ರಾಜಧಾನಿ ಜಾನುವಾರು ಮಾಲೀಕರಿಗೆ ಶಾಕ್ : ರಸ್ತೆಗೆ ಹಸುಗಳನ್ನ ಬಿಟ್ಟರೆ ಬೀಳಲಿದೆ ಭಾರಿ ಫೈನ್
ರಾಜಧಾನಿ ರಸ್ತೆಗಳಲ್ಲಿ ಬಿಡಾಡಿ ಜಾನುವಾರುಗಳ ಹಾವಳಿಯಿಂದ ಉಂಟಾಗುತ್ತಿರುವ ಸಾರಿಗೆ ದಟ್ಟಣೆ ಹಾಗೂ ಸಾರ್ವಜನಿಕರ ಅಪಘಾತ ಭೀತಿಗೆ ಶಾಶ್ವತ ತಡೆ ನೀಡಲು ಬೆಂಗಳೂರು ಪೂರ್ವ ನಗರ ಪಾಲಿಕೆ ಈಗ ಭಾರಿ ಸಮರ ಸಾರಿದೆ. ಜಾನುವಾರುಗಳ ಮಾಲೀಕರಿಗೆ ಬಿಗ್ ಶಾಕ್ ನೀಡಲು ಮುಂದಾಗಿರುವ ಪಾಲಿಕೆ, ಕಟ್ಟು ನಿಟ್ಟಿನ ಸೂಚನೆ ನೀಡಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಬೆಂಗಳೂರು : ರಾಜಧಾನಿಯ ಸಾರ್ವಜನಿಕ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುವ ಹಾಗೂ ರಸ್ತೆ ಮಧ್ಯದಲ್ಲೇ ನಿಂತು ಸಾರಿಗೆ ಸಂಚಾರಕ್ಕೆ ಭಾರೀ ಅಡ್ಡಿಪಡಿಸುತ್ತಿರುವ ಬಿಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ಬೆಂಗಳೂರು ಪೂರ್ವ ನಗರ ಪಾಲಿಕೆಯು ಈಗ ಸಂಪೂರ್ಣ ಸಜ್ಜಾಗಿದೆ. ರಸ್ತೆಗಳಲ್ಲಿ ಜಾನುವಾರುಗಳನ್ನು ಮುಕ್ತವಾಗಿ ಬಿಟ್ಟು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವ ಜಾನುವಾರು ಮಾಲೀಕರಿಗೆ ಪಾಲಿಕೆ ಆಡಳಿತವು ಈಗ ಸರಣಿ ಶಾಕ್ ನೀಡಲು ನಿರ್ಧರಿಸಿದೆ.
ಹೈಡ್ರಾಲಿಕ್ ವಾಹನ ಕಾರ್ಯಾಚರಣೆಗೆ ಅಧಿಕೃತ ಚಾಲನೆ ನೀಡಿದ ಅಪರ ಆಯುಕ್ತರು
ಸಾರ್ವಜನಿಕರ ಸುರಕ್ಷತೆಯನ್ನು ಖಾತರಿಪಡಿಸುವ ಹಾಗೂ ನಗರದಲ್ಲಿ ಸುಗಮ ವಾಹನ ಸಂಚಾರಕ್ಕೆ ಹಾದಿ ಸುಗಮಗೊಳಿಸುವ ನಿಟ್ಟಿನಲ್ಲಿ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಜಾನುವಾರುಗಳನ್ನು ಸೆರೆಹಿಡಿಯುವ ಅತ್ಯಾಧುನಿಕ ಹೈಡ್ರಾಲಿಕ್ ವಾಹನಕ್ಕೆ ಚಾಲನೆ ನೀಡಿದ್ದಾರೆ. ರಸ್ತೆಗಳಲ್ಲಿ ಮಲಗುವ ಹಾಗೂ ಹಠಾತ್ತಾಗಿ ಅಡ್ಡಬರುವ ದನ, ಹಸು, ಕರು, ಎಮ್ಮೆ ಹಾಗೂ ಇತರ ಪ್ರಾಣಿಗಳಿಂದ ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ಮತ್ತು ಜಾನುವಾರುಗಳೆರಡರ ಜೀವಕ್ಕೂ ತೀವ್ರ ಅಪಾಯ ಉಂಟಾಗುತ್ತಿದೆ. ಇದನ್ನು ತಡೆಯಲು ವಿಶೇಷ ಕಾರ್ಯಾಚರಣೆ ತಂಡವನ್ನು ರಂಗಕ್ಕಿಳಿಸಲಾಗಿದೆ.
ಸೆರೆಹಿಡಿದ ಜಾನುವಾರುಗಳ ಸುರಕ್ಷಿತ ಸ್ಥಳಾಂತರ ಹಾಗೂ ಗೋಶಾಲೆಗಳ ನಿರ್ವಹಣೆ
ನಗರ ಪಾಲಿಕೆಯ ವಿಶೇಷ ಸಿಬ್ಬಂದಿಗಳು ರಸ್ತೆಗಳಲ್ಲಿ ಕಂಡುಬರುವ ಪ್ರತಿಯೊಂದು ಬಿಡಾಡಿ ಜಾನುವಾರನ್ನು ಅತ್ಯಂತ ಸುರಕ್ಷಿತವಾಗಿ ವಶಕ್ಕೆ ಪಡೆದು ನಗರದ ಜಾನುವಾರು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಿದ್ದಾರೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತ್ಯೇಕ ನಗರ ದನದ ದೊಡ್ಡಿ ನಿರ್ಮಾಣವಾಗುವವರೆಗೆ, ಈ ಪ್ರಾಣಿಗಳನ್ನು ಸದ್ಯಕ್ಕೆ ಕೆ.ಆರ್. ಮಾರ್ಕೆಟ್‌ನಲ್ಲಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ದನದ ದೊಡ್ಡಿಗೆ ತಲುಪಿಸಲಾಗುತ್ತದೆ. ಯಾವುದೇ ಮಾಲೀಕರಿಲ್ಲದೆ ರಸ್ತೆಯಲ್ಲೇ ಅಲೆಯುತ್ತಿರುವ ಪ್ರಾಣಿಗಳನ್ನು ಸರ್ಕಾರದ ನಿಯಮಾವಳಿಗಳ ಪ್ರಕಾರ ಅಧಿಕೃತ ಗೋಶಾಲೆಗಳಿಗೆ ಹಸ್ತಾಂತರಿಸಲಾಗುತ್ತದೆ.
