ಕಾಂನ ಯಾವೊಬ್ಬ ಅಧಿಕಾರಿಯೂ ಇದುವರೆಗೆ ಬಂದು ಮಕ್ಕಳ ಆರೋಗ್ಯ ವಿಚಾರಿಸಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕ ಸೋಮಶೇಖರ್ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಿನಗಳೇ ಕಳೆದಿದ್ದರೂ, ಇದುವರೆಗೆ ಯಾವುದೇ ಗಂಭೀರ ಕ್ರಮ ಅಥವಾ ತನಿಖೆ ನಡೆದಿಲ್ಲ ಎಂಬುದು ಪೋಷಕರ ಅಳಲಾಗಿದೆ.
ಒಟ್ಟಾರೆಯಾಗಿ ಅಧಿಕಾರಿಗಳ ಒಂದು ಸಣ್ಣ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇಂದು ಒಂದು ಬಡ ಕುಟುಂಬದ ಬದುಕನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಅಮಾಯಕ ಮಕ್ಕಳು ಇಂದು ಆಸ್ಪತ್ರೆಯ ಬೆಡ್ ಮೇಲೆ ನರಳುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.