ವಿಧಿಸಲಾಗುವ ದಂಡದ ವಿವರ ಮತ್ತು ನಿಯಮಾವಳಿಗಳು
ಕರ್ನಾಟಕ ಜಾನುವಾರು ಅತಿಕ್ರಮಣ ಅಧಿನಿಯಮ, 1966ರ ಅಧ್ಯಾಯ–III, ಕಲಂ 10ರ ಉಪಕಲಂ (1)ರ ಅನ್ವಯ ಹಾಗೂ ನಗರಾಭಿವೃದ್ಧಿ ಇಲಾಖೆಯ ನಿಯಮಗಳ ಪ್ರಕಾರ ಮಾಲೀಕರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ. ದನ, ಎತ್ತು, ಹಸು ಹಾಗೂ ಎಮ್ಮೆಗಳನ್ನು ರಸ್ತೆಗೆ ಬಿಟ್ಟರೆ ಮೊದಲ ಮೂರು ದಿನಗಳಿಗೆ ಅಥವಾ ಅದರ ಭಾಗಕ್ಕೆ ಪ್ರತಿ ಜಾನುವಾರಿಗೆ ₹600 ಮತ್ತು ಮೂರು ದಿನಗಳ ನಂತರ ಪ್ರತಿದಿನಕ್ಕೆ ₹300 ದಂಡ ಪಾವತಿಸಬೇಕಾಗುತ್ತದೆ. ಕರುಗಳಿಗೆ ಮೊದಲ ಮೂರು ದಿನಗಳಿಗೆ ₹300 ಹಾಗೂ ನಂತರ ಪ್ರತಿದಿನಕ್ಕೆ ₹200 ನಿಗದಿಪಡಿಸಲಾಗಿದೆ.
ಕುದುರೆ, ಹೆಣ್ಣು ಕುದುರೆ, ಶಸ್ತ್ರಚಿಕಿತ್ಸೆಗೊಳಗಾದ ಗಂಡು ಕುದುರೆ ಹಾಗೂ ಹೇಸರಗತ್ತೆಗಳ ಮಾಲೀಕರಿಗೆ ಮೊದಲ ಮೂರು ದಿನಗಳಿಗೆ ₹100 ಮತ್ತು ನಂತರದ ಪ್ರತಿ ದಿನಕ್ಕೆ ₹50 ದಂಡ ಇರಲಿದೆ. ಕತ್ತೆ ಅಥವಾ ಹಂದಿಗಳನ್ನು ರಸ್ತೆಗೆ ಬಿಟ್ಟರೆ ಮೊದಲ ಮೂರು ದಿನಗಳಿಗೆ ₹50 ಹಾಗೂ ನಂತರ ಪ್ರತಿದಿನಕ್ಕೆ ₹25 ದಂಡ ವಸೂಲಿ ಮಾಡಲಾಗುತ್ತದೆ. ಅದೇ ರೀತಿ ಕುರಿ, ಮೇಕೆ ಹಾಗೂ ಮರಿಗಳನ್ನು ಬಿಟ್ಟರೆ ಮೊದಲ ಮೂರು ದಿನಗಳಿಗೆ ಪ್ರತಿ ಪ್ರಾಣಿಗೆ ₹25 ದಂಡ ತೆರಬೇಕಾಗುತ್ತದೆ. ಮಾಲೀಕರು ನಿಗದಿತ ಸಂಪೂರ್ಣ ದಂಡದ ಮೊತ್ತವನ್ನು ಪಾವತಿಸಿದ ನಂತರವೇ ಅವರ ಜಾನುವಾರುಗಳನ್ನು ಮರಳಿ ಹಸ್ತಾಂತರಿಸಲಾಗುತ್ತದೆ.
ಕಾರ್ಯಾಚರಣೆಯ ವೇಳಾಪಟ್ಟಿ ಹಾಗೂ ಸಾರ್ವಜನಿಕ ಸಹಾಯವಾಣಿ
ಈ ನಿಯಂತ್ರಣ ಕಾರ್ಯಾಚರಣೆಯು ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ, ಪ್ರತಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಸತತವಾಗಿ ನಡೆಯಲಿದೆ. ಪದೇ ಪದೇ ಜಾನುವಾರುಗಳನ್ನು ರಸ್ತೆಗೆ ಬಿಡುವ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರುಗಳು ಕಂಡುಬಂದಲ್ಲಿ 'ಸಹಾಯ ಆ್ಯಪ್', ನಾಗರಿಕ ಸಹಾಯವಾಣಿ ಸಂಖ್ಯೆ 1533 ಅಥವಾ ಪಾಲಿಕೆ ನಿಯಂತ್ರಣ ಕೊಠಡಿಯ 9480685706 ಸಂಖ್ಯೆಗೆ ಕರೆ ಮಾಡಿ ತಕ್ಷಣವೇ ಮಾಹಿತಿ ನೀಡಬಹುದಾಗಿದೆ.